ತಾತಯ್ಯನವರ ತತ್ವ, ಆದರ್ಶ ಇಂದಿನ ಸಮಾಜಕ್ಕೆ ಮಾದರಿ

KannadaprabhaNewsNetwork | Published : Mar 15, 2025 1:03 AM

ಸಾರಾಂಶ

ತಾತಯ್ಯನವರಂತಹ ಮಹನೀಯರ ಬದುಕು, ತತ್ವ, ಜೀವನ ಮೌಲ್ಯವನ್ನು ಅರಿಯುವುದರ ಜೊತೆಗೆ ಅನುಸರಿಸುವುದರಿಂದ ಮಾನವನ ಬದುಕು ಹಸನಾಗುತ್ತದೆ.

ಕನ್ನಡಪ್ರಭ ವಾರ್ತೆ ಕನಕಪುರ

ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ, ಸೌಹಾರ್ದತೆ ಇರಬೇಕಾದರೇ ಕೈವಾರ ತಾತಯ್ಯನವರ ಸ್ಫೂರ್ತಿ. ಅವರ ತತ್ವ, ಆದರ್ಶದ ಮೇಲೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಕೈವಾರ ತಾತಯ್ಯನವರ ಜಯಂತಿ ಆಚರಣೆಯಲ್ಲಿ ಭಾಗಿಯಾಗಿ ಶ್ರೀ ತಾತಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕೈವಾರ ತಾತಯ್ಯನವರ ತತ್ವಪದ ಇಂದಿಗೂ ಪ್ರಸ್ತುತ. ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದವರು. ಅವರ ಆದರ್ಶಗಳನ್ನು ಜನರಿಗೆ ತಲುಪಿಸಲು ಇಂತಹ ಜಯಂತಿಗಳು ಸಹಕಾರಿ ಎಂದು ಹೇಳಿದರು.

ಬಲಿಜ ಸಮುದಾಯದ ಮುಖಂಡ ಹಾಗೂ ಉಪನ್ಯಾಸಕ ಲಕ್ಷ್ಮೀ ನಾರಾಯಣ ಮಾತನಾಡಿ, ತಾತಯ್ಯನವರಂತಹ ಮಹನೀಯರ ಬದುಕು, ತತ್ವ, ಜೀವನ ಮೌಲ್ಯವನ್ನು ಅರಿಯುವುದರ ಜೊತೆಗೆ ಅನುಸರಿಸುವುದರಿಂದ ಮಾನವನ ಬದುಕು ಹಸನಾಗುತ್ತದೆ. ಕೈವಾರ ತಾತಯ್ಯ ಸಮಾಜ ಕಟ್ಟುವ ಕೆಲಸಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಮಹಾನ್ ಪುರುಷರಾಗಿದ್ದು ತಮ್ಮ ಕಡೆಯ ಉಸಿರಿರುವವರೆಗೂ ಸಮಾಜದ ಏಳಿಗೆಗಾಗಿ ಶ್ರಮಿಸಿದ ಚಿಂತಕ, ದಾರ್ಶನಿಕರಾಗಿದ್ದಾರೆ, 1726 ರಲ್ಲಿ ಜನಿಸಿ 1836 ರಲ್ಲಿ ನಿಧನರಾದ ತಾತಯ್ಯ ನವರು 110 ವರ್ಷಗಳ ಕಾಲ ಸಾರ್ಥಕ ಬದುಕು ನಡೆಸಿ ಸಮಾಜಕ್ಕೆ ತಮ್ಮ ಕಾಲಜ್ಞಾನದ ಮೂಲಕ ಮೌಲ್ಯಾಧಾರಿತ ಕೊಡುಗೆಯನ್ನು ನೀಡಿ ಹೋಗಿದ್ದಾರೆ ಎಂದರು.

ತಾಲೂಕು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಕೃಷ್ಣ (ಕೋಟೆ ಕಿಟ್ಟಿ) ಮಾತನಾಡಿ, ಬಲಿ ಚಕ್ರವರ್ತಿಯ ಕುಲದವರಾದ ನಮ್ಮ ಜನಾಂಗ ರಾಜ್ಯದಲ್ಲಿ ಸುಮಾರು 50 ರಿಂದ 60 ಲಕ್ಷ ಜನಸಂಖ್ಯೆಯಿದ್ದು ನಮ್ಮ ಸಮುದಾಯದ ಆರಾಧ್ಯ ದೈವವಾಗಿರುವ ಶ್ರೀ ಯೋಗಿ ನಾರಾಯಣ ಜಯಂತಿಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವಂತೆ ಹಿಂದಿನ ಸರ್ಕಾರ ಆದೇಶ ಹೊರಡಿಸಿದ್ದರು. ಸಹ ಈಗಿನ ಸರ್ಕಾರ ತಾತಯ್ಯ ನವರ ಜಯಂತಿ ಆಚರಣೆಗೆ ಅಷ್ಟೇನೂ ಆಸಕ್ತಿಯನ್ನು ತೋರಿಸದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಆದರೂ ತಾತಯ್ಯ ನವರ ಜಯಂತಿಯನ್ನು ಇತರೆ ಸಮುದಾಯಗಳ ನಾಯಕರ ಜಯಂತಿಗಳಂತೆ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಮುದಾಗಲಿ ಎಂದು ಮನವಿ ಮಾಡಿದರು.

ತಾತಯ್ಯ ನವರು ಕೇವಲ ಒಂದು ಜನಾಂಗ, ಸಮುದಾಯಕ್ಕೆ ಮೀಸಲಾಗಿ ಯಾವುದೇ ಕಾರ್ಯವನ್ನು ಮಾಡದೇ ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸಿದ ಅದಮ್ಯ ಚೇತನವಾಗಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕು ದಂಡಾಧಿಕಾರಿಗಳು ಇದರ ಬಗ್ಗೆ ಆಸಕ್ತಿ ವಹಿಸಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಇಲಾಖೆ ಅಧಿಕಾರಿ ಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈವಾರ ತಾತಯ್ಯ ನವರ ಜಯಂತಿಯಲ್ಲಿ ಪಾಲ್ಗೊಂಡು ಅವರಿಗೆ ಗೌರವ ಸೂಚಿಸುವ ಕೆಲಸವನ್ನು ಮಾಡುವಂತೆ ವಿನಂತಿ ಮಾಡಿದರು.ಶಿರಸ್ತೇದಾರ್ ರಘು, ಸಾಹಿತಿ ಕೂ.ಗಿ. ಗಿರಿಯಪ್ಪ ತಾಲೂಕು ಬಲಿಜ ಸಂಘದ ಗೌರವಾಧ್ಯಕ್ಷ ಡಿ. ವೆಂಕಟರಮಣ ಸ್ವಾಮಿ ((ಗುಂಡಣ್ಣ), ಅಧ್ಯಕ್ಷ ಬಾಲರಾಜು, ಖಜಾಂಚಿ ಬಂಡಿ ನಾಗರಾಜು, ಸಮುದಾಯದ ಮುಖಂಡರಾದ ರಾಮಕೃಷ್ಣ, ಚಂದ್ರು,ನವೀನ್, ಧನಂಜಯ್, ಮುನಿಕೃಷ್ಣ, ಶೇಖರ್, ಆನಂದ್, ವೆಂಕಟೇಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ್, ಡಿ.ಶ್ರೀನಿವಾಸ್, ಶಿವಲಿಂಗಯ್ಯ, ಆನಂದ್ ಪೈ ಸೇರಿದಂತೆ ಬಲಿಜ ಸಮುದಾಯದ ಮುಖಂಡರು ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಈ ವೇಳೆ ಉಪಸ್ಥಿತರಿದ್ದರು. ಕೆ ಕೆ ಪಿ ಸುದ್ದಿ 02: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಶ್ರೀ ಕೈವಾರ ತಾತಯ್ಯ ನವರ ಜಯಂತಿ ಆಚರಣೆ ಮಾಡಲಾಯಿತು.

Share this article