ತೆರಿಗೆ ಸಂಗ್ರಹ: ಮಂಡ್ಯ ನಗರಸಭೆಯಿಂದ ಗುರಿ ಮೀರಿದ ಸಾಧನೆ

KannadaprabhaNewsNetwork |  
Published : Apr 02, 2026, 01:30 AM IST
1ಕೆಎಂಎನ್ ಡಿ11,12 | Kannada Prabha

ಸಾರಾಂಶ

2025-26ನೇ ಸಾಲಿನಲ್ಲಿ ಮಂಡ್ಯ ನಗರಸಭೆ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡಿದೆ. ನಗರ ವ್ಯಾಪ್ತಿಯಲ್ಲಿರುವ ಆಸ್ತಿಗಳಿಂದ ತೆರಿಗೆ ಸಂಗ್ರಹದ ಒಟ್ಟು ಬೇಡಿಕೆ 18.85 ಕೋಟಿ ರು. ಇದ್ದರೂ, 19.23 ಕೋಟಿ ರು. ವಸೂಲಿ ಮಾಡುವುದರೊಂದಿಗೆ ಶೇ.102ರಷ್ಟು ಪ್ರಗತಿ ಸಾಧಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

2025-26ನೇ ಸಾಲಿನಲ್ಲಿ ನಗರಸಭೆ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡಿದೆ. ನಗರ ವ್ಯಾಪ್ತಿಯಲ್ಲಿರುವ ಆಸ್ತಿಗಳಿಂದ ತೆರಿಗೆ ಸಂಗ್ರಹದ ಒಟ್ಟು ಬೇಡಿಕೆ 18.85 ಕೋಟಿ ರು. ಇದ್ದರೂ, 19.23 ಕೋಟಿ ರು. ವಸೂಲಿ ಮಾಡುವುದರೊಂದಿಗೆ ಶೇ.102ರಷ್ಟು ಪ್ರಗತಿ ಸಾಧಿಸಿದೆ.

ನಗರ ವ್ಯಾಪ್ತಿಯೊಳಗೆ 24,529 ವಸತಿ, 2575 ವಾಣಿಜ್ಯ ಹಾಗೂ 6546 ಖಾಲಿ ನಿವೇಶನ ಸೇರಿ 33,660 ಒಟ್ಟು ಆಸ್ತಿಗಳಿವೆ. ಇದರಲ್ಲಿ ವಸತಿಯಿಂದ 13.6 ಕೋಟಿ ರು., ವಾಣಿಜ್ಯದಿಂದ 5.23 ಕೋಟಿ ರು. ಹಾಗೂ ಖಾಲಿ ನಿವೇಶನದಿಂದ 40 ಲಕ್ಷ ರು. ಸೇರಿ 19.23 ಕೋಟಿ ರು. ಕರ ಸಂಗ್ರಹಿಸಿರುವುದಾಗಿ ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಮಾಹಿತಿ ನೀಡಿದ್ದಾರೆ.

2026-27ನೇ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ವಾಸದ ಕಟ್ಟಡಗಳಿಗೆ ಶೇ.4ರಷ್ಟು, ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳಿಗೆ ಶೇ.5 ಹಾಗೂ ಖಾಲಿ ನಿವೇಶನಗಳಿಗೆ ಶೇ.3ರಷ್ಟು ತೆರಿಗೆಯನ್ನು ಸರ್ಕಾರದ ನಿರ್ದೇಶನದಂತೆ ಹೆಚ್ಚಿಸಲಾಗಿದೆ. ಕಳೆದೆರಡು ವರ್ಷಗಳಿಂದ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡಿಕೊಂಡು ಬರಲಾಗಿತ್ತು.

ಕಳೆದ ವರ್ಷ ಶೇ.99ರಷ್ಟು ಸಾಧನೆ ಮಾಡುವುದರೊಂದಿಗೆ ನಗರಸಭೆ ಆದಾಯವನ್ನು ಹೆಚ್ಚಿಸಲಾಗಿತ್ತು. ನಗರಸಭೆ ಅವಧಿ ಮುಗಿದ ಬಳಿಕ ಆಡಳತಾಧಿಕಾರಿಯಾಗಿ ನೇಮಕಗೊಂಡ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕಾಲಕಾಲಕ್ಕೆ ಸಭೆ ನಡೆಸುವ ಮೂಲಕ ಅಧಿಕಾರಿಗಳಿಗೆ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಿದರು. ಪತ್ರಿ ತಿಂಗಳು ಇತ್ತಿಷ್ಟು ಪ್ರಮಾಣದ ತೆರಿಗೆ ಸಂಗ್ರಹಿಸಲೇಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಪರಿಣಾಮ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡಲಾಲು ಸಾಧ್ಯವಾಗಿದೆ.

ಈ ಬಾರಿಯೂ ನಿಗದಿತ ಸಮಯದಲ್ಲಿ ತೆರಿಗೆ ಪಾವತಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ತೆರಿಗೆ ಪಾವತಿಸುವವರ ಸಂಖ್ಯೆಯೂ ಹೆಚ್ಚಿದೆ. ಅಲ್ಲದೆ, ತೆರಿಗೆಯ ಹೊರೆ ಜೊತೆಗೆ ದಂಡವೂ ಹೆಚ್ಚು ಬೀಳುವುದರಿಂದ ಜನರೂ ಸಹ ತೆರಿಗೆ ಪಾವತಿಗೆ ಹೆಚ್ಚಿನ ಗಮನಹರಿಸುತ್ತಿದ್ದಾರೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏ.30ರವರೆಗೆ ಶೇ.5ರಷ್ಟು ರಿಯಾಯ್ತಿ:

ಪ್ರತಿ ವರ್ಷದಂತೆ ಈ ವರ್ಷವೂ ವಸತಿ, ವಾಣಿಜ್ಯ, ಕೈಗಾರಿಕೆ ಕಟ್ಟಡ ಹಾಗೂ ಖಾಲಿ ನಿವೇಶನಗಳಿಗೆ ಏ.30ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ಷ್ಟು ರಿಯಾಯ್ತಿ ಸಿಗಲಿದೆ. ಕಟ್ಟಡಗಳ ಆಸ್ತಿಯ ಮಾಲೀಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಈ ಪ್ರಯೋಜನ ಪಡೆಯಬಹುದು. ಮೇ ಮತ್ತು ಜೂನ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಯಾವುದೇ ರಿಯಾಯ್ತಿ ಮತ್ತು ದಂಡ ಇರುವುದಿಲ್ಲ. ಆದರೆ, ನಿಗದಿತ ಆಸ್ತಿ ತೆರಿಗೆಯನ್ನು ಪೂರ್ಣ ಪಾವತಿ ಮಾಡುವುದು ಕಡ್ಡಾಯವಾಗಿರುತ್ತದೆ.

ಜುಲೈ ತಿಂಗಳಿಂದ ಆಸ್ತಿ ತೆರಿಗೆ ಪಾವತಿಸುವವರು ಪ್ರತಿ ತಿಂಗಳಿಗೆ ಶೇ.3ರಷ್ಟು ದಂಡ ಸೇರಿಸಿ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ. ಒಂದು ವರ್ಷ ವಿಳಂಬ ಮಾಡಿದ ಆಸ್ತಿಗಳಿಗೆ ಶೇ.18ರಷ್ಟು ದಂಡ ಕಟ್ಟಬೇಕಾಗುತ್ತದೆ. ಮೂಲೆ ನಿವೇಶನಗಳ ಆಸ್ತಿ ಮಾಲೀಕರು ಒಟ್ಟು ತೆರಿಗೆಯ ಶೇ.10ರಷ್ಟು ಹೆಚ್ಚು ತೆರಿಗೆ ಪಾವತಿಸುವುದು ಅನಿವಾರ್ಯವಾಗಲಿದೆ.

ಖಾಲಿ ನಿವೇಶನಗಳಿಗೆ ಸ್ವಚ್ಛತಾ ಶುಲ್ಕ:

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನ ಮಾಲೀಕರಿಂದ ಪ್ರತಿ ಚದರಡಿಗೆ 0.50 ಪೈಸೆಯಂತೆ ನಿವೇಶನ ಸ್ವಚ್ಛತಾ ಶುಲ್ಕ ನಿಗದಿಪಡಿಸಲಾಗಿದೆ. ಇದು ನಿವೇಶನದ ಮೂಲ ಬೆಲೆಯ ಶೇ.0.2ರಷ್ಟಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ ಹೇಳಿದರು.

ನಿವೇಶನಗಳ ಮಾಲೀಕರು ನಿವೇಶನವನ್ನು ಸ್ವಚ್ಛವಾಗಿಟ್ಟುಕೊಂಡಿರುವ ಬಗ್ಗೆ ಛಾಯಾಚಿತ್ರ ಸಹಿತ ಹಾಜರುಪಡಿಸಿದರೆ ನಿವೇಶನದ ಸ್ವಚ್ಛತಾ ಶುಲ್ಕಕ್ಕೆ ವಿನಾಯಿತಿ ನೀಡಲಾಗುವುದು. ಕಟ್ಟಡಕ್ಕೆ ಹೊಂದಿಕೊಂಡಕ್ಕೆ ಇರುವ 1000 ಚದರ ಅಡಿಗಳವರೆಗೆ ಖಾಲಿ ನಿವೇಶನಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ. 1000 ಚದರಡಿಗಿಂತ ಹೆಚ್ಚಿರುವ ಖಾಲಿ ನಿವೇಶನ ಹೊಂದಿರುವ ಸ್ವತ್ತಿಗೆ ಪೂರ್ಣ ಖಾಲಿ ಜಾಗಕ್ಕೆ ತೆರಿಗೆ ನಿಗದಿಪಡಿಸಲಾಗುವುದು ಎಂದು ವಿವರಿಸಿದರು.

ಅನಧಿಕೃತ ಆಸ್ತಿಗಳಿಗೆ ತೆರಿಗೆ:

ಸರ್ವೇ ನಂಬರ್ ಜಾಗದಲ್ಲಿ ಕಟ್ಟಿರುವ ಕಟ್ಟಡಗಳ ಮಾಲೀಕರು ಭೂ ಪರಿವರ್ತನೆಯಾಗಿದ್ದು, ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆಯ ನಕ್ಷೆ ಅನುಮೋದನೆಯಾಗದ ಬಡಾವಣೆಯ ಆಸ್ತಿಗಳಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳ ಮಾಲೀಕರು, ಕಂದಾಯ ಬಡಾವಣೆಗಳಲ್ಲಿನ ಸ್ವತ್ತುಗಳ ಮಾಲೀಕರು, ಅನುಭವದಾರರು ಕರ್ನಾಟಕ ಪೌರಸಭೆಗಳ (ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಮತ್ತು ಅಧಿಸೂಚಿತ ಪ್ರದೇಶ) ಅಧಿನಿಯಮ 1964ರ ಸೆಕ್ಷನ್ 106ರ ಪ್ರಕಾರ ಮೊದಲ ಬಾರಿಗೆ ಒಂದು ವರ್ಷಕ್ಕೆ ತಮ್ಮ ಆಸ್ತಿಗೆ ದುಪ್ಪಟ್ಟು ತೆರಿಗೆ ಪಾವತಿ ಮಾಡಬೇಕಿದೆ. ನಂತರದ ವರ್ಷದಿಂದ ಒಂದುಪಟ್ಟು ಆಸ್ತಿ ತೆರಿಗೆ ಪಾವತಿಸಬೇಕು. ಇಂತಹ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದ ಇ-ಖಾತಾ (ನಮೂನೆ-3) ಪ್ರತಿಯಲ್ಲಿ ಅನಧಿಕೃತ ಖಾತಾ ಎಂದು ನಮೂದಾಗಲಿದೆ ಎಂದು ಕಂದಾಯ ಅಧಿಕಾರಿ ರಾಜಶೇಖರ್ ಹೇಳಿದ್ದಾರೆ.ನಗರದ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ತೆರಿಗೆ ಸಂಗ್ರಹಕ್ಕೆ ಎಲ್ಲಿಯೂ ಹಿನ್ನಡೆಯಾಗದಂತೆ ಮುತುವರ್ಜಿ ವಹಿಸಿದ್ದರಿಂದ ಈ ಬಾರಿ ಗುರಿ ಮೀರಿದ ಸಾಧನೆ ಮಾಡಲಾಗಿದೆ. ನಗರ ವ್ಯಾಪ್ತಿಯ ಸಾರ್ವಜನಿಕರು ಏಪ್ರಿಲ್ ತಿಂಗಳಲ್ಲಿ ತೆರಿಗೆ ಪಾವತಿಸುವ ಮೂಲಕ ಶೇ.೫ರಷ್ಟು ರಿಯಾಯ್ತಿ ಸದುಪಯೋಗಪಡಿಸಿಕೊಳ್ಳಿ.

- ಯು.ಪಿ.ಪಂಪಾಶ್ರೀ, ಆಯುಕ್ತರು, ನಗರಸಭೆ

ತೆರಿಗೆ ಸಂಗ್ರಹಕ್ಕೆ ಈ ಬಾರಿ ಪ್ರಥಮ ಆದ್ಯತೆ ನೀಡಲಾಗಿತ್ತು. ಕಾಲಕಾಲಕ್ಕೆ ಸಭೆ ಕರೆದು ಅಧಿಕಾರಿಗಳಿಗೆ ತೆರಿಗೆ ಸಂಗ್ರಹಕ್ಕೆ ಗುರಿ ನಿಗದಿಪಡಿಸಲಾಗಿತ್ತು. ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆಯಿಂದ ಹೆಚ್ಚಿನ ಅನುಕೂಲವಾಗುತ್ತಿದೆ. ಜನರಿಗೆ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಿದೆ. ಹಿಂದೆ ಶೇ.90 ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಮುಂದೆಯೂ ತೆರಿಗೆ ಸಂಗ್ರಹದ ಬಗ್ಗೆ ಹೆಚ್ಚನ ಆದ್ಯತೆ ನೀಡುವ ಜೊತೆಗೆ ಅಭಿವೃದ್ಧಿಗೂ ಒತ್ತಾಸೆಯಾಗಿ ನಿಲುತ್ತೇವೆ.

- ಡಾ.ಕುಮಾರ, ಡೀಸಿ, ಆಡಳಿತಾಧಿಕಾರಿಗಳು, ನಗರಸಭೆ, ಮಂಡ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅದ್ಧೂರಿಯಾಗಿ ನಡೆದ ಶ್ರೀಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರದಲ್ಲಿ ಏರಿಕೆ