- ಯಶವಂತ ರಾವ್ ಹಿನ್ನೆಲೆ ಏನೆಂಬುದು ನೋಡಿಕೊಳ್ಳಲಿ: ದಿನೇಶ್ ಶೆಟ್ಟಿ ಸಲಹೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಶಾಮನೂರುರಂತಹ ದೊಡ್ಡ ಕುಟುಂಬದ ಬಗ್ಗೆ ಮಾತನಾಡಿದರೆ ದೊಡ್ಡವನಾಗುವ ಭ್ರಮೆಯಲ್ಲಿರುವ ಯಶವಂತ ರಾವ್ ಜಾಧವ್ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸೋತರೂ ತಾನು ಹೇಗೆ ಶ್ರೀಮಂತನಾದೆ, ತಮ್ಮ ಹಿನ್ನೆಲೆ ಏನೆಂಬುದನ್ನೂ ಮೊದಲು ಬಹಿರಂಗಪಡಿಸಲಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟದ ಅಂಗಡಿಯಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದ ಯಶವಂತ ರಾವ್ ಅದರಿಂದಲೇ ಶ್ರೀಮಂತರಾಗಿದ್ದಾ ಅಥವಾ ಅಕ್ರಮ ಮದ್ಯ ಮಾರಾಟ ಮಾಡಿ ಶ್ರೀಮಂತರಾಗಿದ್ದಾ? ತಮ್ಮ ಇತಿಹಾಸ ಮರೆತು, ಅನ್ಯರ ಇತಿಹಾಸದತ್ತ ಯಶವಂತ ರಾವ್ ಬೊಟ್ಟು ಮಾಡುತ್ತಿದ್ಧಾರೆ. ತಾನು ನಡೆದು ಬಂದ ಹಾದಿ ತಿರುಗಿ ನೋಡಲಿ ಎಂದರು.ಮದ್ಯದಂಗಡಿಯಲ್ಲಿ ಮದ್ಯ ಪೂರೈಸುವ ವ್ಯಕ್ತಿ ಹೇಗೆ ಕೋಟ್ಯಂತರ ರು. ಆಸ್ತಿ ಗಳಿಸಲು ಸಾಧ್ಯ? ದಾವಣಗೆರೆ ಬಹುತೇಕ ಕಡೆ ಇಂತಹ ವ್ಯಕ್ತಿಯ ನಿವೇಶನಗಳು ಹೇಗೆ ಬಂದವು? ಪ್ರತಿಷ್ಟಿತ ಬಡಾವಣೆಯಲ್ಲಿ ರಾಕೇಶ ಜಾಧವ್ ಕಾಂಪ್ಲೆಕ್ಸ್ ಅಂತಾ ಕಟ್ಟಿದ್ದರ ಹಣದ ಮೂಲ ಯಾವುದು? ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರರ ಗಾರ್ಡ್ ಆಗಿರುವ ಯಶವಂತ ರಾವ್ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೊದಲಿನಿಂದಲೂ ಹಿಂದುಗಳಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ ಎಂದು ದಿನೇಶ್ ಆರೋಪಿಸಿದರು.
ಹಿಂದುತ್ವದ ಹೋರಾಟದಲ್ಲಿ ತೊಡಗಿದ್ದ ಅನೇಕರನ್ನು ಮೂಲೆಗುಂಪು ಮಾಡಿ, ತಾನು ಅಧಿಕಾರಕ್ಕೆ ಬಂದು ಪಕ್ಷದ ನಿಷ್ಟಾವಂತರವನ್ನು ಕಡೆಗಣಿಸಿದ್ದು ಎಷ್ಟು ಸರಿ? ತನ್ನ ಮಗ ರಾಕೇಶ ಜಾಧವ್‌ಗೆ ಪಾಲಿಕೆ ಚುನಾವಣೆಗೆ ನಿಲ್ಲಿಸುವ ಬದಲಿಗೆ ಅದೇ ಬಿಜೆಪಿಯ ಸಾಮಾನ್ಯ ಬಡ ಕಾರ್ಯಕರ್ತರಿಗೆ ಯಾಕೆ ಅವಕಾಶ ಕೊಡಲಿಲ್ಲ? ತಾನು ಮಾತ್ರ ಸಜ್ಜನ ಎಂಬಂತೆ ನಮ್ಮ ಜಿಲ್ಲೆಯವರೇ ಅಲ್ಲದ, ನಮ್ಮ ಜಿಲ್ಲೆಯ ರೈತರ ಜಮೀನು ಕಬಳಿಸಿದ ಚೋರ ಗುರುವಿನ ಶಿಷ್ಯ ಯಶವಂತ ರಾವ್ ಪಕ್ಷಕ್ಕೆ ನೀಡಿದ ಕೊಡುಗೆ ಏನೆಂಬುದೂ ಅದೇ ಬಿಜೆಪಿಗರು ಪ್ರಶ್ನಿಸುತ್ತಿದ್ದಾರೆ ಎಂದು ಕುಟುಕಿದರು.ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ನಗರ, ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷದಿಂದ ಉತ್ತಮ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯ ಸಹಿಸಲಾಗದೇ ಯಶವಂತ ರಾವ್ ಮಾತಾಡುತ್ತಿರುವುದು ಸರಿಯಲ್ಲ. ನಾನು ಶಾಮನೂರು ಕುಟುಂಬದ ಚಮಚಾಗಿರಿ ಮಾಡಿಕೊಂಡು ಬದುಕುತ್ತಿರುವುದಾಗಿ ಅವಹೇಳನವಾಗಿ ಮಾತನಾಡಿರುವ ಯಶವಂತ ರಾವ್ ತಮ್ಮ ಹಿನ್ನೆಲೆ ಬಗ್ಗೆ ಬಹಿರಂಗಪಡಿಸಲಿ ಎಂದು ದಿನೇಶ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ ಜಾಧವ್, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ, ಪಾಲಿಕೆ ವಿಪಕ್ಷ ಮಾಜಿ ನಾಯಕ ಎ.ನಾಗರಾಜ, ಮಂಗಳಮ್ಮ ಇತರರು ಇದ್ದರು.- - -
(ಕೋಟ್)ಕೊಡ, ಹಂಡೆ, ತೊಟ್ಟಿಗಳಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ, ಮಾರಾಟ ಮಾಡಿ ಶ್ರೀಮಂತರಾದ ವ್ಯಕ್ತಿ ಮತ್ತೊಬ್ಬರ ಬಗ್ಗೆ ಹಗುರ ಮಾತನಾಡುವುದು ಸರಿಯಲ್ಲ. ಹಿಂದುತ್ವದ ಹೆಸರಿನಲ್ಲಿ ಚಿನ್ನ, ಬೆಳ್ಳಿ, ನಗದು ಸಂಗ್ರಹಿಸಿ, ಅಯೋಧ್ಯೆಗೆ ಕೊಟ್ಟೆ ಎನ್ನುವವರು ಹುತಾತ್ಮ ಹಿಂದು ಹೋರಾಟಗಾರರ ಸಂತ್ರಸ್ಥ ಕುಟುಂಬಗಳಿಗೆ ಯಾಕೆ ಕೊಡುವ ಮನಸ್ಸು ಮಾಡಲಿಲ್ಲ.- ದಿನೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ, ದಾವಣಗೆರೆ.
- - --3ಕೆಡಿವಿಜಿ2: ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ಮುಖಂಡ, ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.