ಮೈಸೂರು ಸ್ಯಾಂಡಲ್‌ಗೆ ತಮನ್ನಾ ಪ್ರಚಾರ ಶುರು

KannadaprabhaNewsNetwork |  
Published : Feb 11, 2026, 02:15 AM ISTUpdated : Feb 11, 2026, 05:02 AM IST
Mysore sandal

ಸಾರಾಂಶ

 ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಸಂಸ್ಥೆ  ಮಾರುಕಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದೊಂದಿಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ಮೈಸೂರು ಸ್ಯಾಂಡಲ್‌ ಸೋಪ್‌ ಸೇರಿ ಕೆಎಸ್‌ಡಿಎಲ್‌ ಉತ್ಪನ್ನಗಳ ಪ್ರಚಾರ ರಾಯಭಾರಿಯನ್ನಾಗಿ ಮಂಗಳವಾರ ಪರಿಚಯಿಸಲಾಯಿತು.

  ಬೆಂಗಳೂರು :  ಶತಮಾನದ ಇತಿಹಾಸವಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಸಂಸ್ಥೆ (ಕೆಎಸ್‌ಡಿಎಲ್‌)ಯ ಮಾರುಕಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದೊಂದಿಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ಮೈಸೂರು ಸ್ಯಾಂಡಲ್‌ ಸೋಪ್‌ ಸೇರಿ ಕೆಎಸ್‌ಡಿಎಲ್‌ ಉತ್ಪನ್ನಗಳ ಪ್ರಚಾರ ರಾಯಭಾರಿಯನ್ನಾಗಿ ಮಂಗಳವಾರ ಪರಿಚಯಿಸಲಾಯಿತು.

57 ಉತ್ಪನ್ನಗಳನ್ನು ಬಿಡುಗಡೆ

ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಕೆಎಸ್‌ಡಿಎಲ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ನೂತನ ಪ್ರಚಾರ ರಾಯಭಾರಿ ತಮನ್ನಾ ಅವರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಕೆಎಸ್‌ಡಿಎಲ್‌ ಅಪ್ಪಾಜಿ ಸಿ.ಎಸ್‌.ನಾಡಗೌಡರ ಸಮ್ಮುಖದಲ್ಲಿ ಮೈಸೂರು ಸ್ಯಾಂಡಲ್‌ ಸೋಪ್‌ನ ವಿನೂತನ ಪ್ಯಾಕ್‌ ಸೇರಿ ಸೌಂದರ್ಯ ವರ್ಧಕ, ಗೃಹ ಬಳಕೆಯ 57 ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ತಮನ್ನಾ ಅವರು ಬೆಂಗಳೂರಿನ ಮೈಸೂರು ಸ್ಯಾಂಡಲ್‌ ಸೋಪ್‌ ಕಾರ್ಖಾನೆಗೆ ಭೇಟಿ ನೀಡಿ ತಮ್ಮ ಜವಾಬ್ದಾರಿಯನ್ನು ಅಧಿಕೃತವಾಗಿ ಆರಂಭಿಸಿದರು. ಪ್ರಚಾರ ರಾಯಭಾರಿಯಾಗಿ ಕೇವಲ ಪರದೆ ಮೇಲೆ ಉತ್ಪನ್ನಗಳ ಬಗ್ಗೆ ಜನರಿಗೆ ತಿಳಿಸುವುದಕ್ಕೂ ಮುನ್ನ ಉತ್ಪನ್ನಗಳ ಉತ್ಪಾದನೆ ಮತ್ತು ಅದರ ಪಾರಂಪರಿಕ ಹಿನ್ನೆಲೆ ಅರಿತುಕೊಳ್ಳಲು ಕಾರ್ಖಾನೆಗೆ ಭೇಟಿ ನೀಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಕೆಎಸ್‌ಡಿಎಲ್‌ ದೇಶದ ಹೆಮ್ಮೆಯ ಸಂಸ್ಥೆ. 108 ವರ್ಷಗಳ ಇತಿಹಾಸ ಇರುವ ಸಂಸ್ಥೆ ಹಲವು ಏಳುಬೀಳನ್ನು ಕಂಡಿದೆ. ಎಲ್ಲವನ್ನೂ ಎದುರಿಸಿ ಗಟ್ಟಿಯಾಗಿ ನಿಂತಿದೆ. ಪ್ರಸ್ತುತ ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕುಗಳ ವಲಯದಲ್ಲಿ ಕಾರ್ಪೋರೇಟ್‌ ಕಂಪನಿಗಳ ಜತೆಗೆ ಸ್ಪರ್ಧೆಯೊಡ್ಡಿ ಮೊದಲ ಸ್ಥಾನದಲ್ಲಿದೆ. 

ಕಳೆದ ಮೂರು ವರ್ಷಗಳ ಹಿಂದೆ ಕೆಎಸ್‌ಡಿಎಲ್‌ನ ಆರಂಭಿಕ ವಹಿವಾಟು 1,375 ಕೋಟಿ ರು.ಗಳಿತ್ತು. ಈಗ 1,787 ಕೋಟಿ ರು. ತಲುಪಿದೆ. 451 ಕೋಟಿ ರು. ಲಾಭ ಗಳಿಸಿದೆ. ಮೈಸೂರು ಸ್ಯಾಂಡಲ್‌ ಸೇರಿ ಮತ್ತಿತರ ಉತ್ಪನ್ನಗಳನ್ನು ದೇಶಾದ್ಯಂತ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ತಮನ್ನಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡಲಾಗಿದೆ. 2030ರ ವೇಳೆಗೆ ಸಂಸ್ಥೆಯ ಮೂಲಕ 5 ಸಾವಿರ ಕೋಟಿ ರು. ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಭಾವಾನಾತ್ಮಕ ಕ್ಷಣ: ತಮನ್ನಾ

ತಮನ್ನಾ ಭಾಟಿಯಾ ಮಾತನಾಡಿ, ಮೈಸೂರು ಸ್ಯಾಂಡಲ್‌ ಸೋಪ್‌ ಕುರಿತು ಪ್ರಚಾರ ನಡೆಸುತ್ತಿರುವುದು ಹೆಮ್ಮೆ ಮತ್ತು ಗೌರವದ ವಿಚಾರ. ನನ್ನ 20 ವರ್ಷಗಳ ವೃತ್ತಿ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾದಂತಾಗಿದೆ. ಮೈಸೂರು ಸ್ಯಾಂಡಲ್‌ ಸೋಪ್‌ ಎನ್ನುವುದು ಭಾವನಾತ್ಮಕ ಬಂಧ. ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್‌ನ ವಸ್ತುಗಳಿದ್ದರೂ ಮೈಸೂರು ಸ್ಯಾಂಡಲ್‌ ಅನ್ನು ಮೀರಿಸಲು ಸಾಧ್ಯವಿಲ್ಲ. ಮೈಸೂರು ಸ್ಯಾಂಡಲ್‌ ನಮ್ಮ ಬಾಲ್ಯದ ನೆನಪುಗಳನ್ನು ತಾಜಾ ಮಾಡುತ್ತದೆ ಎಂದರು.ಮೈಸೂರು ಸ್ಯಾಂಡಲ್‌ ಟೂಥ್‌ಪೇಸ್ಟ್‌, ಫ್ಲೋರ್‌ ಕ್ಲೀನರ್‌, ಡಿಶ್‌ ಬಾರ್‌ ಬಿಡುಗಡೆ:

ಕಾರ್ಯಕ್ರಮದಲ್ಲಿ ಮೈಸೂರು ಸ್ಯಾಂಡಲ್‌ ಸೋಪ್‌ನ ಹೊಸ ರೂಪ ಬಿಡುಗಡೆ ಮಾಡಲಾಯಿತು. ಅದರೊಂದಿಗೆ ಸುಗಂಧ ದ್ರವ್ಯ, ಡಿಶ್‌ ಬಾರ್‌, ಫ್ಲೋರ್‌ ಕ್ಲೀನರ್‌, ಫ್ಯಾಬ್ರಿಕ್‌ ಕಂಡೀಷನರ್‌, ಟೂಥ್‌ಪೇಸ್ಟ್‌, ತೆಂಗಿನ ಎಣ್ಣೆ ಸೇರಿ ವಿವಿಧ ನೂತನ 57 ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.

ಮೈಸೂರು ಸ್ಯಾಂಡಲ್‌ ಹಳೆಯದಾದರೂ ಇಂದಿಗೂ ಪ್ರಸ್ತುತ. ಈ ಸೋಪ್‌ ತಯಾರಿಕೆಯಲ್ಲಿನ ಅಸಲಿಯತೆ ಮತ್ತು ಸತ್ಯವೇ ಅದಕ್ಕೆ ಕಾರಣ. ಕಾಲ ಬದಲಾದರೂ ಮೈಸೂರು ಸ್ಯಾಂಡಲ್‌ ಸೋಪ್‌ನ ಗುಣಮಟ್ಟ ಬದಲಾಗಿಲ್ಲ ಎಂದು ಹೇಳಿದರು.

ಮಲ್ಲಿಗೆ ಪರಿಮಳದ ಸಾಬೂನಿಗೆ ಬೇಡಿಕೆ:

ಕೆಎಸ್‌ಡಿಎಲ್‌ ಸದ್ಯ ಶ್ರೀಗಂಧ ಸೋಪು ಉತ್ಪಾದನೆ ಮಾಡುತ್ತಿದೆ. ಅದರ ಜತೆಗೆ ಮಲ್ಲಿಗೆ (ಜಾಸ್ಮಿನ್‌) ಪರಿಮಳದ ಐಷಾರಾಮಿ ಸೋಪು ತಯಾರಿಸಲಾಗುತ್ತಿದೆ. ಮಲ್ಲಿಗೆ ತೈಲ ಲೀ.ಗೆ 4 ಲಕ್ಷ ರು.ಗೂ ಹೆಚ್ಚಿನ ಬೆಲೆಯಿದೆ. ಹೀಗಾಗಿ ಒಂದು ಸೋಪಿಗೆ 400 ರು. ನಿಗದಿ ಮಾಡಲಾಗಿದೆ. ಯೂರೋಪ್‌ ಮತ್ತು ಮಧ್ಯಪ್ರಾಚ್ಯ ಮಾರುಕಟ್ಟೆಯಲ್ಲಿ ಮಲ್ಲಿಗೆ ಸುವಾಸನೆಯ ಸೋಪುಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಆ ದೃಷ್ಟಿಯನ್ನಿಟ್ಟುಕೊಂಡು ತಯಾರಿಸಲಾಗುತ್ತಿದೆ. ಹಾಗೆಯೇ, ಕನೌಜ್‌ ಮತ್ತು ಕೊಯಮತ್ತೂರಿನ ಸುಗಂಧ ದ್ರವ್ಯ ತಯಾರಿಕಾ ಸಂಸ್ಥೆಗಳ ಮೂಲಕ ಕೆಎಸ್‌ಡಿಎಲ್‌ನ ಸುಗಂಧ ದ್ರವ್ಯ ಸಿದ್ಧಪಡಿಸಲಾಗುತ್ತಿದೆ. 

ಒಟ್ಟಾರೆ ಸಂಸ್ಥೆಯ ಉತ್ಪನ್ನಗಳು 36ರಿಂದ 93ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.ಕೆಎಸ್‌ಡಿಎಲ್‌ ಅಧ್ಯಕ್ಷ ಅಪ್ಪಾಜಿ ಸಿ.ಎಸ್‌.ನಾಡಗೌಡ ಮಾತನಾಡಿ, ಕೆಎಸ್‌ಡಿಎಲ್‌ನ ವಹಿವಾಟು ವರ್ಷದಿಂದ ವರ್ಷಕ್ಕೆ ಹೆಚ್ಚಿಸಲಾಗುತ್ತಿದೆ ಸಂಸ್ಥೆಯ ವಹಿವಾಟು ಪ್ರಸಕ್ತ ಸಾಲಿನಲ್ಲಿ 2 ಸಾವಿರ ಕೋಟಿ ರು.ಗೆ ಮುಟ್ಟಲಿದೆ. ಲಾಭವು 500 ಕೋಟಿ ರು. ದಾಟಲಿದೆ. ಅದಕ್ಕಾಗಿ ಆಧುನಿಕ ಮತ್ತು ವಿನೂತನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ 3 ಕೋಟಿ ಹಿಂಬಾಲಕರಿರುವ ಮತ್ತು ದೇಶಾದ್ಯಂತ ಹೆಸರಾಗಿರುವ ಬಹುಭಾಷಾ ನಟಿ ತಮನ್ನಾರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡಲಾಗಿದೆ. ಮುಂದಿನ ಎರಡು ವರ್ಷ ತಮನ್ನಾ ಅವರು ಬೇರೆ ಯಾವುದೇ ಉತ್ಪನ್ನಗಳ ಪ್ರಚಾರ ಮಾಡದೆ ಕೆಎಸ್‌ಡಿಎಲ್‌ ಉತ್ಪನ್ನಗಳ ಪ್ರಚಾರದಲ್ಲಿ ತೊಡಗಲಿದ್ದಾರೆ ಎಂದರು.

ಕೆಎಸ್‌ಡಿಎಲ್‌ನ ಮಾರುಕಟ್ಟೆ ವಿಸ್ತರಣೆ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದೆ. ಈವರೆಗೆ ಮಾಡರ್ನ್‌ ಟ್ರೇಡ್‌ನ 6 ಡಿಸ್ಟ್ರಿಬ್ಯೂಟರ್‌ಗಳ ಸಂಖ್ಯೆ 64ಕ್ಕೆ ಹೆಚ್ಚಿಸಲಾಗಿದೆ. ಇನ್ನು ಮೆರಿಟ್‌ ಆಧಾರದಲ್ಲಿ 1 ಸಾವಿರಕ್ಕೂ ಹೆಚ್ಚಿನ ಹಂಚಿಕೆದಾರರನ್ನು ನೇಮಿಸಲಾಗಿದೆ. 2022-23ರಲ್ಲಿ 160 ಕೋಟಿ ರು.ಗಳಷ್ಟಿದ್ದ ಮಾಡರ್ನ್‌ ಟ್ರೇಡ್‌ ಈಗ 500 ಕೋಟಿ ರು. ದಾಟಿದೆ. ಮಾರ್ಚ್‌ ಅಂತ್ಯಕ್ಕೆ ಅದು 550 ಕೋಟಿ ರು. ಮೀರುವ ನಿರೀಕ್ಷೆಯಿದೆ. 2022-23ರಲ್ಲಿ 22 ಕೋಟಿ ರು. ಇದ್ದ ಇ-ಕಾಮರ್ಸ್‌ ಪ್ರಮಾಣ ಈಗ 100 ಕೋಟಿ ರು. ದಾಟಿದೆ ಎಂದು ವಿವರಿಸಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಕೆಪಿಎಂ ಪ್ರಶಾಂತ್‌, ಸ್ವತಂತ್ರ ನಿರ್ದೇಶಕ ಅರವಿಂದ ಗಲಗಲಿ, ತಾಂತ್ರಿಕ ಸಲಹೆಗಾರ ರಜನೀಕಾಂತ್‌, ಶಿವಕುಮಾರ್‌, ಪ್ರತಿಮಾ ವಂದಗಾರು, ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಮನೋಜ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪರಿಸರಕ್ಕೆ ವಿಷ ಉಣಿಸುತ್ತಿವೆ ಗ್ರಾಪಂಗಳು
ಮಗಳ ಎಸ್ಸೆಸ್ಸೆಲ್ಸಿ ಪುಸ್ತಕಗಳ ಸುಟ್ಟುಹಾಕಿದ ಕುಡುಕ ತಂದೆ!