ಭೂಗಳ್ಳರ ಪರವಾಗಿ ತಾಲೂಕು ಆಡಳಿತ ಕೆಲಸ: ಡಾ.ಕೆ.ಅನ್ನದಾನಿ

KannadaprabhaNewsNetwork |  
Published : May 26, 2026, 01:30 AM IST
೨೫ಕೆಎಂಎನ್‌ಡಿ-೩ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿದರು. | Kannada Prabha

ಸಾರಾಂಶ

ಮಳವಳ್ಳಿ ತಾಲೂಕು ಆಡಳಿತ ಭೂಗಳ್ಳರ ಪರವಾಗಿ ಕೆಲಸ ಮಾಡುತ್ತಿದೆ. ೩೦೫ ಎಕರೆ ಸರ್ಕಾರಿ ಭೂಮಿ ಕಬಳಿಕೆ ಆರ್‌ಟಿಸಿ ವಜಾ ಸಂಬಂಧ ಇದುವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದಕ್ಕೆ ಉಪ ಲೋಕಾಯುಕ್ತರು ತಹಸೀಲ್ದಾರ್‌ಗೆ ಛೀಮಾರಿ ಹಾಕಿರುವುದೇ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿ ತಾಲೂಕು ಆಡಳಿತ ಭೂಗಳ್ಳರ ಪರವಾಗಿ ಕೆಲಸ ಮಾಡುತ್ತಿದೆ. ೩೦೫ ಎಕರೆ ಸರ್ಕಾರಿ ಭೂಮಿ ಕಬಳಿಕೆ ಆರ್‌ಟಿಸಿ ವಜಾ ಸಂಬಂಧ ಇದುವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದಕ್ಕೆ ಉಪ ಲೋಕಾಯುಕ್ತರು ತಹಸೀಲ್ದಾರ್‌ಗೆ ಛೀಮಾರಿ ಹಾಕಿರುವುದೇ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಟೀಕಿಸಿದರು.

ತಾಲೂಕಿನಲ್ಲಿ ೮೦೦ ಎಕರೆ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕ್ರಮ ವಹಿಸುವಂತೆ ನಾನು ಹಲವಾರು ಬಾರಿ ಮನವಿ ಮಾಡಿದ್ದೆ. ಅದಕ್ಕೆ ಅಧಿಕಾರಿಗಳಿಂದ ಸ್ಪಂದನೆ ಸಿಗಲಿಲ್ಲ. ಕೊನೆಗೆ ಸಿದ್ದಾಚಾರಿ ಎಂಬುವರ ಮೂಲಕ ಲೋಕಾಯುಕ್ತರಿಗೆ ದೂರು ನೀಡಿದ್ದೆ. ಅವರೇ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿತಗೊಂಡಿದೆ. ಭೂಗಳ್ಳರಿಗೆ ಕುಮ್ಮಕ್ಕು ನೀಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಪಂಚಾಯ್ತಿಗಳಲ್ಲಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿದ್ದರೂ ಜಿಪಂ ಸಿಇಒ, ಜಿಪಂ ಉಪ ಕಾರ್ಯದರ್ಶಿಗಳು, ತಾಪಂ ಇಒ ಕಣ್ಮುಚ್ಚಿ ಕುಳಿತಿದ್ದಾರೆ. ಹಲಗೂರು ಗ್ರಾಪಂನಲ್ಲಿ ೧೧.೫೦ ಲಕ್ಷ ರು. ತೆರಿಗೆ ಹಣ ದುರುಪಯೋಗವಾಗಿದ್ದರೂ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿದ್ದರೂ ಅವರೂ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎನ್‌ಓಸಿ ಕೂಡ ಸರಿಯಾಗಿ ಜನರಿಗೆ ಸಿಗುತ್ತಿಲ್ಲವೆಂದು ದೂಷಿಸಿದರು.

ಪುರಸಭೆಯ ಆವರಣದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳೂ ನಡೆದಿಲ್ಲ. ಕೇಂದ್ರ ಸಚಿವರು ನೀಡಿದ ೧೦ ಲಕ್ಷ ರು. ಹಣದಲ್ಲಿ ಒಂದು ಕಾಪೌಂಡ್ ನಿರ್ಮಾಣವಾಗಿರುವುದು ಬಿಟ್ಟರೆ ಬೇರಾವ ಕೆಲಸಗಳನ್ನು ಮಾಡಿಲ್ಲ. ೪ ವರ್ಷದಿಂದ ಅಭಿವೃದ್ಧಿ ನೆನೆಗುದಿಗೆ ಬಿದ್ದಿರುವುದಕ್ಕೆ ಹಾಲಿ ಶಾಸಕರ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಮಳವಳ್ಳಿ ತಾಲೂಕು ಕಾವೇರಿ ಜಲಾನಯನ ಪ್ರದೇಶದ ಕೊನೆಯ ಭಾಗವಾಗಿದೆ. ಈ ಭಾಗದ ಜನರಿಗೆ ಸಕಾಲದಲ್ಲಿ ನೀರನ್ನು ಒದಗಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಈ ಭಾಗದ ಕಾಲುವೆಗಳ ದುರಸ್ತಿ ಕಾರ್ಯ ಯಾವಾಗ ಆಗಲಿವೆ ಎಂಬ ಮಾಹಿತಿಯನ್ನು ರೈತರಿಗೆ ನೀಡದೆ, ನೀರನ್ನೂ ಹರಿಸದೆ ವಂಚಿಸಲಾಗುತ್ತಿದೆ. ಕೊನೆಯ ಭಾಗದ ಕೆರೆ-ಕಟ್ಟೆಗಳನ್ನು ತುಂಬಿಸಿಲ್ಲ. ಎಲ್ಲಾ ಕೆರೆಗಳು ನೀರಿಲ್ಲದೆ ಬರಿದಾಗಿವೆ ಎಂದು ಆರೋಪಿಸಿದರು.

ಜಲಜೀವನ್ ಮಿಷನ್ ಯೋಜನೆಯು ತಾಲೂಕಿನ ಯಾವ ಗ್ರಾಮದಲ್ಲೂ ಸಮರ್ಪಕವಾಗಿ ಜಾರಿಯಾಗಿಲ್ಲ. ಇದಕ್ಕಾಗಿ ರಸ್ತೆ ಅಗೆದಿರುವುದನ್ನು ಸರಿಪಡಿಸಲಾಗಿಲ್ಲ ಇದೊಂದು ಅಕ್ರಮ ಯೋಜನೆಯಾಗಿದೆ. ೧೮೦ ಕೋಟಿ ರು. ವೆಚ್ಚದ ಯೋಜನೆಯಾಗಿದ್ದು, ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿಲ್ಲ, ಕೊಳಾಯಿ ಸಂಪರ್ಕಗಳೆಲ್ಲಾ ಮುರಿದುಹೋಗಿವೆ. ಇದರಿಂದ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಯಾವ ಪ್ರಯತ್ನವನ್ನೂ ನಡೆಸದೆ ಕೈಚೆಲ್ಲಿ ಕುಳಿತಿದ್ದಾರೆ ಎಂದು ಆರೋಪಿಸಿದರು.

ತಾಲೂಕಿನ ಕನಕಭವನ ಮತ್ತು ಬಸವ ಭವನ ನಿರ್ಮಾಣ ಮಾಡುವಲ್ಲಿ ಶಾಸಕರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕಳೆದ ೩ ವರ್ಷಗಳಿಂದ ಕಾಮಗಾರಿ ಆರಂಭ ಮಾಡುತ್ತಿಲ್ಲ. ಕನಕ ಭವನ ಮೊದಲ ಅಂತಸ್ತಿಗೆ ನಿಂತಿದ್ದರೆ, ಬಸವ ಭವನ ಪಿಲ್ಲರ್ ಹಂತಕ್ಕೆ ಬಂದು ನಿಂತಿದೆ. ತಾಲೂಕಿನಲ್ಲಿ ಸಿಎಸ್‌ಆರ್ ನಿಧಿಯಿಂದ ೮ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಹಣ ಮಂಜೂರಾಗಿ ಕಾಮಗಾರಿಗೆ ಸಂಬಂಧಿಸಿದ ಸಾಮಗ್ರಿಗಳು ರಸ್ತೆಯಲ್ಲಿ ಬಿದ್ದಿವೆ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಆಕ್ಷೇಪದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಕುಮಾರಸ್ವಾಮಿ ಅವರಿಗೆ ಹೆಸರು ಬರುತ್ತದೆಂಬ ಕಾರಣಕ್ಕೆ ಕಾಮಗಾರಿ ನಡೆಸದಂತೆ ತಡೆಯಲಾಗಿದೆ ಎಂದು ದೂರಿದರು.

ಆಶ್ರಯ ಬಡಾವಣೆಯ ನಾಮಫಲಕ ಒಡೆದುಹಾಕಿರುವುದಲ್ಲದೆ, ಅದರ ಅಭಿವೃದ್ಧಿಗೂ ಅಡ್ಡಗಾಲು ಹಾಕುವ ಮೂಲಕ ಹೊಟ್ಟೆಕಿಚ್ಚಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸಾಮಾಜಿಕ ಸಂಘಟನೆಗಳು, ಸಂಸ್ಥೆಗಳು ಸಾರ್ವಜನಿಕರ ಪರ ಕೆಲಸ ಮಾಡುವ ಸಂಬಂಧ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಶಾಸಕರೇ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ. ತಾಲೂಕಿನಲ್ಲಿ ಸಾರ್ವಜನಿಕರ ಕೆಲಸ ಮಾಡುವಂತೆ ಅಧಿಕಾರಿಗಳನ್ನು ಪ್ರಶ್ನೆ ಮಾಡುವುದೇ ದೊಡ್ಡ ಅಪರಾಧವಾಗಿದೆ. ಶಾಸಕರು ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಹನುಮಂತು, ಶ್ರೀಧರ್, ಸಿದ್ದಾಚಾರಿ, ಶಂಕರ್, ಚೇತನ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಯಾಣಿಕರ ತಂಗುದಾಣಕ್ಕೆ ಶಾಸಕ ಬಾಲಕೃಷ್ಣ ಭೂಮಿಪೂಜೆ
ಕೇವಲ ಓದುಗರ ಪ್ರೀತಿ ಬೆಂಬಲವೇ ಟೀಚರ್ ಪತ್ರಿಕೆಯ ಬಂಡವಾಳ