ಕನ್ನಡಪ್ರಭ ವಾರ್ತೆ ಮದ್ದೂರು
ನಗರಸಭೆ ವ್ಯಾಪ್ತಿಗೆ ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಗ್ರಾಮಗಳ ಸೇರ್ಪಡೆ ವಿರೋಧಿಸಿ ಗ್ರಾಮ ಪಂಚಾಯ್ತಿ ಉಳಿವು ಹೋರಾಟ ಸಮಿತಿ ನೇತೃತ್ವದಲ್ಲಿ ಆಯಾ ಗ್ರಾಮಗಳ ರೈತರು ಮತ್ತು ಗ್ರಾಮಸ್ಥರು ಪಟ್ಟಣದಲ್ಲಿ ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪ್ರವಾಸಿ ಮಂದಿರ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ತಾಲೂಕು ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿದ ರೈತರು ಮತ್ತು ಗ್ರಾಮಸ್ಥರು ತಾಲೂಕು ಕಚೇರಿ ಮುಂಭಾಗದ ಬೆಂಗಳೂರು, ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.
ರಾಜ್ಯ ಸರ್ಕಾರ, ಪೌರಾಡಳಿತ ನಿರ್ದೇಶನಾಲಯ ಹಾಗೂ ಕ್ಷೇತ್ರದ ಶಾಸಕ ಕೆಎಂ ಉದಯ್ ವಿರುದ್ಧ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು.ನಾಲ್ಕು ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದರಿಂದ ಅನುಕೂಲಗಿಂತ ಹೆಚ್ಚಾಗಿ ಅನಾನುಕೂಲಗಳು ಉಂಟಾಗುತ್ತದೆ. ಹೀಗಾಗಿ ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಗ್ರಾಮಗಳು ಗ್ರಾಪಂ ವ್ಯಾಪ್ತಿಯಲ್ಲಿ ಇದ್ದರೆ ಗ್ರಾಮೀಣ ಕೃಪಾಂಕದಿಂದ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸ ಹಾಗೂ ಸರ್ಕಾರಿ ಉದ್ಯೋಗಗಳಿಗ ಅನುಕೂಲವಾಗುತ್ತದೆ. ಕುಡಿಯುವ ನೀರಿನ ತೆರಿಗೆ ಮನೆ ಕಂದಾಯ ತುಂಬಾ ಕಡಿಮೆಯಾಗುತ್ತದೆ. ವಸತಿ ಯೋಜನೆಗಳಲ್ಲಿ ನಿವೇಶನ ರೈತರಿಗೆ ನಿವೇಶನ, ನರೇಗಾ ಯೋಜನೆಯಡಿ ಸುಮಾರು 25 ಕ್ಕಿಂತ ಹೆಚ್ಚು ಯೋಚನೆಗಳಿಂದ ರೈತರಿಗೆ ಅನುಕೂಲ, ರಸ್ತೆ, ಚರಂಡಿ ನಿರ್ಮಾಣ , ತೋಟಗಾರಿಕೆ,ಕೃಷಿ , ಪಶುಸಂಗೋಪನೆ , ಸೌಲಭ್ಯಗಳು ದೊರಕುತ್ತವೆ ಎಂದರು.ಗ್ರಾಪಂಗಳಲ್ಲಿ ಇ-ಖಾತೆ ಅಭಿವೃದ್ಧಿ ತೆರಿಗೆ ಶುಲ್ಕ ಕಡಿಮೆ, ಸಾರ್ವಜನಿಕ ಆಸ್ತಿಗಳು ಖರೀದಿ ಮತ್ತು ನೋಂದಣಿ ಶುಲ್ಕ ಕಡಿಮೆ ಜೊತೆಗೆ ಡೇರಿಗಳ ಸ್ಥಾಪನೆಗೆ ಅನುಕೂಲ ಸೇರಿದಂತೆ ಹಲವು ಅನುಕೂಲಗಳು ದೊರಕುತ್ತವೆ ಎಂದು ಹಕ್ಕೋತ್ತಾಯಗಳನ್ನು ಮಂಡಿಸಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು ಮತ್ತು ಶಾಸಕರಿಗೆ ತಾಲೂಕು ಆಡಳಿತದ ಮೂಲಕ ಮುಖಂಡರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಸುನಂದಾ ಜಯರಾಂ, ರೈತ ಮುಖಂಡರಾದ ಜಿ.ಎ.ಶಂಕರ್, ಲಿಂಗಪ್ಪಾಜಿ, ಜಿ.ಹೆಚ್. ವೀರಪ್ಪ, ಜಿ.ಸಿ.ಮಹೇಂದ್ರ, ಸೊಸೈಟಿ ಅಧ್ಯಕ್ಷ ಕೃಷ್ಣ ಮೂರ್ತಿ ಅಲಿಯಾಸ್ ಡಾಬಾ ಕಿಟ್ಟಿ, ಅಂದಾನಿ ಸೋಮನಹಳ್ಳಿ, ಅಂಬರೀಶ, ಚಾಮನಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದರಾಜು, ಗೊರವನಹಳ್ಳಿ ಪ್ರಸನ್ನ, ಸಿ.ಕೆ.ಸ್ವಾಮಿಗೌಡ , ತಾಪಂ ಮಾಜಿ ಉಪಾಧ್ಯಕ್ಷ ಸತೀಶ್, ರಾಕಿ, ಜಿ.ಟಿ. ಶಿವನಂಜಯ್ಯ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.