ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಘಟಕದ ವತಿಯಿಂದ ಡಿ.28 ರಂದು ಕೊಯ್ಯೂರಿನಲ್ಲಿ ತಾಲೂಕಿನ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಘಟಕದ ವತಿಯಿಂದ ಡಿ.28 ರಂದು ಕೊಯ್ಯೂರಿನಲ್ಲಿ ತಾಲೂಕಿನ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಘಟಕದ ವತಿಯಿಂದ ಇತ್ತೀಚೆಗೆ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಸಮಾಲೋಚನಾ ಸಭೆ ನಡೆಯಿತು.
ಶಾಲಾ ಕಾಲೇಜುಗಳಲ್ಲಿ ಸರಣಿ ಉಪನ್ಯಾಸ ಮಾಲಿಕೆಗಳ ಆಯೋಜನೆ, ರಾಷ್ಟ್ರ ಕವಿಗಳ ಸಂಸ್ಮರಣೆ, ಹಲವಾರು ಕೃತಿಕಾರರ ಕೃತಿಗಳ ಬಿಡುಗಡೆಗೆ ವೇದಿಕೆ ಇತ್ಯಾದಿಯಾಗಿ ನಿರಂತರ ಕಾರ್ಯಕ್ರಮಗಳನ್ನು ಕಸಾಪ ತಾಲೂಕು ಘಟಕ ಆಯೋಜಿಸಿಕೊಂಡು ಬಂದಿದೆ. ಲಭ್ಯ ಸಂಪನ್ಮೂಲದ ಮಿತಿಯೊಳಗೆ ಆಡಂಬರಗಳಿಗೆ ಅವಕಾಶ ಕೊಡದೆ ಅರ್ಥ ಪೂರ್ಣವಾಗಿ ಚಟುವಟಿಕೆಗಳನ್ನು ಮಾಡುತ್ತಾ ಬರಲಾಗಿದೆ. ಇದೇ ಮಾದರಿ ಅನುಸರಿಸಿ ಈ ಬಾರಿಯ ತಾಲೂಕು ಸಮ್ಮೇಳನವನ್ನು ಅರ್ಥವತ್ತಾಗಿ ನಡೆಸಲಾಗುವುದು ಎಂದು ಸಾಮೂಹಿಕ ನಿರ್ಧಾರಕ್ಕೆ ಬರಲಾಯಿತು. ಈ ಹಿಂದಿನ ಸಮ್ಮೇಳನಗಳ ಅಧ್ಯಕ್ಷರಾಗಿದ್ದವರ ಮಾರ್ಗದರ್ಶನ, ಶಾಸಕರೂ ಸೇರಿ ಜನಪ್ರತಿನಿಧಿಗಳನ್ನೊಳಗೊಂಡಂತೆ ಸಲಹಾ ಸಮಿತಿ ರಚಿಸಲಾಗುತ್ತದೆ. "ಶಿಕ್ಷಣ -ಸಾಹಿತ್ಯ- ಸಂಸ್ಕೃತಿ " ವಿಷಯದಲ್ಲಿ ಚಾವಡಿ ಚಿಂತನೆ, ತಾಲೂಕಿನ ಕತೆಗಾರರಿಂದ ಕಾರ್ಡಿನಲ್ಲಿ ಕತೆ ಬರೆಸಿ ಆಯ್ಕೆ ಮಾಡಿದ ಕತೆಗಾರರನ್ನು ಕರೆಸಿ "ಕತೆಗೊಮ್ಮೆ ಕಿವಿಗೊಡೋಣ " ಎಂಬ ಹೊಸ ಪ್ರಯೋಗ, ಹಿರಿಯ ಕವಿಗಳು, ಯುವ ಮತ್ತು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಕವನ ಸ್ಪರ್ಧೆ ಏರ್ಪಡಿಸಿ ಆಯ್ಕೆಯಾದ ಕವಿತೆಯನ್ನು ಗೋಷ್ಠಿಯಲ್ಲಿ ವಾಚಿಸಲು ಅವಕಾಶ ನೀಡುವುದು, ಎಂದಿನಂತೆ ಚಾರುಮುಡಿ ಸ್ಮರಣ ಸಂಚಿಕೆ ಹೊರತರುವುದು, ಸಾಹಿತ್ಯ ಪ್ರೋತ್ಸಾಹ ನೀಡುವ ಗಣ್ಯ ದಾನಿಗಳನ್ನೇ ಉದ್ಘಾಟನೆ ಮತ್ತು ಸಮಾರೋಪಕ್ಕೆ ಅತಿಥಿಗಳಾಗಿ ಬರಮಾಡಿಕೊಳ್ಳುವುದು, ಖ್ಯಾತ ಸಾಹಿತಿಗಳಿಂದ ದಿಕ್ಸೂಚಿ ಮತ್ತು ಸಮಾರೋಪ ನುಡಿ, ಪುಸ್ತಕ ಬಿಡುಗಡೆಗೆ ಅಪೇಕ್ಷಿಸುವವರಿಗೆ ಅವಕಾಶ ಇತ್ಯಾದಿ ವಿಷಯಗಳನ್ನು ನಿರ್ಧರಿಸಲಾಯಿತು. ಎಂದಿನಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದರಿಗೆ ಸನ್ಮಾನ, ಪುಸ್ತಕ ಪ್ರದರ್ಶನ, ಮಾರಾಟ ಮಳಿಗೆ, ಸಮ್ಮೇಳನದ ಇಡೀ ದಿವಸ ಮಧ್ಯಂತರ ವೇಳೆಯಲ್ಲಿ ಭಾವಗೀತೆ ಸಹಿತ ಆಕರ್ಷಕ ಸಾಂಸ್ಕ್ರತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಸ್ಥಳೀಯ ಪ್ರತಿಭೆಗಳಿಗೆ ಮತ್ತು ಆಸಕ್ತರಿಗೆ ಅವಕಾಶ ನೀಡಲಾಗುತ್ತದೆ. ಸಮ್ಮೇಳನ ಸಂಯೋಜನಾ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರಾಗಿ ಅಶೋಕ್ ಕುಮಾರ್ ಅಗ್ರಸಾಲೆ, ಕಾರ್ಯಾಧ್ಯಕ್ಷರಾಗಿ ಮೋಹನ ಗೌಡ ಭಂಡಾರಿಕೋಡಿ ಮತ್ತು ರಾಧಾಕೃಷ್ಣ ತಚ್ಚಮೆ, ಪ್ರಧಾನ ಸಂಚಾಲಕರಾಗಿ ದಾಮೋದರ ಗೌಡ ಬೆರ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಗೌಡ ಪಾಂಬೇಲು, ಕೋಶಾಧ್ಯಕ್ಷರಾಗಿ ಸುಧಾಕರ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಕೇಶವ ಗೌಡ ಕೋಂಗುಜೆ, ಪ್ರ. ಸಂಯೋಜಕರಾಗಿ ರಾಮಚಂದ್ರ ದೊಡಮನಿ ಇವರು ಆಯ್ಕೆಯಾದರು.
ಉಳಿದಂತೆ ಐದು ದಿನಗಳ ಅಂತರದಲ್ಲಿ ಸಮ್ಮೇಳನ ನಡೆಯುವ ಕೊಯ್ಯೂರಿನಲ್ಲೇ ವಿಸ್ತೃತ ಸಭೆ ನಡೆಸಿ ಸಮಿತಿಗೆ ಹೆಚ್ಚುವರಿ ಪದಾಧಿಕಾರಿಗಳ ಸೇರ್ಪಡೆ, ಹಾಗೂ ವಿವಿಧ ಉಪಸಮಿತಿಗಳ ಸಂಚಾಲಕರು ಆಯ್ಕೆ ನಡೆಸಲಾಗುತ್ತದೆ. ಕಸಾಪ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಯದುಪತಿ ಗೌಡ, ಹೋಬಳಿ ಅಧ್ಯಕ್ಷ ಡಾ. ದಿವ ಕೊಕ್ಕಡ, ಕೊಕ್ಕಡ ಹೋಬಳಿ ಅಧ್ಯಕ್ಷೆ ರೇಣುಕಾ ಸುಧೀರ್ ಅರಸಿನಮಕ್ಕಿ, ಪದಾಧಿಕಾರಿಗಳಾದ ರಾಧಾಕೃಷ್ಣ ಟಿ, ಶಿವಪುತ್ರ ಸುಣಗಾರ, ಮನೋಹರ ಬಳಂಜ, ಆರ್ ಎನ್ ಪೂವಣಿ, ಗಂಗಾರಾಣಿ ನಾ ಜೋಶಿ, ಶೀಲಾ ಹೆಗ್ಡೆ ವೇಣೂರು, ಬಿ.ಎಸ್ ಕುಲಾಲ್, ಆಚುಶ್ರೀ ಬಾಂಗೇರು, ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಸಾಪ ಪ್ರತಿನಿಧಿ ಅಚ್ಚು ಮುಂಡಾಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಮೋಹನ ಗೌಡ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.