- ಚಿಕ್ಕಮಗಳೂರಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ । ಶಾಸಕ ಎಚ್.ಡಿ.ತಮ್ಮಯ್ಯ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಕುವೆಂಪು ಕಲಾಮಂದಿರದಲ್ಲಿ ಸಂಘ ಸಂಸ್ಥೆಗಳ ಹಾಗೂ ಸಾಹಿತ್ಯಾಸಕ್ತರ ನೆರವಿನೊಂದಿಗೆ ಸೆ. 28 ಮತ್ತು 29 ರಂದು ಚಿಕ್ಕಮಗಳೂರು ತಾಲೂಕು ಮಟ್ಟದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕರು ಹಾಗೂ ಸಮ್ಮೇಳನದ ಗೌರವಾಧ್ಯಕ್ಷ ಎಚ್.ಡಿ. ತಮ್ಮಯ್ಯ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿ, ಸಾಹಿತ್ಯಪ್ರೇಮ, ಯುವಪ್ರತಿಭೆಗಳನ್ನು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಮೊದಲು ಆ.31 ರಂದು ನಿಗಧಿಯಾಗಿದ್ದ ಸಮ್ಮೇಳನವನ್ನು ಸಮಯಾವಕಾಶದ ಅಭಾವದಿಂದ ಸೆ.28, 29 ರಂದು ಎರಡು ದಿನಗಳ ಕಾಲ ಹಮ್ಮಿಕೊಳ್ಳಲು ಸಭೆ ನಿರ್ಣಯಿಸಿದೆ. ಅಂದಿನ ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೆರವೇರಿಸಲಿದ್ದು, ಜಿಲ್ಲೆಯ ಜನ ಪ್ರತಿನಿಧಿಗಳು, ಕನ್ನಡಪರ ಸಂಘಟನೆ ಹಾಗೂ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದರು.ಪ್ರಸ್ತುತ ತಾಲೂಕು ಸಮ್ಮೇಳನ 13 ವರ್ಷಗಳ ನಂತರ ಇದೀಗ ಆಯೋಜನೆಗೊಂಡಿದೆ. ಅಂದಿನ ಕಾರ್ಯಕ್ರಮದಲ್ಲಿ ಸಾಹಿತ್ಯ ಚಟುವಟಿಕೆ, ಚುಟುಕು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ ಹಾಗೂ ಹೆಸರಾಂತ ಸಾಹಿತಿಗಳನ್ನು ಆಹ್ವಾನಿಸಿ ಎರಡು ದಿನಗಳ ಕಾಲ ಸಾಹಿತ್ಯದ ಕಂಪನ್ನು ಜನತೆಗೆ ಮುಟ್ಟಿಸುವ ಕಾರ್‍ಯ ಹಮ್ಮಿಕೊಂಡಿದೆ ಎಂದು ಹೇಳಿದರು.ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಸಮ್ಮೇಳನ ಅದ್ಧೂರಿಯಾಗಿ ಹಮ್ಮಿ ಕೊಳ್ಳುವ ದೃಷ್ಟಿ ಯಿಂದ ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಎಸ್.ಎಲ್. ಬೋಜೇಗೌಡ ರೊಂದಿಗೆ ಮಾತುಕತೆ ನಡೆಸಲಾಗಿದ್ದು ಸಂಪೂರ್ಣ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸಮ್ಮೇಳನ ಸರಾಗವಾಗಿ ನಡೆಯುವ ದೃಷ್ಟಿಯಿಂದ ಕ್ಷೇತ್ರದ ಶಾಸಕರು ಅನೇಕ ಚರ್ಚೆಗಳ ಬಳಿಕ ಅಂತಿಮವಾಗಿ ದಿನಾಂಕ ನಿಗದಿಯಾಗಿದೆ. ಸೆ.28 ರಂದು ಸಂಜೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು ಅಂದು ಸಾಹಿತ್ಯನಮನ, ಜಾನಪದ, ಗಮಕ, ಕವಿಗೋಷ್ಠಿ ಹಾಗೂ ಬಹಿರಂಗ ಸಮಾರಂಭ ನಡೆಯಲಿದೆ. ತಾಲೂಕಿನಲ್ಲಿ ಸಾಧನೆಗೈದ ಅನೇಕರಿಗೆ ಕನ್ನಡಶ್ರೀ, ಸಾಹಿತ್ಯಶ್ರೀ ಪ್ರಶಸ್ತಿ ನೀಡಲಾಗುವುದು. ಉಳಿದಂತೆ ಕಲೆ, ಸಂಗೀತ, ಸಾಹಿತ್ಯದ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಬಿಸಲೇನಹಳ್ಳಿ ಸೋಮಶೇಖರ್ ಮಾತನಾಡಿ, ಎರಡನೇ ದಿನವಾದ ಸೆ.29 ರಂದು ಗೌರಿಬಿದನೂರಿನ ಪ್ರಾಂಶುಪಾಲ ರಮೇಶಚಂದ್ರದತ್ತ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ಉದ್ಘಾಟನೆ ಮಲ್ಲೇಪುರಂ ಜಿ.ವೆಂಕಟೇಶ್ ನೆರವೇರಿಸುವರು. ಸಮ್ಮೇಳನಾಧ್ಯಕ್ಷತೆಯನ್ನು ಡಾ. ಬೆಳವಾಡಿ ಮಂಜುನಾಥ್ ವಹಿಸಲಿದ್ದಾರೆ ಎಂದರು.ಸಭೆಯಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ, ಕಾರ್ಯದರ್ಶಿ ಬಿ.ಆರ್.ಜಗದೀಶ್, ಸ್ವಾಗತ ಸಮಿತಿ ಕೋಶಾಧ್ಯಕ್ಷ ಎಚ್.ಸಿ.ನಟರಾಜ್, ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ಲಕ್ಯಾ ಅಧ್ಯಕ್ಷ ಶಿವನಂಜೇಗೌಡ, ಕಾರ್ಯದರ್ಶಿ ಹಿರೇಗೌಜ ಶಿವು, ಖಾಂಡ್ಯ ಅಧ್ಯಕ್ಷ ರಾಜಪ್ಪಗೌಡ, ಕನ್ನಡಸೇನೆ ಜಿಲ್ಲಾ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಮುಖಂಡರಾದ ಅನ್ವರ್, ವಿ.ಕೆ.ರಘು ಹಾಜರಿದ್ದರು.24 ಕೆಸಿಕೆಎಂ 5ಚಿಕ್ಕಮಗಳೂರು ತಾಲೂಕು ಸಮ್ಮೇಳನದ ಹಿನ್ನಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು.