ತಮಿಳುನಾಡಿನ ನೀಲಗಿರಿ ಜಿಲ್ಲೇಲಿ ಏ.2ಕ್ಕೆ ಮುಷ್ಕರ

KannadaprabhaNewsNetwork | Published : Mar 30, 2025 3:03 AM

ಸಾರಾಂಶ

ನೆರೆಯ ತಮಿಳುನಾಡಿನ ನೀಲಗಿರಿ ಜಿಲ್ಲೆಯ ವ್ಯಾಪಾರಿಗಳು, ಸಾರ್ವಜನಿಕ ಕಲ್ಯಾಣ ಸಂಘಟನೆಗಳ ಒಕ್ಕೂಟ 11 ಮೂಲಭೂತ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಏ.2ರ ಬುಧವಾರ 24 ಗಂಟೆಗಳ ಕಾಲ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಸರ್ವತೋಮುಖ ಮುಷ್ಕರ ಹಮ್ಮಿಕೊಂಡಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ನೆರೆಯ ತಮಿಳುನಾಡಿನ ನೀಲಗಿರಿ ಜಿಲ್ಲೆಯ ವ್ಯಾಪಾರಿಗಳು, ಸಾರ್ವಜನಿಕ ಕಲ್ಯಾಣ ಸಂಘಟನೆಗಳ ಒಕ್ಕೂಟ 11 ಮೂಲಭೂತ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಏ.2ರ ಬುಧವಾರ 24 ಗಂಟೆಗಳ ಕಾಲ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಸರ್ವತೋಮುಖ ಮುಷ್ಕರ ಹಮ್ಮಿಕೊಂಡಿದೆ.

ಮುಷ್ಕರದ ಮೊದಲ ಹಂತದಲ್ಲಿ ಮಾ.29ರಂದು ನೀಲಗಿರಿ ಜಿಲ್ಲೆಯ ಎಲ್ಲ ಅಂಗಡಿ ಹಾಗೂ ಮನೆಯಲ್ಲಿ ಕಪ್ಪು ಬಾವುಟ ಹಾರಿಸುವ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದೆ. ನೀಲಗಿರಿ ಜಿಲ್ಲೆಯ ಜನತೆ ಮೊದಲ ಹಾಗೂ ಎರಡನೇ ಹಂತದ ಹೋರಾಟಕ್ಕೆ ಬೆಂಬಲ ನೀಡಿದ್ದು, ಕರ್ನಾಟಕ ರಾಜ್ಯದ ಪ್ರವಾಸಿಗರು ಹಾಗೂ ಸಾರ್ವಜನಿಕರು ಏ.2ಕ್ಕೆ ಬಂದರೆ ಅನಾನುಕೂಲ ಆಗಲಿದೆ.

ಒಕ್ಕೂಟದ ಬೇಡಿಕೆಗಳು:

1. ಇ-ಪಾಸ್ ಅನ್ನು ಸಂಪೂರ್ಣ ರದ್ದುಪಡಿಸಬೇಕು.

2. ಮಾಸ್ಟರ್ ಪ್ಲಾನ್ ಕಾಯ್ದೆಯನ್ನು ಪರಿಷ್ಕರಿಸಿ, ಅನುಮತಿಸದೆ ನಿರ್ಮಿಸಿರುವ ಕಟ್ಟಡಗಳಿಗೆ ನಿಯಮಾನುಸಾರ ಮಾನ್ಯತೆ ನೀಡಬೇಕು.

3. ಊಟಿ-ಕುನ್ನೂರ್ ನಗರಸಭಾ ಮಾರುಕಟ್ಟೆ ವ್ಯಾಪಾರಿಗಳ ಬೇಡಿಕೆ ಈಡೇರಿಸಬೇಕು.

4. ಗೂಡಲೂರು ನಿವಾಸಿಗಳ ದೀರ್ಘ ಕಾಲದ ಸಮಸ್ಯೆಯಾಗಿರುವ ಸೆಕ್ಷನ್ 17 ಭೂಮಿ ಪ್ರಶ್ನೆಗೆ ಶಾಶ್ವತ ಪರಿಹಾರ ಒದಗಿಸಬೇಕು ಮತ್ತು ವನ್ಯಜೀವಿಗಳಿಂದ ರಕ್ಷಣೆ ನೀಡಬೇಕು.

5. ತೆಂಗಿನ ಚಹಾ ಬೆಳೆಗಾರರ ಹಸಿರು ಚಹಾಗೆ ಕನಿಷ್ಠ ಬೆಲೆ ನಿಗದಿಪಡಿಸಬೇಕು.

6. ಜಿಲ್ಲೆಯಲ್ಲಿ ಹೊಸ ಮನೆ ನಿರ್ಮಾಣಕ್ಕೆ ಅನುಮತಿ ಕೇಳಿದ ೮೦೦೦ ಅರ್ಜಿಗಳಿಗೆ ಸರಿಯಾದ ಅನುಮತಿ ನೀಡಬೇಕು.

7. ಎಲ್ಲಾ ವಾಹನ ಚಾಲಕರ ಜೀವನ ಮೂಲವನ್ನು ಹಾಳು ಮಾಡುತ್ತಿರುವ ಓಲಾ, ಊಬರ್, ರೆಡ್ ಟ್ಯಾಕ್ಸಿ ಕಂಪನಿಗಳಿಗೆ ನಿಷೇಧ ಹೇರಬೇಕು.

8. ಮಂಜೂರು ತಾಲೂಕು ನಿವಾಸಿಗಳ ಧೀರ್ಘ ಕಾಲದ ಬೇಡಿಕೆಯಾದ ಮಂಜೂರು-ಮುಳ್ಳಿಯ ಮೂಲಕ ಮನಾರ್ಕಾಡ್‌ (ಕೇರಳ) ಮಾರ್ಗ ಪುನಾರಂಭಿಸಬೇಕು.

9. ಚಿಲ್ಲಲ್ಲಾ ನೀರಾವರಿ ಯೋಜನೆ ಕೈಬಿಡಬೇಕು.

10. ಪ್ಲಾಸ್ಟಿಕ್ ನಿಷೇಧ ಕಾನೂನಿಗೆ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು.

11. ಸರ್ಕಾರದ ಸಸ್ಯೋದ್ಯಾನ (ಬೋಟಾನಿಕಲ್ ಗಾರ್ಡನ್‌ ) ಸೇರಿದಂತೆ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಮತ್ತು ಪಾರ್ಕಿಂಗ್‌ ಶುಲ್ಕ ಕಡಿತಗೊಳಿಸಬೇಕು. ಕುಡಿಯುವ ನೀರು ಮತ್ತು ಶೌಚಾಲಯ ಸೌಕರ್ಯ ಒದಗಿಸಬೇಕು.

12. ಮಸಿನಗುಡಿ ಪ್ರದೇಶದ ಮರವಕ್ಕಂಡಿ ಜಲಾಶಯದಲ್ಲಿ ಬೋಟಿಂಗ್ ಹೌಸ್ ನಿರ್ಮಿಸಿ, ಮತ್ತೆ ಎಕೊ ಪ್ರವಾಸೋದ್ಯಮ ಪ್ರಾರಂಭಿಸಬೇಕು.

13. ಪಾಂಡಲೂರು,ತೇವರ್ ರಸ್ತೆಗಳಲ್ಲಿನ ನಗರ ಪ್ರದೇಶಗಳಲ್ಲಿ ಒಳ ಚರಂಡಿ ವ್ಯವಸ್ಥೆ ಹಾಗೂ ಪಾದಚಾರಿ ಮಾರ್ಗ ನಿರ್ಮಿಸಬೇಕು.

ಈ ಮೇಲ್ಕಂಡ 13 ಬೇಡಿಕೆಗಳನ್ನು ಈಡೇರಿಸಲು ತಮಿಳುನಾಡಿನ ಸರ್ಕಾರದ ಗಮನ ಸೆಳೆಯುವ ಸಲುವಾಗಿ ತಮಿಳುನಾಡು ವ್ಯಾಪಾರಿಗಳ ಸಂಘಗಳ ಒಕ್ಕೂಟದ ನೀಲಗಿರಿ ಜಿಲ್ಲೆ ಮತ್ತು ಎಲ್ಲಾ ಸಾರ್ವಜನಿಕ ಕಲ್ಯಾಣ ಸಂಘಟನೆಗಳ ಒಕ್ಕೂಟ ತಿಳಿಸಿದೆ.

Share this article