ಮಂಜುನಾಥ ಕೆ.ಎಂ
ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಸಿರುಗುಪ್ಪ ತಾಲೂಕು ಘಟಕದ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಕನ್ನಡ ಭಾಷಾ ಪ್ರಿಯರು ಸಕಲ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡದ ತೇರು ಎಳೆಯಲು ಜಿಲ್ಲೆಯ ಸಾಹಿತ್ಯಪ್ರಿಯರು, ಕನ್ನಡಾಭಿಮಾನಿಗಳು ಸೇರಿದಂತೆ ಗಡಿನಾಡು ಹಾಗೂ ಆಂಧ್ರಪ್ರದೇಶದಲ್ಲಿ ನೆಲೆಸಿರುವ ಕನ್ನಡಿಗರು ಸಹ ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ.ಶಾಸಕರಿಂದ ಸಮ್ಮೇಳನಕ್ಕೆ ಚಾಲನೆ: ಸಿರುಗಪ್ಪ ನಗರದ ನಿಟ್ಟೂರು ನರಸಿಂಹ ಮೂರ್ತಿ ಬಯಲು ಜಾಗದಲ್ಲಿ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಿಸಲಾಗಿದೆ. ಫೆ.15ರಂದು ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ, ಪರಿಷತ್ತಿನ ಧ್ವಜಾರೋಹಣ ನೆರವೇರಲಿದೆ. ಬಳಿಕ ಕನ್ನಡ ನಾಡದೇವಿ ಭುವನೇಶ್ವರಿಯ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಪ್ಯಾಟಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ಸಾಹಿತ್ಯ ಸಮ್ಮೇಳನ ವೇದಿಕೆಯಿರುವ ಅಭಯಾಂಜನೇಯ ದೇವಸ್ಥಾನದವರೆಗೆ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡು ಮೆರುಗು ನೀಡಲಿವೆ.
ಕವಿಗೋಷ್ಠಿ, ಸಾಹಿತ್ಯಗೋಷ್ಠಿಗಳು: ಸಮ್ಮೇಳನದ ಉದ್ಘಾಟನೆ ಸಮಾರಂಭದ ಬಳಿಕ ಸಾಹಿತ್ಯ ಗೋಷ್ಠಿಗಳು ಶುರುವಾಗಲಿವೆ. ಕನ್ನಡ ಸಾಹಿತ್ಯಕ್ಕೆ ಸಿರುಗುಪ್ಪ ತಾಲೂಕಿನ ಕೊಡುಗೆ ಕುರಿತು ಉಪನ್ಯಾಸ ಕೆ.ಗಾದಿಲಿಂಗಪ್ಪ ವಿಚಾರ ಮಂಡಿಸುವರು. ಸಿರುಗುಪ್ಪ ತಾಲೂಕಿನ ಜಾನಪದ ಸೊಗಸು ಕುರಿತು ಸಾಹಿತಿ ನಾ.ಮ. ಮರುಳಾರಾಧ್ಯ ಹಾಗೂ ಸಿರುಗುಪ್ಪ ತಾಲೂಕಿನ ಐತಿಹಾಸಿಕ ಮಹತ್ವ ಕುರಿತು ಬಿ.ಚಂದ್ರಶೇಖರ ವಿಚಾರ ಮಂಡಿಸುವರು. ಬಳಿಕ ಜರುಗುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಲೇಖಕ ಡಾ.ದಸ್ತಗೀರಸಾಬ್ ದಿನ್ನಿ ವಹಿಸಲಿದ್ದಾರೆ. ಜಿಲ್ಲೆಯ ಕವಿಗಳಾದ ಕುರುವಳ್ಳಿ ತಿಮ್ಮಯ್ಯ, ಅರ್ಪಿತಾ ಕುಲಕರ್ಣಿ, ಮರೇಗೌಡ ಶಾರದಾ ಪತ್ತಾರ, ಆರ್.ಪಿ. ಮಂಜುನಾಥ, ಉಷಾ ದಳವಾಯಿ, ಪರಶುರಾಮ, ಬಸಮ್ಮ ಹಿರೇಮಠ, ಎನ್.ಎಲ್.ಲಕ್ಷ್ಮಣ ಸೇರಿದಂತೆ 20ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುವರು. ಸಂಜೆ ಜರುಗುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್ ಭಾಗವಹಿಸಿ, ಸಮಾರೋಪ ಭಾಷಣ ಮಾಡುವರು. ಡಾ.ಮಧುಸೂದನ್ ಕಾರಿಗನೂರು ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕರಾದ ಎಂ.ಎಸ್. ಸೋಮಲಿಂಗಪ್ಪ, ಟಿ.ಎಂ. ಚಂದ್ರಶೇಖರಯ್ಯ, ಚೊಕ್ಕಬಸವನಗೌಡ ಮತ್ತಿತರರ ಗಣ್ಯರು ಸಮಾರೋಪದಲ್ಲಿ ಪಾಲ್ಗೊಳ್ಳವರು. ಇದೇ ವೇಳೆ ರೈತ ಹೋರಾಟಗಾರ ಜಿ.ಪುರುಷೋತ್ತಮಗೌಡ, ಆಂಧ್ರಪ್ರದೇಶದ ಆದೋನಿಯ ಲಕ್ಷ್ಮಿ ನರಸಮ್ಮ, ವಂದವಾಗಲಿ ಪೊಂಪಯ್ಯಸ್ವಾಮಿ, ಹನುವಾಳು ಗಿಡ್ಡಯ್ಯ, ಹೊಳಗುಂದ ಜಿ.ದೊಡ್ಡಬಸಪ್ಪ, ಬದನೆಹಾಳ್ ಆರ್.ವೀರಭದ್ರಗೌಡ, ಹರಿವಾಣದ ಯು.ಶ್ರೀನಿವಾಸಮೂರ್ತಿ, ಬ್ರಹ್ಮಯ್ಯಾಚಾರ್, ರಾಜಾ ಪಂಪನಗೌಡ, ನರಸಿಂಹ ಆಚಾರ್ಯ ಅವರಿಗೆ ಸನ್ಮಾನಿಸಲಾಗುವುದು. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಮ್ಮೇಳನ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರಕಾಶಕರಿಂದ ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಿರುಗುಪ್ಪ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆ ಸೇರಿದಂತೆ ಆಂಧ್ರಪ್ರದೇಶದ ಅನೇಕ ಊರುಗಳಿಂದ ಕನ್ನಡಪ್ರಿಯರು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡುವೆ ಎನ್ನುತ್ತಾರೆ ಸಿರುಗುಪ್ಪ ಕಸಾಪ ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು.