ಕನ್ನಡಪ್ರಭ ವಾರ್ತೆ ಕೊರಟಗೆರೆ
ಮಿನಿ ಲಾಲ್‌ಬಾಗ್‌ಗೆ ವನಮಹೋತ್ಸವ ಭೇಟಿ ಕಾರ್ಯಕ್ರಮಕ್ಕೆ ಶಾಲೆಯ ಸಹ ಶಿಕ್ಷಕ ಅನಂತರಾಮು ಅವರ ಟಾಟಾ ಏಸ್ ವಾಹನದಲ್ಲಿ (ಅವರೇ ಚಾಲಕ) ಹೋಗಿ ಬರುವಾಗ ಮುಖ್ಯರಸ್ತೆಯ ತಿರುವಿನಲ್ಲಿ ಟಾಟಾ ಎಸ್ ವಾಹನ ಪಲ್ಪಿ ಹೊಡೆದು ವಾಹನದಲ್ಲಿದ್ದ ೧೫ ಜನ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿ ೨೦ಕ್ಕೂ ಹೆಚ್ಚು ಮಕ್ಕಳ ಜೊತೆ ಶಿಕ್ಷಕರು ಅಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರ ನಡೆದಿದೆ.ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ದೊಡ್ಡಸಾಗ್ಗೆರೆ ಮತ್ತು ಮಾವತ್ತೂರು ಮುಖ್ಯರಸ್ತೆಯ ಗೌಡನಕುಂಟೆ ಕ್ರಾಸಿನ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಎಸ್ ವಾಹನ ಪಲ್ಟಿಹೊಡೆದು ೧೫ಜನ ಮಕ್ಕಳ ಕೈಕಾಲು, ತಲೆ, ಹೊಟ್ಟೆ ಮತ್ತು ಮೂಗಿಗೆ ಗಂಭೀರ ಗಾಯಗಳಾಗಿ ದೊಡ್ಡಸಾಗ್ಗೆರೆ ಮತ್ತು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಚಿಂಪುಗಾನಹಳ್ಳಿ ಸರಕಾರಿ ಪ್ರಾಥಮಿಕ ಪಾಠಶಾಲೆಯಿಂದ ಹೊರಸಂಚಾರದ ರೂಪದಲ್ಲಿ ೫ ಜನ ಶಿಕ್ಷಕರ ಜೊತೆ ೯೯ಜನ ಮಕ್ಕಳನ್ನು ದೊಡ್ಡಸಾಗ್ಗೆರೆ ಬಳಿಯ ಮಿನಿ ಲಾಲ್‌ಬಾಗ್ ವೀಕ್ಷಣೆಗೆ ಟಾಟಾಎಸ್ ವಾಹನದಲ್ಲಿ ಒಮ್ಮೆಗೆ ೩೫ಜನ ಮಕ್ಕಳಂತೆ ಕುರಿಗಳ ಹಾಗೇ ತುಂಬಿಕೊಂಡು ಹೋಗಿದ್ದ ಶಾಲೆ ಆಡಳಿತ ಮತ್ತು ಶಿಕ್ಷಣ ಇಲಾಖೆಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಾಟಾಎಸ್ ವಾಹನದಲ್ಲಿ ಸರಕಾರಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗಲು ಕೊರಟಗೆರೆ ಬಿಇಒ ನಟರಾಜ್ ಮತ್ತು ಮುಖ್ಯಶಿಕ್ಷಕ ಹನುಮಂತರಾಯಪ್ಪ ಅನುಮತಿ ನೀಡಿದ್ದಾದರೂ ಹೇಗೆ? ಸರಕು ಸಾಕಾಣಿಕೆಯ ವಾಹನದಲ್ಲಿ ಮಕ್ಕಳಿಗೆ ಕರೆದುಕೊಂಡು ಹೋಗಿ ಅಪಘಾತಕ್ಕೆ ಬಿಇಒ ಮತ್ತು ಮುಖ್ಯಶಿಕ್ಷಕ ನಿರ್ಲಕ್ಷವೇ ಮುಖ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಕ್ಕಳಿಗೆ ಆಸರೆಯಾದ ಪಿಎಸೈ
ಗೌಡನಕೆರೆ ಸಮೀಪ ಟಾಟಾಎಸ್ ವಾಹನ ಪಲ್ಟಿ ಹೊಡೆದ ಮರುಕ್ಷಣವೇ ಸ್ಥಳಕ್ಕೆ ಧಾವಿಸಿದ ಕೋಳಾಲ ಪಿಎಸೈ ಯೋಗೀಶ್ ಸ್ಥಳೀಯರ ಸಹಾಯದಿಂದ ೩೫ಜನ ಮಕ್ಕಳನ್ನು ವಾಹನದಿಂದ ಹೊರತೆಗೆದು ತನ್ನ ಖಾಸಗಿ ವಾಹನದಲ್ಲಿ ೧೫ಜನ ಮಕ್ಕಳನ್ನು ದೊಡ್ಡಸಾಗ್ಗೆರೆ ಮತ್ತು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿ ಮಾನವೀಯತೆ ಮರೆದಿದ್ದಾರೆ.ತುರ್ತು ಚಿಕಿತ್ಸೆಗೆ ಗೃಹಸಚಿವರ ಸೂಚನೆ..ವಾಹನ ಪಲ್ಟಿಯಿಂದ ತೀರ್ವವಾಗಿ ಗಾಯಗೊಂಡ ಮಿಥುನ್, ಹೇಮಂತ್, ಪ್ರಭಾಸ್, ಜೀತೆಂದ್ರ ಎಂಬ ನಾಲ್ಕು ಜನ ಮಕ್ಕಳನ್ನು ಗೃಹಸಚಿವರ ಸೂಚನೆಯಂತೆ ತುರ್ತಾಗಿ ತುಮಕೂರು ಸರಕಾರಿ ಆಸ್ಪತ್ರೆಗೆ ರವಾನಿಸಿ ಉತ್ತಮ ಚಿಕಿತ್ಸೆಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಶುಭಕಲ್ಯಾಣ್, ತಹಸೀಲ್ದಾರ್ ಮಂಜುನಾಥ ಸೇರಿದಂತೆ ಅಧಿಕಾರಿ ವರ್ಗ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಕೋಟ್.....ವನಬೇಟಿ ಕಾರ್ಯಕ್ರಮ ಮುಗಿಸಿಕೊಂಡು ಬರುವಾಗ ಟಾಟಾಎಸ್ ವಾಹನ ಪಲ್ಟಿಯಾಗಿದೆ. ಗೃಹಸಚಿವರ ಸೂಚನೆಯಂತೆ ಎಲ್ಲಾ ಮಕ್ಕಳಿಗೂ ದೊಡ್ಡಸಾಗ್ಗೆರೆ ಮತ್ತು ಕೊರಟಗೆರೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸಲಾಗಿದೆ. ೪ಜನ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆ ತುಮಕೂರು ಆಸ್ಪತ್ರೆಗೆ ರವಾನಿಸಲಾಗಿದೆ. ಮಕ್ಕಳ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ದ ಕಾನೂನು ಕ್ರಮ ಆಗುತ್ತದೆ.ಮಂಜುನಾಥ.ಕೆ. ತಹಶೀಲ್ದಾರ್, ಕೊರಟಗೆರೆ.