- ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾರ್ಷಿಕೋತ್ಸವ
ಮಕ್ಕಳು ಎಲ್ಲಾ ಚಟುವಟಿಕೆ, ಸ್ಪರ್ಧೆಗಳಲ್ಲೂ ಭಾಗವಹಿಸಬೇಕು. ಭಾಗವಹಿಸಿದ ಎಲ್ಲಾ ಮಕ್ಕಳು ಗೆದ್ದಂತೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ತಿಳಿಸಿದರು.
ಶುಕ್ರವಾರ ಅಳಲಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯಾವುದೇ ವೇದಿಕೆಗಳು ಸಿಕ್ಕಾಗ ಉಪಯೋಗಿಸಿಕೊಂಡರೆ ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರಬರುತ್ತದೆ. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶಗಳು ಕಡಿಮೆ ಇತ್ತು. ಈಗ ತಂತ್ರಜ್ಞಾನ ಮುಂದುವರಿದಿದೆ. ಸರ್ಕಾರ ಶಿಕ್ಷಣಕ್ಕೆ ಎಲ್ಲಾ ಪ್ರೋತ್ಸಾಹ ನೀಡುತ್ತಿದೆ. ಉನ್ನತ ಶಿಕ್ಷಣ ಪಡೆಯಲು ಅವಕಾಶಗಳು ಹೆಚ್ಚಾಗಿದೆ. ಸಿಕ್ಕ ಅವಕಾಶ ಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡು ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬರಬೇಕು. ಕಷ್ಟ ಪಟ್ಟು ಶಿಕ್ಷಣ ನೀಡಿದ ತಂದೆ, ತಾಯಿಗಳಿಗೆ ಕೀರ್ತಿ ತರಬೇಕು. ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಅನೇಕ ಮಕ್ಕಳು ಇಂದು ಉನ್ನತ ಸ್ಥಾನ ತಲುಪಿಸಿದ್ದಾರೆ ಎಂದರು.ಅತಿಥಿಯಾಗಿದ್ದ ಮೆಣಸೂರು ಗ್ರಾಪಂ ಸದಸ್ಯ ಡಿ.ಆರ್.ಶ್ರೀನಾಥ್ ಮಾತನಾಡಿ, ಸರ್ಕಾರಿ ವಸತಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.ಮುರಾರ್ಜಿ ದೇಸಾಯಿ ವಸತಿ ಶಾಲೆ ಕಳೆದ ಹಲವು ವರ್ಷದಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೇ ಎನ್.ಆರ್.ಪುರ ಮೊರಾರ್ಜಿ ಶಾಲೆಗೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಸಹ ಕಲಿಸುತ್ತಿದೆ. ಶಿಕ್ಷಣ,ಊಟದ ವ್ಯವಸ್ಥೆ, ಪಠ್ಯೇತರ ಚಟುವಟಿಕೆ,ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮೆಣಸೂರು ಗ್ರಾಪಂ ಅಧ್ಯಕ್ಷೆ ರಚಿತಾ ರಮೇಶ್ ವಹಿಸಿದ್ದರು.ಅತಿಥಿಗಳಾಗಿ ಮೆಣಸೂರು ಗ್ರಾಪಂ ಸದಸ್ಯೆ ಬಿಂದು ಸತೀಶ್, ಮೊರಾರ್ಜಿ ಶಾಲೆಯ ಪ್ರಾಂಶುಪಾಲೆ ಪೂರ್ಣಿಮಾ, ಪೋಷಕ ಪರಿಷತ್ ಅಧ್ಯಕ್ಷ ಸುರೇಶ್, ಜ್ವಾಲಾ ಮಾಲಿನಿ ಬಾಲಿಕಾ ಪ್ರೌಢ ಶಾಲೆ ನಿವೃತ್ತ ದೈಹಿಕ ಶಿಕ್ಷಕ ಪವನಂಜಯ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಅಜ್ಜಪ್ಪ, ಸಿ.ಆರ್.ಪಿ ದೇವರಾಜ್ ಇದ್ದರು.
ಪ್ರಾಂಶುಪಾಲೆ ಪೂರ್ಣಿಮ ಸ್ವಾಗತಿಸಿದರು. ಪೂಜಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮಹಾತ್ಮಗಾಂಧಿ ವಂದಿಸಿದರು.ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.