ತರೀಕೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಪ್ರಗತಿಗೆ ಹಿರಿಮೆಯ ಗರಿ

KannadaprabhaNewsNetwork | Published : Apr 7, 2025 12:33 AM

ಸಾರಾಂಶ

ತರೀಕೆರೆ, ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುತ್ತಿದ್ದ ದಿನಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಜನಸ್ನೇಹಿಯಾಗುವ ನಿಟ್ಟಿನಲ್ಲಿ ಅಗಾಧ ಬದಲಾವಣೆಯೊಂದಿಗೆ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆಗೆ ಉತ್ತಮ ನಿದರ್ಶನವಾಗಿದೆ ತರೀಕೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ. ಈ ಆಸ್ಪತ್ರೆಯ ರಕ್ತಪರೀಕ್ಷಾ ಕೇಂದ್ರ ತನ್ನ ಉತ್ಕೃಷ್ಠ ದರ್ಜೆಯ ಪರೀಕ್ಷೆಗಳಿಗೆ ನ್ಯಾಕೋ ಸರ್ಟಿಫಿಕೇಟ್ ಗಳಿಸಿ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎಚ್.ಐವಿ ಪ್ರಯೋಗಾಲಯಕ್ಕೆ ರಾಷ್ಟ್ರಮಟ್ಟದ ಮಾನ್ಯತೆ । ರಕ್ತ ಪರೀಕ್ಷೆ ಲ್ಯಾಬ್ ಗೆ ಫೈವ್ ಸ್ಟಾರ್ ರೇಟಿಂಗ್ ನ್ಯಾಕೋ ಸರ್ಟಿಫಿಕೇಟ್

ಕನ್ನಡಪ್ರಭ ವಾರ್ತೆ, ತರೀಕೆರೆ

ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುತ್ತಿದ್ದ ದಿನಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಜನಸ್ನೇಹಿಯಾಗುವ ನಿಟ್ಟಿನಲ್ಲಿ ಅಗಾಧ ಬದಲಾವಣೆಯೊಂದಿಗೆ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆಗೆ ಉತ್ತಮ ನಿದರ್ಶನವಾಗಿದೆ ತರೀಕೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ. ಈ ಆಸ್ಪತ್ರೆಯ ರಕ್ತಪರೀಕ್ಷಾ ಕೇಂದ್ರ ತನ್ನ ಉತ್ಕೃಷ್ಠ ದರ್ಜೆಯ ಪರೀಕ್ಷೆಗಳಿಗೆ ನ್ಯಾಕೋ ಸರ್ಟಿಫಿಕೇಟ್ ಗಳಿಸಿ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸರ್ಕಾರಿ ಆಸ್ಪತ್ರೆ ಎಂದರೆ ಗಲೀಜು, ವಾಸನೆ, ರೋಗಿಗಳಿಗೆ ಸ್ಪಂದಿಸುವವರೇ ಕಡಿಮೆ ಎಂಬಂತ ವಾತಾವಣದಿಂದ ಭಿನ್ನವಾಗಿರುವ ಈ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಪ್ರಥಮವಾಗಿ ಎದ್ದು ಕಾಣುವ ಸ್ವಚ್ಛತೆ, ಲಭ್ಯವಿರುವ ಗುಣಮಟ್ಟದ ಚಿಕಿತ್ಸೆ, ವೈದ್ಯರು, ರೋಗಿಗಳಿಗೆ ಸ್ಪಂದಿಸುವ ಸಿಬ್ಬಂದಿ ಹಾಗೂ ಇದಕ್ಕೆಲ್ಲಾ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿ ರುವುದರಿಂದ ಈ ಸಾರ್ವಜನಿಕ ಆಸ್ಪತ್ರೆ ಪ್ರಶಂಸೆಗೆ ಪಾತ್ರವಾಗಿದೆ. ಈ ವೈಶಿಷ್ಟ್ಯತೆಯಿಂದಾಗಿ ಜನರು ಆಸ್ಪತ್ರೆ ಬಗ್ಗೆ ಹೆಚ್ಚು ಒಲುವು ತೋರುತ್ತಿದ್ದಾರೆ.

ಗುಣಮಟ್ಟದ ಚಿಕಿತ್ಸೆಗೆ ನುರಿತ ತಜ್ಞ ವೈದ್ಯರು, ಶುಶ್ರೂಷಕರಿಗೆ ಹಾಗೂ ಕಚೇರಿ ಸಿಬ್ಬಂದಿಗೂ ವಿಶೇಷ ತರಬೇತಿ ನೀಡಿ ಪ್ರತಿನಿತ್ಯ ಉತ್ತಮ ಸೇವೆ ಒದಗಿಸಲಾಗುತ್ತಿದೆ. ಈ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಜನ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರೆ, 30ಕ್ಕೂ ಹೆಚ್ಚು ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆದವರು ಆಸ್ಪತ್ರೆಯಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ನಿತ್ಯ ರೋಗಿಗಳಿಗೆ ಉತ್ತಮ ಆಹಾರ ನೀಡುವ ವ್ಯವಸ್ಥೆ ಜತೆಗೆ ಯಾವುದೇ ಔಷಧಿಗಳ ಕೊರತೆ ಇಲ್ಲದಂತೆ ಸಾರ್ವಜನಿಕ ಆಸ್ಪತ್ರೆ ಕ್ರಮವಹಿಸಲಾಗಿದೆ. ಇಂತಹ ಎಲ್ಲಾ ಸೇವಾ ಸೌಕರ್ಯದಲ್ಲಿ ಒದಗಿಸುವಲ್ಲಿ ಸಿಬ್ಬಂದಿಗಳ ಪಾತ್ರ ದೊಡ್ಡದಾಗಿದೆ. ಅಗತ್ಯ ಆಂಬುಲೆನ್ಸ್ ಸೇವೆ, ಆಸ್ಪತ್ರೆಯ ಪ್ರತಿ ವಾರ್ಡು, ಎಲ್ಲಾ ಕೊಠಡಿಗಳ ಸ್ವಚ್ಛತೆಗೆ ನೀಡುತ್ತಿರುವ ಆದ್ಯತೆ ಆಸ್ಪತ್ರೆಗೆ ಬರುವವರಿಗೆ ಕೈಬೀಸಿ ಕರೆಯುತ್ತಿದೆ.

ಪ್ರಸ್ತುತ ಇರುವ ಸೌಲಭ್ಯಗಳ ಜತೆ ಮತ್ತಷ್ಟು ಸುವ್ಯವಸ್ಥೆ ನೀಡಲು ಆಸ್ಪತ್ರೆಗೆ ₹1.5 ಕೋಟಿ ಮೌಲ್ಯದ ಸಿ ಎಸ್ ಆರ್ ಫಂಡ್ ನ ಉಪಕರಣಗಳು ಸದ್ಯದಲ್ಲೇ ಬಿಇಎಲ್ ಕಂಪನಿಯಿಂದ ಸರಬರಾಜು ಆಗುತ್ತಿದೆ. ಇಂತಹ ಎಲ್ಲಾ ಕಾರ್ಯಗಳಿಗೂ ಬೆಂಗಾ ವಲಾಗಿ ನಿಂತ ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ.

ಪ್ರಶಸ್ತಿ ಪತ್ರಗಳು: ಎಚ್ಐವಿ ಪರೀಕ್ಷೆಯಲ್ಲಿ ಸ್ಥಿರತೆಯನ್ನು ಉನ್ನತ ಗುಣಮಟ್ಟದ ಗುಣಮಟ್ಟವನ್ನು ಕಾಯ್ದುಕೊಂಡಿರುವುದಕ್ಕಾಗಿ ಆಸ್ಪತ್ರೆಯ ಎಚ್ಐವಿ ಪರೀಕ್ಷೆ ಮಾಡುವ ಲ್ಯಾಬೋ ರೇಟರಿಗೆ ನ್ಯಾಷನಲ್‌ ಏಡ್ಸ್‌ ಕಂಟ್ರೋಲ್‌ ಆರ್ಗನೈಸೇಷನ್‌ ನಿಂದ (NACO)ಫೈವ್ ಸ್ಟಾರ್ ರೇಟಿಂಗ್ ಸರ್ಟಿಫಿ ಕೇ ಟ್ ಮಾನ್ಯತೆ ನೀಡಿದೆ. ಅದೇ ರೀತಿ

national accreditation board for testing and calibration laboratories(NABL) ( ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳಿಗಾಗಿ ರಾಷ್ಟ್ರೀಯ ಮಾನ್ಯತೆ ಮಂಡಳಿ) ರಾಷ್ಟ್ರಮಟ್ಟದ ಮೂರು ವರ್ಷದ ಸರ್ಟಿಫಿಕೇಟ್ ದೊರೆತಿರುವುದು ಇಲ್ಲಿ ನಡೆಸುವ ಗುಣಮಟ್ಟದ ಪರೀಕ್ಷೆಗಳಿಗೆ ಹೆಚ್ಚಿನ ಮಾನ್ಯತೆ ತಂದುಕೊಟ್ಟಿದೆ.

ಆಸ್ಪತ್ರೆ ಸುಸಜ್ಜಿತ ರಕ್ತ ಶೇಖರಣ ಘಟಕ ಹೊಂದಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸಹಯೋಗದಲ್ಲಿ ವರ್ಷಕ್ಕೆ 4-5 ಬಾರಿ ರಕ್ತದಾನ ಶಿಬಿರ ಸಂಘಟಿಸಿ, ಗರ್ಭಿಣಿ, ಬಾಣಂತಿಯರಿಗೆ ತುರ್ತು ಸಂದರ್ಭಗಳ ಚಿಕಿತ್ಸೆಗೆ ಲಭ್ಯವಿರುವಂತೆ ನೋಡಿಕೊಳ್ಳ ಲಾಗುತ್ತಿದೆ. ಈವರೆಗೂ ಬಾಣಂತಿ, ಗರ್ಭಿಣಿಯರ ಆರೋಗ್ಯ ನಿರ್ವಹಣೆಯನ್ನು ಉತ್ತಮವಾಗಿ ಮಾಡಿಕೊಂಡು ಬಂದು, ಉತ್ತಮ ಚಿಕಿತ್ಸೆ ಒದಗಿಸುತ್ತಿರುವುದರಿಂದ ಅತಿ ಹೆಚ್ಚು ಮಹಿಳೆಯರು ಅದರಲ್ಲೂ ಗರ್ಭಿಣಿಯರು ಹೆರಿಗೆಗಾಗಿ ಈ ಆಸ್ಪತ್ರೆಯನ್ನೇ ಅವಲಂಭಿಸಿದ್ದಾರೆ. ಇದನ್ನರಿತ ಸರ್ಕಾರ ತರೀಕೆರೆ ಪಟ್ಟಣಕ್ಕೆ 100 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಯನ್ನು ಕೊಡುಗೆ ಯಾಗಿ ನೀಡಿದೆ. ಶೀಘ್ರದಲ್ಲೇ ಆ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಇದು ಸ್ಥಳೀಯರಿಗೆ ವರದಾನವಾಗಿ ಪರಿಣಮಿಸಲಿದೆ.ಇದಲ್ಲದೆ ಮೂಲಭೂತ ಸೌಕರ್ಯಗಳ ಜತೆಗೆ ಹೆಚ್ಚುವರಿ ಅವಶ್ಯಕತೆ ಗಳಿಗನುಗುಣವಾಗಿ ಮಳೆಗಾಲದಲ್ಲಿ ಸೋರದಂತೆ, ಬೇಸಿಗೆಯಲ್ಲಿ ಬಿಸಿಲ ಬೇಗೆ ತಟ್ಟದಂತೆ ಮೇಲ್ಚಾವಣಿ ಹೊದಿಸಿ, ಇದೀಗ ಮಾಡಿಸಿರುವ ಸುಣ್ಣ ಬಣ್ಣದಿಂದಾಗಿ ಇಡೀ ಆಸ್ಪತ್ರೆ ನಳನಳಿಸುತ್ತಿದೆ.

ರೋಗಿಗಳು ಬಿಪಿಎಲ್‌ ಮತ್ತು ಆಧಾರ್ ಕಾರ್ಡ್ ಸಹಿತ ಆಸ್ಪತ್ರೆಗೆ ಬಂದರೆ ಉಚಿತವಾಗಿ ಎಲ್ಲ ಪರೀಕ್ಷೆಗಳನ್ನು ಮಾಡಿಸಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

-- ಬಾಕ್ಸ್--

ಸಾರ್ವಜನಿಕರ ಅನಿಸಿಕೆ, ಅಭಿಪ್ರಾಯಕ್ಕೆ ಮುಕ್ತ ಸ್ವಾಗತಆಸ್ಪತ್ರೆ ಬಗ್ಗೆ ರೋಗಿಗಳು ಅಥವಾ ಸಾರ್ವಜನಿಕರು ತಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಲು ಆಸ್ಪತ್ರೆ ಹೆಸರಿನಲ್ಲಿ ಫೇಸ್ ಬುಕ್ ಐಡಿ ತೆರೆಯಲಾಗಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್ ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯ ಕುರಿತಂತೆ ಸರ್ಕಾರದ ಎಲ್ಲಾ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.

4ಕೆಟಿಆರ್.ಕೆ.1ಃ ತರೀಕೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ.4ಕೆಟಿಆರ್.ಕೆ.2ಃ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್

Share this article