ತೆರಿಗೆ ಸಂಗ್ರಹ ಕುಸಿತ, ಅಭಿವೃದ್ಧಿಗೆ ಹಿನ್ನಡೆ

KannadaprabhaNewsNetwork |  
Published : Aug 22, 2025, 02:00 AM IST
ಸಸಸಸಸಸ | Kannada Prabha

ಸಾರಾಂಶ

ಸ್ಥಳೀಯ ಸಂಸ್ಥೆಗಳಲ್ಲಿನ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳು, ಎಪಿಎಂಸಿ, ಸರ್ಕಾರಿ ಕಟ್ಟಡಗಳು ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಅತ್ಯಧಿಕ ಪ್ರಮಾಣದ ತೆರಿಗೆ ಬಾಕಿ ಉಳಿಸಿಕೊಂಡಿವೆ

ಶಿವಕುಮಾರ ಕುಷ್ಟಗಿ ಗದಗ

ಗದಗ-ಬೆಟಗೇರಿ ನಗರಸಭೆ ಸೇರಿದಂತೆ ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯ ಒಟ್ಟು 9 ಸ್ಥಳೀಯ ಸಂಸ್ಥೆಗಳಲ್ಲಿ ವ್ಯಾಪಕ ಪ್ರಮಾಣದ ತೆರಿಗೆ ಬಾಕಿ ಉಳಿದಿದ್ದು, ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ.

ತೆರಿಗೆಯ ಬಾಕಿ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಿದೆ. ಆಸ್ತಿ ತೆರಿಗೆ, ನೀರಿನ ಕರ, ಜಾಹೀರಾತು ಮತ್ತು ಮಳಿಗೆ ಪರವಾನಗಿ ಶುಲ್ಕಗಳಂತಹ ಮೂಲಗಳಿಂದ ಬರಬೇಕಾದ ಹಣವು ಸಂಗ್ರಹವಾಗದೇ ಉಳಿದಿರುವುದು ಜಿಲ್ಲೆಯ ಮೂಲಸೌಕರ್ಯಗಳಾದ ರಸ್ತೆ ದುರಸ್ತಿ, ನೀರು ಪೂರೈಕೆ ಮತ್ತು ಚರಂಡಿ ನಿರ್ವಹಣೆಯಂತಹ ಕಾರ್ಯಗಳಿಗೆ ನೇರವಾಗಿ ಪರಿಣಾಮ ಬೀರಿದೆ.

ದೊಡ್ಡ ಬಾಕಿದಾರರು: ಸ್ಥಳೀಯ ಸಂಸ್ಥೆಗಳಲ್ಲಿನ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳು, ಎಪಿಎಂಸಿ, ಸರ್ಕಾರಿ ಕಟ್ಟಡಗಳು ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಅತ್ಯಧಿಕ ಪ್ರಮಾಣದ ತೆರಿಗೆ ಬಾಕಿ ಉಳಿಸಿಕೊಂಡಿವೆ. ಗದಗ ನಗರಸಭೆಯೊಂದರಲ್ಲೇ ಶೇ.80 ರಷ್ಟು ತೆರಿಗೆ ಸಂಗ್ರಹ ಬಾಕಿ ಇದ್ದು, ಪ್ರಮುಖರು, ಪ್ರಭಾವಿಗಳು ಹಾಗೂ ಸರ್ಕಾರಿ ಸಂಸ್ಥೆಗಳಿಂದಲೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ವಸೂಲಿ ಮಾಡುವುದು ಕೂಡಾ ಕಷ್ಟ ಸಾಧ್ಯವಾಗಿದೆ.

​ಆರ್ಥಿಕ ಕೊರತೆ: ರಾಜ್ಯ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಸಂಪನ್ಮೂಲ ಕ್ರೋಢೀಕರಣದಲ್ಲಿ ನಿರತವಾಗಿರುವ ಕಾರಣ ಸ್ಥಳೀಯ ಸಂಸ್ಥೆಗಳಿಗೆ ಬರುವ ಅನುದಾನದ ಹರಿವು ಕೂಡಾ ಕಡಿಮೆಯಾಗಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳು ಅಭಿವೃದ್ಧಿ ಮರಿಚೀಕೆಯಾಗಿದ್ದು, ಅದರಲ್ಲಿಯೂ ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಸುರಿಯುವ ಧಾರಾಕಾರ ಮಳೆಯಿಂದ ರಸ್ತೆಗಳೆಲ್ಲ ಕೆಸರಿನ ಹೊಂಡಗಳಾಗಿ ಮಾರ್ಪಟ್ಟಿವೆ, ಬೃಹತ್ ಗಾತ್ರದ ಗುಂಡಿಗಳು ಪ್ರಮುಖ ರಸ್ತೆಗಳಲ್ಲಿ ಬಿದ್ದಿದ್ದು ಅವುಗಳಿಗೆ ಕನಿಷ್ಠ ಮಣ್ಣು ಹಾಕಲು ಸಹಿತ ಸ್ಥಳೀಯ ಸಂಸ್ಥೆಗಳಲ್ಲಿ ಹಣವಿಲ್ಲದಂತಾಗಿದೆ.

​ಆಡಳಿತಾತ್ಮಕ ವೈಫಲ್ಯ: ತೆರಿಗೆ ವಸೂಲಿಗಾಗಿ ಜಿಲ್ಲಾ ಯೋಜನಾ ನಿರ್ದೇಶಕರು, ಹಿರಿಯ ಅಧಿಕಾರಿಗಳು ಪದೇ ಪದೇ ಸೂಚನೆ ನೀಡುತ್ತಿದ್ದರೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ, ತೆರಿಗೆ ಬಾಕಿ ಉಳಿಸಿಕೊಂಡಿರುವುದನ್ನು ಗಮನಿಸಿದಾಗ ಇದು ಆಡಳಿತಾತ್ಮಕ ವೈಫಲ್ಯವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ಗದಗ ಬೆಟಗೇರಿ ನಗರಸಭೆಯಲ್ಲಿ ಆಡಳಿತ ಮಂಡಳಿಯೇ ಇಲ್ಲದೇ ವರ್ಷವೇ ಗತಿಸಿದ್ದು, ಜಿಲ್ಲಾಧಿಕಾರಿಗಳೇ ಇಲ್ಲಿನ ಆಡಳಿತಾಧಿಕಾರಿಗಳು ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

ಬಾಕಿ ಇರುವ ತೆರಿಗೆ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲವರಿಗೆ ನೋಟಿಸ್ ನೀಡಲಾಗಿದ್ದು, ಪಾವತಿ ಪ್ರಮಾಣ ಹೆಚ್ಚುತ್ತಿದೆ. ಆದರೆ, ಈ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹ ತುರ್ತು ಆದ್ಯತೆಯಾಗಿ ಪರಿಗಣಿಸಬೇಕು. ಆನ್‌ಲೈನ್ ಪಾವತಿ ಬಗ್ಗೆ ವ್ಯಾಪಕ ಜಾಗೃತಿ ಅಭಿಯಾನ ನಡೆಸುವುದು ಹಾಗೂ ಬಾಕಿದಾರರಿಗೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವುದು ಎಂದು ಯೋಜನಾ ನಿರ್ದೇಶಕ ಬಸನಗೌಡ ಕೋಟೂರು ತಿಳಿಸಿದ್ದಾರೆ.ತೆರಿಗೆ ವಿಧ ಆಸ್ತಿಗಳು ಒಟ್ಟಾರೆ ತೆರಿಗೆ ಬಾಕಿ ಸಂಗ್ರಹ ಬಾಕಿ

ಆಸ್ತಿ ತೆರಿಗೆ 1.73 ಲಕ್ಷ 23.65 ಕೋಟಿ 1.68 ಕೋಟಿ17.61 ಕೋಟಿ

ನೀರಿನ ಕರ 55 ಸಾವಿರ 24.27 ಕೋಟಿ 3.21 ಕೋಟಿ21.42 ಕೋಟಿ

ಮಳಿಗೆ ಪರವಾನಗಿ 87 ಸಾವಿರ 1.47 ಕೋಟಿ 44 ಲಕ್ಷ 97 ಲಕ್ಷ

ಒಟ್ಟು 49.39 ಕೋಟಿ 5.33 ಕೋಟಿ 40 ಕೋಟಿ

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ