ನರೇಗಾ ಯೋಜನೆಯಲ್ಲಿ ಗುರಿ ಸಾಧಸಬೇಕು: ಸಿಇಒ ಈಶ್ವರ ಕಾಂದೂ

KannadaprabhaNewsNetwork | Published : Apr 9, 2025 12:33 AM

ಸಾರಾಂಶ

ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಮೋದಿತ ಗುರಿಯನ್ನು ಸಾಧಿಸಲು ಕ್ರಮವಹಿಸಬೇಕು

ಕಾರವಾರ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಮೋದಿತ ಗುರಿಯನ್ನು ಸಾಧಿಸಲು ಕ್ರಮವಹಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಹೇಳಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನರೇಗಾ ಯೋಜನೆಯಡಿ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಅತಿ ಹೆಚ್ಚು ಕೂಲಿಕಾರರು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಅನುಷ್ಠ್ಠಾನ ಇಲಾಖೆಗಳು ಉತ್ತಮ ಸಹಕಾರ ನೀಡಬೇಕು. ಪ್ರಸ್ತುತ ಕೂಲಿ ಮೊತ್ತ ಸಹ ₹ 349 ನಿಂದ ₹ 370 ಹೆಚ್ಚಳವಾಗಿದೆ. ಜತೆಗೆ ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಕಾರಣ ಕೂಲಿಕಾರರ ಆರೋಗ್ಯ ಹಿತದೃಷ್ಟಿಯಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಲಸದ ಪ್ರಮಾಣದಲ್ಲಿ ಶೇ. 30 ರಿಯಾಯಿತಿ ಸಹ ಮಾಡಲಾಗಿದೆ. ಆದ್ದರಿಂದ ಕೂಲಿಕಾರರು ಬೇಸಿಗೆಯಲ್ಲಿ ವಲಸೆ ಹೋಗದೆ ಸ್ವಗ್ರಾಮದಲ್ಲಿಯೇ ಮನರೇಗಾ ಯೋಜನೆಯಡಿ ಉದ್ಯೋಗ ಪಡೆಯುವಂತೆ ಅವಕಾಶ ನೀಡಬೇಕು ಎಂದು ಹೇಳಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆ ಸಂಬಂಧಿಸಿದಂತೆ ಕಾಮಗಾರಿ ಪೂರ್ಣಗೊಳಿಸುವಿಕೆ, ಆದ್ಯತಾ ಕಾಮಗಾರಿಗಳು, ಸಾಮಾಜಿಕ ಲೆಕ್ಕ ಪರಿಶೋಧನೆ, ಬೂದು ನೀರು ನಿರ್ವಹಣೆ ಕಾಮಗಾರಿ ಸೇರಿದಂತೆ ವಿವಿಧ ಅಂಶಗಳ ಪ್ರಗತಿ ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ ಅವರು, ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಗ್ಗಿಸಲು ಭೌಗೋಳಿಕ ವರದಿ ಅನುಸಾರ ಅವಶ್ಯಕತೆ ಇರುವಲ್ಲಿ ಕೊಳವೆ ಬಾವಿ ಮರುಪೂರಣ ಘಟಕ ನಿರ್ಮಿಸಬೇಕು. ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯತ್ಯಯವಾಗದಂತೆ ಅಗತ್ಯ ಮುತುವರ್ಜಿ ವಹಿಸಬೇಕು ಎಂದರು.

ಯೋಜನಾ ನಿರ್ದೇಶಕ ಕರೀಂ ಅಸದಿ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ ಮೊದಲಾದವರು ಇದ್ದರು.

Share this article