ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ನಾಗರತ್ನ ತಿಳಿಸುತ್ತಿದ್ದಂತೆ ಉಪಾಧ್ಯಕ್ಷ ಎನ್.ಬಸವರಾಜು ಮಾತನಾಡಿ, ಅನಧಿಕೃತ ನಲ್ಲಿಗಳನ್ನು ತೆರವು ಮಾಡುವವರೆಗೂ ದರ ಪರಿಷ್ಕರಣೆಗೆ ನನ್ನ ವಿರೋಧವಿದೆ ಎಂದರು.
ನಲ್ಲಿಗಳಿಗೆ ಮೋಟರ್ ಸಂಪರ್ಕಗಳನ್ನು ಅಳವಡಿಸಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಚಾರಪಡಿಸಿ ಮೋಟರ್ ಅಳವಡಿಕೆ ತಡೆಯಬೇಕೆಂದು ಸೂಚಿಸಿದರು.ಪುರಸಭೆ ಸದಸ್ಯ ಎಂ.ಆರ್ ರಾಜಶೇಖರ್ ಮಾತನಾಡಿ, ಹಲವು ವಾರ್ಡ್ ಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ನೀರು ಹೆಚ್ಚಾಗಿ ಹೋಗುವ ವಾರ್ಡ್ ಗಳಲ್ಲಿ ಪುರಸಭೆ ಸಿಬ್ಬಂದಿ ಕರ ವಸೂಲಿಗೆ ಹೋಗುವುದಿಲ್ಲ. ನೀರು ಬಾರದಿದ್ದರೂ ಕೆಲ ವಾರ್ಡ್ ಗಳಿಗೆ ಪ್ರತಿ ತಿಂಗಳು ನೀರಿನ ಕರ ವಸೂಲಿ ಮಾಡುತ್ತಾರೆ. ಈ ಬಗ್ಗೆ ಅಧ್ಯಕ್ಷರು ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ನೀರಿನ ದರವನ್ನು ಸಧ್ಯದ ಪರಿಸ್ಥಿತಿಯಲ್ಲಿ ಪರಿಷ್ಕರಣೆ ಮಾಡುವುದು ಬೇಡ ಎಂದಾಗ ಮುಖ್ಯಾಧಿಕಾರಿ 2017ರಲ್ಲಿ ನೀರಿನ ದರ ಪರಿಷ್ಕರಣೆ ಮಾಡಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕೆಂಬ ನಿಯಮವಿದೆ ಎಂದರು.
ಸದಸ್ಯ ಶಿವಸ್ವಾಮಿ ಮಾತನಾಡಿ, ಪಟ್ಟಣದ ಅನಧಿಕೃತ ನಲ್ಲಿಗಳನ್ನು ಅಧಿಕೃತಗೊಳಿಸಿ ಗೃಹ ಬಳಕೆಗೆ 20 ರು ಹಾಗೂ ವಾಣಿಜ್ಯ ಬಳಕೆಗೆ 100 ಹೆಚ್ಚಳ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕೆ ಇತರೆ ಸದಸ್ಯರು ಸಹಮತ ಸೂಚಿಸಿದರು.
ನಾವು ಸಭೆಯಲ್ಲಿ ಸಮಸ್ಯೆ ಬಗ್ಗೆ ಹೇಳಿದರೆ ಬಂದೆಪುಟ್ಟ ಹೋದೆಪುಟ್ಟ ಎಂಬಂತೆ ಸಭೆಯಲ್ಲಿ ಕೊಡುವ ತಿಂಡಿಯನ್ನು ತಿಂದು ಹೋಗುವಂತಾಗಿದೆ. ಸಮಸ್ಯೆಗಳನ್ನು ಈಡೇರಿಸುತ್ತಿಲ್ಲ. ಆಡಳಿತದ ಅವಧಿ ಮುಗಿದರೂ ಯಾವುದೇ ಅಭಿವೃದ್ದಿ ಕಾರ್ಯಗಳು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.