ಗ್ರಾಹಕನಿಗೆ ಹುಳಿಯಾದ ಹುಣಸೆ ಹಣ್ಣು

KannadaprabhaNewsNetwork |  
Published : Apr 22, 2025, 01:48 AM IST
ಪೋಟೊ21ಕೆಎಸಟಿ1: ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ಮರಿಯಪ್ಪ ಭಜಂತ್ರಿ ಹುಣಸೆ ಹಣ್ಣನ್ನು ಸಂಸ್ಕರಿಸುತ್ತಿರುವದು.  ಕುಷ್ಟಗಿ ಪಟ್ಟಣದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿರುವ ಹುಣಸೆ ಹಣ್ಣಿನ ಮೂಟೆಗಳು. | Kannada Prabha

ಸಾರಾಂಶ

ಮರದಲ್ಲಿನ ಹಣ್ಣು ಕೀಳಲು ಒಬ್ಬ ಕೂಲಿಯಾಳಿಗೆ ₹ 700 ನೀಡಬೇಕು. ಮರದಿಂದ ಕೆಳಗೆ ಬಿದ್ದ ಹಣ್ಣು ಸಂಗ್ರಹಿಸುವವರಿಗೆ ₹ 350 ಕೊಡಬೇಕು. ಹಣ್ಣಿನಿಂದ ಬೀಜ, ನಾರು ಬೇರ್ಪಡಿಸಲು ಕೆಜಿಗೆ ₹ 30 ನೀಡಬೇಕು. ಇದರೊಂದಿಗೆ ಬೆಳಗಿನ ಉಪಹಾರ, ಚಹಾ ಸೇರಿ ಇತರೆ ಖರ್ಚು ನೋಡಿಕೊಳ್ಳಬೇಕು ಎನ್ನುತ್ತಾರೆ ಗುತ್ತಿಗೆದಾರರು.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಹುಣಸೆ ಹಣ್ಣಿನ ಬೆಲೆ ಗಗನಕ್ಕೇರುತ್ತಿದ್ದು ಬೆಳೆಗಾರನಿಗೆ ಹಾಗೂ ಗುತ್ತಿಗೆದಾರನಿಗೆ ಸಿಹಿಯಾದರೆ ಗ್ರಾಹಕರಿಗೆ ಹುಳಿಯಾಗಿ ಪರಿಣಮಿಸಿದೆ. ಕಳೆದ ವರ್ಷ ಒಂದು ಕ್ವಿಂಟಲಗೆ ₹ 5ರಿಂದ ₹ 6 ಸಾವಿರಕ್ಕೆ ಮಾರಾಟವಾಗುತ್ತಿದ್ದ ಹುಣಸೆ ಹಣ್ಣು ಈ ವರ್ಷ ₹ 10 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಬೆಳೆಗಾರನಿಗೆ ಸಿಹಿಯಾಗಿ ಪರಿಣಮಿಸಿದರೆ ಗ್ರಾಹಕ ಜೇಬು ಸುಡುತ್ತಿದೆ.

ಇದೀಗ ಹುಣಸೆ ಹಣ್ಣಿನ ಹಂಗಾಮು ಶುರುವಾಗಿದೆ. ವಾತಾವರಣದ ಏರುಪೇರಿನಿಂದಾಗಿ ಇಳುವರಿ ಕುಂಠಿತವಾಗಿದ್ದು ದರ ತುಟ್ಟಿಯಾಗಿದೆ. ಅಂದುಕೊಂಡಷ್ಟು ಹುಣಸೆ ಹಣ್ಣು ಮಾರುಕಟ್ಟೆಗೆ ಬರದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ದರ ಏರಿಕೆ ಆಗಿದೆ ಎನ್ನಬಹುದಾಗಿದೆ.

ಕೂಲಿ ಹೆಚ್ಚಳ:

ಮರದಲ್ಲಿನ ಹಣ್ಣು ಕೀಳಲು ಒಬ್ಬ ಕೂಲಿಯಾಳಿಗೆ ₹ 700 ನೀಡಬೇಕು. ಮರದಿಂದ ಕೆಳಗೆ ಬಿದ್ದ ಹಣ್ಣು ಸಂಗ್ರಹಿಸುವವರಿಗೆ ₹ 350 ಕೊಡಬೇಕು. ಹಣ್ಣಿನಿಂದ ಬೀಜ, ನಾರು ಬೇರ್ಪಡಿಸಲು ಕೆಜಿಗೆ ₹ 30 ನೀಡಬೇಕು. ಇದರೊಂದಿಗೆ ಬೆಳಗಿನ ಉಪಹಾರ, ಚಹಾ ಸೇರಿ ಇತರೆ ಖರ್ಚು ನೋಡಿಕೊಳ್ಳಬೇಕು ಎನ್ನುತ್ತಾರೆ ಗುತ್ತಿಗೆದಾರರು. ಎಲ್ಲ ವೆಚ್ಚ ಸೇರಿ ಪ್ರತಿ ಕ್ವಿಂಟಲ್ ಹಣ್ಣನ್ನು ಮಾರುಕಟ್ಟೆಗೆ ಸಾಗಿಸುವ ವೇಳೆಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಎಲ್ಲವನ್ನು ಸರಿದೂಗಿಸಿಕೊಂಡು ಆದಾಯ ಮಾಡಿಕೊಳ್ಳಬೇಕು. ಅಲ್ಲದೆ, ವರ್ಷದ ಮುಂಚೆಯೇ ಮುಂಗಡ ನೀಡಿ ಮರಗಳನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕಾರ್ಮಿಕರ ಕೊರತೆಯಿಂದ ಮರಗಳಲ್ಲಿನ ಹಣ್ಣನ್ನು ಹೆಚ್ಚಿನ ಕೂಲಿ ಕೊಟ್ಟು ಬಿಡಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ.

ಕುಷ್ಟಗಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಣಸೆ ಮರಗಳು ಇರುವುದರಿಂದ ಪ್ರತಿವರ್ಷ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ಭಜಂತ್ರಿ ಸಮುದಾಯದವರು ಹುಣಸೆ ಮರ ಗುತ್ತಿಗೆ ಹಿಡಿದು ವ್ಯವಹಾರ ಮಾಡುವುದು ಅವರ ಮುಖ್ಯ ಕೆಲಸ.

ಹುಣಸೆ ಮರ ಹೂವು, ಹೀಚು ಬೀಡುವ ಸಂದರ್ಭದಲ್ಲಿ ಮರದ ಇಳುವರಿ ಪ್ರಮಾಣಕ್ಕೆ ಅನುಸಾರವಾಗಿ ಗುತ್ತಿಗೆ ಪಡೆಯುತ್ತಾರೆ. ಕಾಯಿ, ಹಣ್ಣಾಗಿ ಮಾಗಿದ ಬಳಿಕ ಹರಿದು ಬೀಜಗಳನ್ನು ಸಂಸ್ಕರಿಸಿ ಹುಣಸೆ ಹಣ್ಣಿನ ಪೆಂಡಿ ತಯಾರಿಸಿ ನಗರಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ಸ್ಥಳೀಯ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಕ್ವಿಂಟಲ್‌ಗೆ ₹13000:

ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಹುಣಸೆ ಹಣ್ಣನ್ನು ಕನಿಷ್ಠ ₹ 10ರಿಂದ ₹ 13000ಕ್ಕೆ ಹರಾಜು ನಡೆಸಲಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ಹುಣಸೆ ದರ ಕ್ವಿಂಟ್‌ಲ್‌ಗೆ ₹ 13000 ಇದ್ದರೆ, ಮಧ್ಯಮ ಗುಣಮಟ್ಟದ ಹುಣಸೆಗೆ ಕ್ವಿಂಟಲ್‌ಗೆ 11ರಿಂದ ₹ 12000 ದರವಿದೆ. ಅದೇ ರೀತಿ 3ನೇ ದರ್ಜೆ ಹುಣಸೆ ದರ ಕ್ವಿಂಟಲ್‌ಗೆ ₹ 9ರಿಂದ ₹ 10 ಸಾವಿರವಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ₹ 150ರಿಂದ ₹ 170ರ ವರೆಗೆ ಮಾರಾಟ ಮಾಡಲಾಗುತ್ತಿದೆ.ಕಳೆದ ವರ್ಷ ಒಂದು ಕ್ವಿಂಟಲ್‌ ಹುಣಸೆ ಹಣ್ಣಿಗೆ ₹ 5000ವಿದ್ದು ವ್ಯಾಪಾರದಲ್ಲಿ ನಷ್ಟವಾಗಿತ್ತು. ಆದರೆ, ಈ ವರ್ಷ ಇಳುವರಿ ಕಡಿಮೆಯಾಗಿದ್ದು ದರ ₹ 10 ಸಾವಿರದ ಗಡಿ ದಾಟಿದ್ದು ವ್ಯಾಪಾರದಲ್ಲಿ ಲಾಭ ಉಂಟಾಗಿದೆ.

ಮರಿಯಪ್ಪ ಭಜಂತ್ರಿ ವ್ಯಾಪಾರಸ್ಥಈ ವರ್ಷ 13 ಕ್ವಿಂಟಲ್‌ ಹುಣಸೆ ಹಣ್ಣು ಬೆಳೆಯಲಾಗಿದ್ದು ಒಂದು ಕ್ವಿಂಟಲ್‌ಗೆ ₹ 11000 ದರ ಸಿಕ್ಕಿದೆ.

ಯಮನೂರಪ್ಪ ಭಜಂತ್ರಿ ಕುದರಿಮೋತಿ ರೈತ.ದಿನದಿಂದ ದಿನಕ್ಕೆ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗುತ್ತಿದ್ದು ಈಗ ಹುಣಸೆ ಹಣ್ಣಿನ ಬೆಲೆಯು ₹ 150ರಿಂದ ₹ 180ಕ್ಕೆ ತಲುಪಿದೆ. ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ.

ಮಹಾದೇವಿ ಕುಷ್ಟಗಿ, ಗ್ರಾಹಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾ.ನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು
ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು