ಟಿಎಪಿಸಿಎಂಎಸ್ ೧.೩೦ ಕೋಟಿ ಹಗರಣ: ದೂರು

KannadaprabhaNewsNetwork | Published : Apr 20, 2025 1:55 AM

ಸಾರಾಂಶ

ಯಳಂದೂರು ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶನಿವಾರ ಮಾಜಿ ಶಾಸಕ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಎಸ್. ಬಾಲರಾಜು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಇಲ್ಲಿನ ಯಳಂದೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ದಲ್ಲಿ ಕಳೆದ ಅವಧಿಯಲ್ಲಿ ₹೧,೩೦,೩೦,೩೨೦ ಹಗರಣ ನಡೆದಿದೆ ಎಂದು ಸಂಘದ ಹಾಲಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಬಾಲರಾಜು ಆರೋಪಿಸಿದ್ದಾರೆ.ಶನಿವಾರ ಪಟ್ಟಣದಲ್ಲಿರುವ ಕಚೇರಿ ಆವರಣದಲ್ಲಿ ಸಂಘದ ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ಕೇವಲ ೬ ಜನರು ಮಾತ್ರ ಇದ್ದು ಕೋರಂ ಇಲ್ಲದ ಕಾರಣ ಸಭೆ ನಡೆಯಲಿಲ್ಲ. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದರು. ಕಳೆದ ಅವಧಿಯಲ್ಲಿ ಸಂಘದ ಪ್ರಭಾರ ಕಾರ್ಯದರ್ಶಿಯಾಗಿದ್ದ ಮಲಾರಪಾಳ್ಯ ಮಹೇಶ್ ₹೧,೨೫,೩೦,೩೨೦ ಹಾಗೂ ಈ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ವಡಗೆರೆ ದಾಸ್ ಅವರು ₹೫ ಲಕ್ಷ ಹಗರಣ ಮಾಡಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ೨೦೨೪ ಜುಲೈ ೨೪ ರಂದು ಸಹಕಾರ ಇಲಾಖೆಯ ಉಪನಿಬಂಧಕರಿಗೆ ದಾವೆಯನ್ನು ಹೂಡಲಾಗಿದೆ.ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಯಳಂದೂರು ಪೊಲೀಸ್ ಠಾಣೆಯಲ್ಲೂ ಇದೇ ಮಾರ್ಚ್ ೩೦ ಮೊಕದ್ದಮೆ ಸಂಖ್ಯೆ ೬೨/೨೦೨೫ ರಂತೆ ವಂಚನೆ ಪ್ರಕರಣವನ್ನು ದಾಖಲಿಸಿ ಎಫ್‌ಐಆರ್ ಮಾಡಲಾಗಿದೆ. ಅಲ್ಲದೆ ನಮ್ಮ ಸಂಘದ ವತಿಯಿಂದ ವಿವಿಧ ಸಂಸ್ಥೆಗಳಿಗೆ ೧,೩೫,೦೭,೭೬೧ ರೂ. ಹಣವನ್ನು ಪಾವತಿಸಬೇಕಾಗಿದೆ. ಇಲ್ಲಿ ಒಟ್ಟು ೧೨ ಜನರು ಸದಸ್ಯರಿದ್ದಾರೆ. ಇವತ್ತೂ ಸೇರಿ ನಾಲ್ಕು ಬಾರಿ ನಾನು ಸಭೆಯನ್ನು ಕರೆದಿದ್ದೇನೆ. ಆದರೆ ಕೆಲ ಸದಸ್ಯರು ಬೇಕೆಂತಲೇ ಗೈರಾಗುತ್ತಿದ್ದಾರೆ. ಸಭೆಯ ಸಾಮಾನ್ಯ ಸಭೆಯನ್ನು ಕರೆದು ಹೊಸ ನಿರ್ಣಯ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಕೇವಲ ೬ ಜನರು ಮಾತ್ರ ಸಭೆಗೆ ಹಾಜರಾಗುತ್ತಿರುವುದರಿಂದ ಕೋರಂ ಕೊರತೆಯಾಗಿದೆ.

ಈ ಸಂಘವು ೧೯೪೯ ರಲ್ಲಿ ಆರಂಭಗೊಂಡಿರುವ ಜಿಲ್ಲೆಯ ಅತಿ ಹಳೆಯ ಸಹಕಾರ ಸಂಘಗಳಲ್ಲಿ ಒಂದಾಗಿದೆ. ಇದು ಲಾಭದಲ್ಲಿದ್ದ ಒಂದು ಸಹಕಾರ ಸಂಸ್ಥೆಯಾಗಿತ್ತು. ನಾನು ೨೦ ವರ್ಷಗಳ ಹಿಂದೆ ಇಲ್ಲಿಗೆ ನಿರ್ದೇಶಕನಾಗಿ ಆಯ್ಕೆಯಾದ ಬಳಿಕ ನನಗೆ ರಾಜಕೀಯ ಹುಟ್ಟು ಕೊಟ್ಟ ಸಂಸ್ಥೆ ಇದಾಗಿದೆ. ಹಾಗಾಗಿ ಇದರ ಬಗ್ಗೆ ನನಗೆ ಅಭಿಮಾನವಿದ್ದ ಕಾರಣ ಇದನ್ನು ಉಳಿಸಿಕೊಳ್ಳುವ ಉದ್ದೇಶದಿಂದ ನಾನು ಮತ್ತೆ ನಿರ್ದೇಶಕನಾಗಿ, ಅಧ್ಯಕ್ಷನಾಗಿ ಆಯ್ಕೆಯಾದೆ. ಆದರೆ ಇಲ್ಲಿರುವ ಕೆಲ ನಿರ್ದೇಶಕರು ರಾಜಕೀಯ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ.

ಸಹಕಾರ ಕ್ಷೇತ್ರದಲ್ಲಿ ಸೇವೆಯೇ ಬಾಳಾಗಿದೆ. ಇಲ್ಲಿಗೆ ಬರುವರು ರಾಜಕೀಯವನ್ನು ಬಿಟ್ಟು ಬರಬೇಕು. ರೈತರ, ಬಡವರ ಅಭಿವೃದ್ಧಿಗೆ ಇರುವ ಈ ಸಂಸ್ಥೆಯನ್ನು ಬೆಳೆಸುವ ಪ್ರಾಮಾಣಿಕ ಉದ್ದೇಶ ಇರಬೇಕು. ಸಮಸ್ಯೆ ಇದ್ದಲ್ಲಿ ಸಭೆಯಲ್ಲಿ ಭಾಗವಹಿಸಿ ಚರ್ಚೆಗೆ ಬರಬೇಕು ಇದು ಬಿಟ್ಟು ಸಭೆಗೆ ಬಾರದಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ಹಿಂದೆ ನಾನು ಶಾಸಕನಾಗಿದ್ದ ಕಾಲದಲ್ಲಿ ಇದನ್ನು ರದ್ದುಗೊಳಿಸಲು ಶಿಫಾರಸ್ಸು ಮಾಡಲಾಗಿತ್ತು. ಆದರೆ ನಾನು ಇದನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದ್ದೇನೆ. ಈಗಲೂ ಸಹ ಇದರ ಉಳಿವಿಗೆ ಎಲ್ಲರೂ ಸಹಕಾರ ನೀಡಬೇಕು. ಮತ್ತೆ ಇದನ್ನು ಲಾಭದತ್ತ ಕೊಂಡೊಯ್ಯಲು ಶ್ರಮಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದರು.ನಿರ್ದೇಶಕರಾದ ವೈ.ಎಸ್. ನಂಜಶೆಟ್ಟಿ, ಕಂದಹಳ್ಳಿ ಮಹೇಶ್‌ಕುಮಾರ್, ಬೂದಿತಿಟ್ಟು ನಾಗರಾಜು, ರಾಜಮ್ಮ, ಅಂಬಿಕಾ ಪ್ರಭಾರ ಕಾರ್ಯದರ್ಶಿ ರಮೇಶ್, ಪುಟ್ಟಮಲ್ಲಪ್ಪ ಸೇರಿದಂತೆ ಅನೇಕರು ಇದ್ದರು.

Share this article