ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ಕೂಡ ಕೆಲವು ಕುಟುಂಬಗಳು ಈವರೆಗೂ ಶಾಶ್ವತ ನೆಲೆ ಇಲ್ಲದ ಹಾಗೆ ಜೀವನ ಸಾಗಿಸುತ್ತಿವೆ. ಆ ಹಿನ್ನೆಲೆಯಲ್ಲಿ ಸರ್ಕಾರ ಕಂದಾಯ ಗ್ರಾಮ ಅಭಿಯಾನವನ್ನು ಕೈಗೆತ್ತಿಗೊಂಡು ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕಂದಾಯ ಗ್ರಾಮ ಅಭಿಯಾನದಡಿ 30 ಸಾವಿರ ಹಕ್ಕುಪತ್ರಗಳನ್ನು ಕೊಡಲು ಗುರಿ ನಿಗದಿಪಡಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕಂದಾಯ ವಿಷಯಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ಕೂಡ ಕೆಲವು ಕುಟುಂಬಗಳು ಈವರೆಗೂ ಶಾಶ್ವತ ನೆಲೆ ಇಲ್ಲದ ಹಾಗೆ ಜೀವನ ಸಾಗಿಸುತ್ತಿವೆ. ಆ ಹಿನ್ನೆಲೆಯಲ್ಲಿ ಸರ್ಕಾರ ಕಂದಾಯ ಗ್ರಾಮ ಅಭಿಯಾನವನ್ನು ಕೈಗೆತ್ತಿಗೊಂಡು ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಮುಂದಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಅಭಿಯಾನವನ್ನು ಕರಾರುವಕ್ಕಾಗಿ ಮಾಡಲಾಗುತ್ತಿದೆ. ಕನಿಷ್ಠ 10 ಮನೆಗಳ ವಾಸವಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗುರ್ತಿಸಲಾಗುತ್ತಿದೆ. ಈಗಿರುವ ಗ್ರಾಮಗಳು, ಕಂದಾಯ ಗ್ರಾಮಗಳನ್ನು ಹೊರತುಪಡಿಸಿ ದಾಖಲೆ ಇಲ್ಲದೆ ವಾಸ ಮಾಡುತ್ತಿರುವ ಜನವಸತಿ ಪ್ರದೇಶಗಳನ್ನು ಗುರುತಿಸುವಂತಹ ಕೆಲಸವನ್ನು ಕಂದಾಯ ಇಲಾಖೆ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ (ಆರ್ ಡಿಪಿಆರ್) ಇಲಾಖೆ, ಸರ್ವೆ ಇಲಾಖೆಗಳು ಸಮನ್ವಯ ಸಾಧಿಸಿಕೊಂಡು ಮಾಡುತ್ತಿವೆ. ಜಿಲ್ಲೆಯಲ್ಲಿ ಪ್ರಸ್ತುತ 1,522 ಮೂಲ ಕಂದಾಯ ಗ್ರಾಮಗಳಿದ್ದು, ಈ ಪೈಕಿ 344 ಗ್ರಾಮಗಳನ್ನು ಕಂದಾಯ ಗ್ರಾಮ, ಉಪಗ್ರಾಮ ಹಾಗೂ ಗ್ರಾಮಠಾಣಾ ವಿಸ್ತರಣೆ ಎಂದು ಗುರ್ತಿಸಲಾಗಿದೆ. ಈ ಪ್ರದೇಶಗಳನ್ನು ಹೊರತುಪಡಿಸಿ ಬಾಕಿ ಇರುವ ದಾಖಲೆ ರಹಿತ ಜನವಸತಿಗಳನ್ನು ಗುರುತಿಸುವ ಕೆಲಸ ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಒಟ್ಟಾರೆ ದಾಖಲೆ ಇಲ್ಲದೆ ವಾಸಿಸುತ್ತಿರುವ ನಿವಾಸಿಗಳಿಗೆ 30,000 ಹಕ್ಕುಪತ್ರಗಳನ್ನು ನೀಡಲು ಜಿಲ್ಲಾಡಳಿತದಿಂದ ಕ್ರಮವಹಿಸಲಾಗುತ್ತಿದೆ ಎಂದರು.ದರಖಾಸ್ತು ಪೋಡಿ, ಇ ಪೌತಿ ಖಾತೆ, ಸಾಮಾಜಿಕ ಭದ್ರತಾ ಯೋಜನೆ ಹಾಗೂ ಕಂದಾಯ ಗ್ರಾಮಗಳ ಹಕ್ಕುಪತ್ರಗಳು ಸೇರಿದಂತೆ ಕಂದಾಯ ಇಲಾಖೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ಮಾನ್ಯ ಕಂದಾಯ ಸಚಿವರಿಂದ ಈ ತಿಂಗಳ ಅಂತ್ಯದಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ವಿತರಣೆ ಮಾಡಲು ಯೋಜಿಸಲಾಗಿದೆ. ಅಂದು ಆಶ್ರಯ ಯೋಜನೆಯಡಿ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನಲ್ಲಿ 2,243 ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುವುದು. 2790 ದರಖಾಸ್ತು ಪೋಡಿ, 1956 ಕಂದಾಯ ಗ್ರಾಮಗಳ ಹಕ್ಕುಪತ್ರಗಳು, 4858 ಇ-ಪೌತಿ ಖಾತೆಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ 3200 ಫಲಾನುಭವಿಗಳಿಗೆ ಸೌಲತ್ತುಗಳ ದೊರಕಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪ್ರಸ್ತುತದ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ 11,000 ಕ್ಕೂ ಹೆಚ್ಚು ಪೋಡಿಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಯೋಜನೆಯು ಮುಂದಿನ ವರ್ಷದ ವೇಳೆಗೆ ಜಿಲ್ಲೆಗೆ ನೀರು ಲಭ್ಯವಾಗುವ ಸಾಧ್ಯತೆ ಇದೆ. ಈ ಎತ್ತಿನಹೊಳೆ ನೀರನ್ನು ಜಿಲ್ಲೆಯಲ್ಲಿ ಸದುಪಯೋಗಪಡಿಸಿಕೊಳ್ಳಲು ಪೂರ್ವ ಸಿದ್ಧತಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಜಿ.ಪ್ರಭು, ಜಿಪಂ ಸಿಇಒ ಡಾ. ವೈ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಸಿಕೆಬಿ-5 ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕಂದಾಯ ವಿಷಯಗಳ ಕುರಿತು ಸಚಿವ ಡಾ. ಎಂ.ಸಿ. ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.