ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕನ್ನಡ ನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ತಮಿಳರು ನೆಲ, ಜಲ ಹಾಗೂ ಭಾಷೆಯ ಪರಂಪರೆಗೆ ಧಕ್ಕೆಯುಂಟಾದ ವೇಳೆಯಲ್ಲಿ ಧೈರ್ಯವಾಗಿ ರಾಜ್ಯದ ಪರವಾಗಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ ಎಂದು ತಮಿಳು ಸಂಘದ ರಾಜ್ಯಾಧ್ಯಕ್ಷ ಕುಮಾರ್ ಹೇಳಿದರು.ನಗರದ ಶ್ರೀ ಸುಬ್ರಹ್ಮಣ್ಯ ಮಹಾಸಭಾ ಸಭಾಂಗಣದಲ್ಲಿ ನಡೆದ ತಮಿಳು ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ನೆಲದಲ್ಲಿ ಪೂರ್ವಜರ ಕಾಲದಿಂದ ಜೀವನ ಸಾಗಿಸುತ್ತಿರುವ ಜನಾಂಗ ನಾಡಿನ ಋಣ ತೀರಿಸುವ ಕೆಲಸ ಮಾಡುತ್ತಿದೆ ಎಂದರು.ರಾಜ್ಯಾದ್ಯಂತ ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ತಮಿಳರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಸಂಘಟನಾ ಶಕ್ತಿಯಿಂದ ಒಂದಾಗಿ ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಸರ್ಕಾರದ ಸವಲತ್ತುಗಳನ್ನು ನೇರವಾಗಿ ಪಡೆಯಲು ಸಾಧ್ಯ ಎಂದು ಹೇಳಿದರು.ಉತ್ತರ ಭಾರತದಿಂದ ವಲಸೆ ಬಂದಿರುವ ಅನೇಕ ಸಮುದಾಯಗಳಿಗೆ ರಾಜ್ಯದಲ್ಲಿ ವಿಶೇಷ ಸವಲತ್ತು ಒದಗಿಸಿ ಮನ್ನಣೆ ನೀಡುತ್ತಿದೆ. ಆದರೆ, ಪೂರ್ವಜರ ಕಾಲದಿಂದ ಇಲ್ಲಿಯೇ ನೆಲೆಸಿರುವ ತಮಿಳರು ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಮಾತೃ ಭಾಷೆ ತಮಿಳಿನ ನಡುವೆ ಜೀವನದ ಭಾಷೆ ಕನ್ನಡವನ್ನು ಅಪ್ಪಿಕೊಂಡಿರುವ ಸಮುದಾಯಕ್ಕೆ ಸರ್ಕಾರ ಅವಕಾಶ ಕಲ್ಪಿಸಿ ಕೊಡಬೇಕು ಎಂದರು.ಪ್ರಸ್ತುತ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿರುವ ತಾವು ತಮಿಳರನ್ನು ಒಗ್ಗಟ್ಟಾಗಿಸಿ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಗುರಿ ಹೊಂದಿದ್ದು ಮುಖ್ಯಮಂತ್ರಿ ಸಮ್ಮುಖದಲ್ಲಿ ಶಕ್ತಿ ಪ್ರದರ್ಶಿಸಿ ಆರ್ಥಿಕ ಹಾಗೂ ರಾಜಕೀಯವಾಗಿ ಸವಲತ್ತು ಪಡೆಯುವ ನಿಟ್ಟಿನಲ್ಲಿ ಜನಾಂಗದ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ತಮಿಳು ಸಂಘದ ಅಧ್ಯಕ್ಷ ಜಿ. ರಘು ಮಾತನಾಡಿ, ನಾಡಿನ ನೆಲ, ಜಲ ಹಾಗೂ ಭಾಷಾಭಿಮಾನಕ್ಕೆ ಧಕ್ಕೆಯಾದಾಗ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದವರನ್ನು ಸರ್ಕಾರ ಗುರುತಿಸುವ ಕೆಲಸ ಮಾಡಬೇಕು. ಕೇವಲ ಮತ ಬ್ಯಾಂಕ್‌ಗೆ ಬಳಸಿಕೊಳ್ಳುವ ಬದಲು ಸವಲತ್ತು ಒದಗಿಸಲು ಮುಂದಾಗಬೇಕು ಎಂದರು.ಹುಟ್ಟಿನಿಂದ ಕನ್ನಡ ನೆಲದಲ್ಲೇ ಜೀವನ ಸಾಗಿಸುತ್ತಿರುವ ತಮಿಳರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದಾರೆ. ವಿದ್ಯಾಭ್ಯಾಸ, ವ್ಯವಹಾರ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಕನ್ನಡತನ ಮೆರೆಯುವ ತಮಿಳರಿಗೆ ಸರ್ಕಾರ ಇದುವರೆಗೂ ಸೂಕ್ತ ಸ್ಥಾನಮಾನ ನೀಡಿಲ್ಲ. ಹೀಗಾಗಿ ತ್ವರಿತಗತಿಯಲ್ಲಿ ಪ್ರಾತಿನಿಧ್ಯ ನೀಡಿ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ತಮಿಳು ಸಂಘದ ಉಪಾಧ್ಯಕ್ಷ ಕೃಷ್ಣರಾಜು, ರಾಮಣ್ಣ, ಪ್ರಧಾನ ಕಾರ್ಯದರ್ಶಿ ಅಣ್ಣವೇಲು, ಸಹ ಕಾರ್ಯ ದರ್ಶಿ ಸಿ.ಕೆ.ಮೂರ್ತಿ, ಸಲಹಾ ಸಮಿತಿ ವಿಜಯ್‌ಕುಮಾರ್, ತಿರುವಳ್ಳರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಶಂಕರ್, ಮುಖಂಡರಾದ ಕಾರ್ತೀಕ್, ಚಿನ್ನಪ್ಪ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 21 ಕೆಸಿಕೆಎಂ 5ಚಿಕ್ಕಮಗಳೂರಿನ ಶ್ರೀ ಸುಬ್ರಹ್ಮಣ್ಯ ಮಹಾಸಭಾ ಸಭಾಂಗಣದಲ್ಲಿ ನಡೆದ ತಮಿಳು ಜನಾಂಗದ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಕುಮಾರ್ ಮಾತನಾಡಿದರು. ಜಿಲ್ಲಾಧ್ಯಕ್ಷ ಜಿ. ರಘು, ಕೃಷ್ಣರಾಜು, ಸಿ.ಕೆ. ಮೂರ್ತಿ, ವಿಜಯಕುಮಾರ್ ಇದ್ದರು.