ಟಿಎಪಿಸಿಎಂಎಸ್ ರೈತರಿಗೆ ಹೆಚ್ಚಿನ ನೆರವು: ಜಿ.ಡಿ. ಹರೀಶ್ ಗೌಡ ಶ್ಲಾಘನೆ

KannadaprabhaNewsNetwork | Published : Aug 27, 2024 1:40 AM

ಸಾರಾಂಶ

ಸಂಘದ ಷೇರುದಾರರು ಮತ್ತು ಆಡಳಿತ ಮಂಡಳಿ ನಿರ್ದೇಶಕರ ನೆರವಿನಿಂದ ಹೊಸದಾಗಿ 9 ಮಳಿಗೆಗಳ ನಿರ್ಮಾಣ ಕಾರ್ಯ ಸಂಪನ್ನಗೊಂಡಿದೆ. ಇನ್ನೂ 9 ಮಳಿಗೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಮುಂದೆ ಬಾಡಿಗೆಯಿಂದ ವಾರ್ಷಿಕ 2.10 ಲಕ್ಷ ರು. ಗಳ ಆದಾಯ ದೊರಕಲಿದೆ.

ಕನ್ನಡಪ್ರಭ ವಾರ್ತೆ ಹುಣಸೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ವು ಆರ್ಥಿಕ ಸದೃಢತೆಯತ್ತ ಸಾಗುವ ಮೂಲಕ ರೈತರಿಗೆ ಹೆಚ್ಚಿನ ನೆರವು ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಸಂತೆಮಾಳ ಮುಂಭಾಗದ ಅಕ್ಕಿಗಿರಣಿ ಆವರಣದಲ್ಲಿ ಸೋಮವಾರ ಸಂಘದ ವತಿಯಿಂದ ನಿರ್ಮಾಣಗೊಂಡಿರುವ 9 ಮಳಿಗೆಗಳ ಉದ್ಘಾಟನೆ ಮತ್ತು ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.2023-24ನೇ ಸಾಲಿನಲ್ಲಿ ಸಂಘವು 10.10 ಲಕ್ಷ ರು. ಗಳ ನಿವ್ವಳ ಲಾಭ ಗಳಿಸಿರುವುದು ಸಂಘದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದಂತಾಗಿದೆ. ಇದಲ್ಲದೇ ಇದೀಗ ಸಂಘದ ವತಿಯಿಂದ ಶಿಥಿಲಾವಸ್ಥೆಯಲ್ಲಿದ್ದ 9 ಮಳಿಗೆಗಳನ್ನು ಮರುನಿರ್ಮಾಣ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಇನ್ನು 9 ಮಳಿಗೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆರ್ಥಿಕ ಭದ್ರತೆ ಇದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಸಂಘದ ಅಧ್ಯಕ್ಷರಾದಿಯಾಗಿ ಎಲ್ಲರೂ ಅತ್ಯಂತ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಟಿಎಪಿಸಿಎಂಎಸ್ನ ಆಸ್ತಿಯಾಗಿರುವ ಪಿಎಲ್. ಡಿ ಬ್ಯಾಂಕ್ ಆವರಣ ಮತ್ತು ಕಸಬಾ ವಿಎಸ್.ಎಸ್.ಎನ್. ಭಾಗಗಳಲ್ಲೂ ಕೂಡ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.ಸಂಘದ ಅಧ್ಯಕ್ಸ ಬಸವಲಿಂಗಯ್ಯ ಮಾತನಾಡಿ, ಸಂಘದ ಷೇರುದಾರರು ಮತ್ತು ಆಡಳಿತ ಮಂಡಳಿ ನಿರ್ದೇಶಕರ ನೆರವಿನಿಂದ ಹೊಸದಾಗಿ 9 ಮಳಿಗೆಗಳ ನಿರ್ಮಾಣ ಕಾರ್ಯ ಸಂಪನ್ನಗೊಂಡಿದೆ. ಇನ್ನೂ 9 ಮಳಿಗೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಮುಂದೆ ಬಾಡಿಗೆಯಿಂದ ವಾರ್ಷಿಕ 2.10 ಲಕ್ಷ ರು. ಗಳ ಆದಾಯ ದೊರಕಲಿದೆ ಎಂದರು.ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಜಯರಾಂ, ಉಪಾಧ್ಯಕ್ಷ ರೇವಣ್ಣ, ನಿರ್ದೇಶಕರಾದ ಎ.ಸಿ. ಕೆಂಪೇಗೌಡ, ಬಿ. ನಾಗರಾಜು, ಬಿ.ಎನ್. ವೆಂಕಟೇಶ್, ರಮೇಶ್, ಎಚ್.ಎನ್. ಚಂದ್ರಶೇಖರ್, ಎಚ್. ಪ್ರೇಮ್ ಕುಮಾರ್, ಸುಜಾತ, ಇಂದುಕಲಾ, ಮಂಗಳಗೌರಿ, ಪ್ರಭಾರ ಕಾರ್ಯದರ್ಶಿ ಹೇಮಲತಾ, ಸಿಬ್ಬಂದಿವರ್ಗದವರಾದ ರವಿಕುಮಾರ್, ಸಿ. ವೆಂಕಟೇಶ್, ಎಚ್.ಪಿ. ಮಧು, ಷೇರುದಾರರು ಪಾಲ್ಗೊಂಡಿದ್ದರು.

Share this article