ಮಳೆಗಾಲದಲ್ಲಿ ವಿವಿಧ ಇಲಾಖೆಗಳ ಕಾರ್ಯಪಡೆ ರಚನೆ: ಮೇಯರ್‌ ರಾಮಪ್ಪ ಬಡಿಗೇರ

KannadaprabhaNewsNetwork |  
Published : Apr 03, 2025, 12:33 AM IST
ಹು-ಧಾ ಮಹಾನಗರ ಪಾಲಿಕೆಯಲ್ಲಿ ಮೇಯರ್‌ ರಾಮಪ್ಪ ಬಡಿಗೇರ ಅವರಿಂದ ಫೋನ್ ಇನ್ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ವಿವಿಧ ವಲಯ ವ್ಯಾಪ್ತಿಯಲ್ಲಿ ಸಂಭವಿಸುವ ತುರ್ತು ಪರಿಸ್ಥಿತಿಯನ್ನು ಈ ಕಾರ್ಯಪಡೆ ನಿಭಾಯಿಸಲಿದೆ. ತುರ್ತು ಪರಿಸ್ಥಿತಿ ನಿಭಾಯಿಸುವ ಉದ್ದೇಶದಿಂದ ಪಾಲಿಕೆಯ ಪ್ರತಿ ಸದಸ್ಯರಿಗೆ ತಲಾ ₹25 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ನಿರ್ಧರಿಸಲಾಗಿದೆ ಎಂದು ಮಹಾಪೌರ ರಾಮಪ್ಪ ಬಡಿಗೇರ ಹೇಳಿದರು.

ಹುಬ್ಬಳ್ಳಿ: ಮಳೆಗಾಲದ ಹಿನ್ನೆಲೆಯಲ್ಲಿ ಅಗತ್ಯ ತುರ್ತು ಕಾರ್ಯಾಚರಣೆಗೆ ಹಾಗೂ ಮುಂಜಾಗ್ರತಿಗಾಗಿ ಹು-ಧಾ ಮಹಾನಗರ ಪಾಲಿಕೆ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಕಾರ್ಯಪಡೆ ರಚಿಸಲಾಗಿದೆ. ತುರ್ತು ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರಿಗೆ ತಕ್ಷಣ ಹಣ ನೀಡಲು ನಿರ್ಧರಿಸಲಾಗಿದೆ ಎಂದು ಮಹಾಪೌರ ರಾಮಪ್ಪ ಬಡಿಗೇರ ಹೇಳಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ ಈ ಕಾರ್ಯಪಡೆಯ ನೇತೃತ್ವವನ್ನು ಪಾಲಿಕೆ ವಲಯ ಸಹಾಯಕ ಆಯುಕ್ತರು ವಹಿಸಿಕೊಳ್ಳಲಿದ್ದಾರೆ. ವಿವಿಧ ವಲಯ ವ್ಯಾಪ್ತಿಯಲ್ಲಿ ಸಂಭವಿಸುವ ತುರ್ತು ಪರಿಸ್ಥಿತಿಯನ್ನು ಈ ಕಾರ್ಯಪಡೆ ನಿಭಾಯಿಸಲಿದೆ. ತುರ್ತು ಪರಿಸ್ಥಿತಿ ನಿಭಾಯಿಸುವ ಉದ್ದೇಶದಿಂದ ಪಾಲಿಕೆಯ ಪ್ರತಿ ಸದಸ್ಯರಿಗೆ ತಲಾ ₹25 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.

ಮಳೆಗಾಲದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮೇ ತಿಂಗಳಿನಿಂದ ಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರ ಮುಂಜಾಗ್ರತಾ ಕಾರ್ಯ ಕೈಗೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಏಪ್ರಿಲ್‌ನಿಂದಲೇ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದರು.

ಕೈಗಾರಿಕೆ ವಸಾಹತುಗಳಲ್ಲಿನ ಕೈಗಾರಿಕೆ ಕಟ್ಟಡಗಳಿಗೆ ಇ ಸ್ವತ್ತು ನೀಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈಚೆಗೆ ಸಭೆ ನಡೆದಿದೆ. ಕೈಗಾರಿಕೋದ್ಯಮಿಗಳು ಕೆಐಎಡಿಬಿಗೆ ಸರ್ವೀಸ್ ಚಾರ್ಜ್ ತುಂಬುತ್ತಾರೆ ಅಷ್ಟೇ. ಆದರೆ, ಪಾಲಿಕೆಗೆ ತೆರಿಗೆ ಪಾವತಿಸುವುದು ಕಡ್ಡಾಯ ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡದಲ್ಲಿರುವ ರೈಲ್ವೆ ಆಸ್ತಿಯಿಂದ ಬಾಕಿ ತೆರಿಗೆ ಬರಬೇಕಿದೆ. ಇದಕ್ಕಾಗಿ ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಸುಮಾರು ₹17 ಕೋಟಿ ತೆರಿಗೆ ಬರಬೇಕಿದೆ. ಈ ಆರ್ಥಿಕ ವರ್ಷದಲ್ಲಿ ₹140 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇದೆ ಎಂದರು.

ಗುತ್ತಿಗೆದಾರರು ಸಹಕರಿಸಿ

ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಬೇಕು. ಬಿಲ್‌ ಪಾವತಿಯಾಗಿಲ್ಲ ಎಂಬ ಕಾರಣ ಹೇಳಬಾರದು. ಆದ್ಯತೆ ಆಧರಿಸಿ ಬಿಲ್ ಪಾವತಿ ಮಾಡಲಾಗುತ್ತಿದೆ. ಅವಳಿ ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಸೇರಿದಂತೆ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.39 ದೂರು ಸಲ್ಲಿಕೆ

ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಒಟ್ಟು 25 ಮಂದಿ ಕರೆ ಮಾಡಿದ್ದು, 39 ದೂರುಗಳು ಸಲ್ಲಿಕೆಯಾಗಿವೆ. ಎ ಕೆಟಗರಿಯ 22, ಬಿ ಕೆಟಗರಿಯ 1 ಹಾಗೂ ಸಿ ಕೆಟಗರಿಯ 16 ದೂರುಗಳು ಬಂದಿವೆ. ಕಳೆದ ಫೋನ್‌–ಇನ್‌ ಕಾರ್ಯಕ್ರಮಗಳಲ್ಲಿ ಸಲ್ಲಿಕೆಯಾಗಿದ್ದ ಸಿ ಕೆಟಗರಿಯ 16 ದೂರುಗಳಿಗೆ ಸಂಬಂಧಿಸಿದ ಪರಿಹಾರ ಕಾರ್ಯ ಬಾಕಿ ಇದೆ. ಹೊಸ ಬಡಾವಣೆಗಳಲ್ಲಿ ಮೂಲಸೌಕರ್ಯ ಕೊರತೆ ಕುರಿತ ದೂರುಗಳೇ ಅಧಿಕ ಪ್ರಮಾಣದಲ್ಲಿವೆ ಎಂದು ಮೇಯರ್‌ ರಾಮಪ್ಪ ಬಡಿಗೇರ ತಿಳಿಸಿದರು..

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ