ಬೆಂಗಳೂರು : ರಾಜ್ಯದಲ್ಲಿ ಬಸ್ಸು, ಮೆಟ್ರೋ ಪ್ರಯಾಣ ದರ ಹೆಚ್ಚಳ ಬೆನ್ನಲ್ಲೇ ರಾಜ್ಯದ ಜನತೆಗೆ ಇಂದಿನಿಂದ (ಏ.1) ಹಾಲಿನ ದರ, ವಿದ್ಯುತ್ ಶುಲ್ಕ, ವಿದ್ಯುತ್ ಸಂಪರ್ಕದ ನಿಗದಿತ ಶುಲ್ಕ, ಇವಿ ಕಾರುಗಳ ಮೇಲಿನ ತೆರಿಗೆ ಹೆಚ್ಚಳದ ಶಾಕ್ ತಟ್ಟಲಿದೆ. ಜತೆಗೆ, ರಾಜಧಾನಿ ವಾಸಿಗಳಿಗೆ ಕಸ ಬಳಕೆದಾರರ ಸೆಸ್ ಹೆಸರಿನಲ್ಲಿ ಹೊಸ ಹೊರೆ ಹೆಗಲೇರಲಿದ್ದು, ಜನಸಾಮಾನ್ಯರ ದುನಿಯಾ ಮತ್ತಷ್ಟು ದುಬಾರಿ ಆಗಲಿದೆ.
ಜತೆಗೆ, ಕೇಂದ್ರ ಸರ್ಕಾರ ರಾಜ್ಯದಲ್ಲಿನ 66 ಟೋಲ್ ರಸ್ತೆಗಳಿಗೂ ಅನ್ವಯಿಸುವಂತೆ ಟೋಲ್ ದರವನ್ನು ಶೇ.3 ರಿಂದ 5ರಷ್ಟು ಹೆಚ್ಚಳ ಮಾಡಿದೆ. ಹೀಗಾಗಿ, ಯುಗಾದಿ ‘ಹೊಸ ತೊಡಕು’ ದಿನವಾದ ಇಂದಿನಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊಸ ತೊಡಕುಗಳು ಶುರುವಾಗಲಿವೆ.
ಲೀಟರ್ ಹಾಲಿಗೆ ₹4 ಹೆಚ್ಚಳ:
ಕೆಎಂಎಫ್ ನಂದಿನಿಯ ಎಲ್ಲ ಮಾದರಿಯ ಹಾಲು ಮತ್ತು ಮೊಸರಿನ ದರ ಹೆಚ್ಚಳವಾಗುತ್ತಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.
ಟೋನ್ಡ್ ಹಾಲಿನ (ನೀಲಿ ಪೊಟ್ಟಣ) ದರ ₹42ರಿಂದ ₹46, ಹೋಮೋಜಿನೈಸ್ಡ್ ಟೋನ್ಡ್ ಹಾಲು ₹43ರಿಂದ ₹47, ಹಸುವಿನ ಹಾಲು (ಹಸಿರು ಪೊಟ್ಟಣ) ₹46 ರಿಂದ ₹50, ಶುಭಂ (ಕೇಸರಿ ಪೊಟ್ಟಣ) ಸ್ಪೆಷಲ್ ಹಾಲು ₹48ರಿಂದ ₹52 ಮತ್ತು ಮೊಸರು ₹50ರಿಂದ ₹54ಕ್ಕೆ ಹೆಚ್ಚಳವಾಗಲಿದೆ.
ಮೊಸರು 200 ಗ್ರಾಂಗೆ ₹12ರಿಂದ ₹13, 500 ಗ್ರಾಂಗೆ ₹26ರಿಂದ ₹28, 1 ಲೀಟರ್‌ಗೆ ₹50ರಿಂದ ₹54ಕ್ಕೆ ಏರಿಕೆಯಾಗಿದೆ. ಮಸಾಲ ಮಜ್ಜಿಗೆ 200 ಮಿ.ಲೀಗೆ ₹9ರಿಂದ ₹10ಕ್ಕೆ, ಸಿಹಿ ಲಸ್ಸಿ 200 ಮಿ.ಲೀ.ಗೆ ₹13ರಿಂದ ₹14, ಸುವಾಸಿತ ಹಾಲು 200 ಮಿ.ಲೀಗೆ ₹13ರಿಂದ ₹14 ಹಾಗೂ ಮ್ಯಾಂಗೋ ಲಸ್ಸಿ 180 ಮಿ.ಲೀಗೆ ₹15ರಿಂದ ₹16ಕ್ಕೆ ಹೆಚ್ಚಳವಾಗಲಿದೆ.
ವಿದ್ಯುತ್ ಶುಲ್ಕ, ನಿಗದಿತ ಶುಲ್ಕ ಶಾಕ್:
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಏ.1ರಿಂದ ಗೃಹ ಬಳಕೆದಾರರಿಗೆ ವಿದ್ಯುತ್ ದರ ಪ್ರತಿ ಯುನಿಟ್‌ಗೆ 26 ಪೈಸೆ ಹಾಗೂ ನಿಗದಿತ ಶುಲ್ಕ ಪ್ರತಿ ಕಿ.ವ್ಯಾಟ್‌ಗೆ ಬರೋಬ್ಬರಿ ₹25 ಹೆಚ್ಚಳ ಮಾಡಿದೆ. ಮತ್ತೊಂದೆಡೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಪ್ರತಿ ಯೂನಿಟ್‌ಗೆ 64 ಪೈಸೆಯಿಂದ ₹1.75ರವರೆಗೆ ವಿದ್ಯುತ್ ದರದಲ್ಲಿ ಭಾರಿ ಕಡಿತ ಮಾಡಿದೆ. ವಾಣಿಜ್ಯ ಸಂಪರ್ಕಗಳಿಗೆ ನಿಗದಿತ ಶುಲ್ಕವೂ ಸಹ ₹5 ಹಾಗೂ ₹10 ಮಾತ್ರ ಹೆಚ್ಚಳ ಮಾಡಲಾಗಿದೆ.
ಮಾ.18ರಂದು ಕೆಇಆರ್‌ಸಿಯು ಪಿಟಿಸಿಎಲ್, ಎಸ್ಕಾಂಗಳ ನೌಕರರ ಪಿಂಚಣಿ, ಗ್ರಾಚ್ಯುಟಿ ಹೊರೆಯನ್ನು ಗ್ರಾಹಕರ ಮೇಲೆ ಹಾಕಿ ಏ.1ರಿಂದ ಪ್ರತಿ ಯುನಿಟ್‌ಗೆ 36 ಪೈಸೆ ದರ ಹೆಚ್ಚಳ ಮಾಡಿತ್ತು. ಹೀಗಾಗಿ, ವಾರ್ಷಿಕ ದರ ಪರಿಷ್ಕರಣೆಯಲ್ಲಿ ಕೆಇಆರ್‌ಸಿಯು ಗೃಹ ಬಳಕೆ ದರ 10 ಪೈಸೆ ಕಡಿಮೆ ಮಾಡಿದ್ದರೂ ಏ.1ರಿಂದ ಅನ್ವಯವಾಗುವಂತೆ 26 ಪೈಸೆ ಹೊರೆ ಬೀಳಲಿದೆ.
ಇನ್ನು, ಇಂಧನ ಇಲಾಖೆಯಿಂದ ಲಿಫ್ಟ್, ಟ್ರಾನ್ಸ್ಫಾರ್ಮರ್, ಜನರೇಟರ್ ಪರಿಶೀಲನೆ ಮತ್ತು ನವೀಕರಣ ಶುಲ್ಕವನ್ನೂ ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ.
ಶೇ.5ರ ವರೆಗೆ ಟೋಲ್ ಶುಲ್ಕ ಹೆಚ್ಚಳ:
ಕೇಂದ್ರ ಸರ್ಕಾರವು ದೇಶಾದ್ಯಂತ ಏ.1ರಿಂದ ಅನ್ವಯವಾಗುವಂತೆ ಟೋಲ್ ಶುಲ್ಕವನ್ನು ಶೇ.3 ರಿಂದ 5ರಷ್ಟು ಹೆಚ್ಚಳ ಮಾಡಿದೆ. ರಾಜ್ಯದಲ್ಲಿರುವ ಮೈಸೂರು-ಬೆಂಗಳೂರು ರಸ್ತೆ, ಬೆಂಗಳೂರು-ತಿರುಪತಿ ರಸ್ತೆ, ಬೆಂಗಳೂರು-ಹೈದರಾಬಾದ್ ರಸ್ತೆ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆ, ದಾಬಸ್‌ಪೇಟ್-ದೇವನಹಳ್ಳಿ ನಡುವಿನ ಉಪನಗರ ವರ್ತುಲ ರಸ್ತೆ ಸೇರಿದಂತೆ ಒಟ್ಟು 66 ಟೋಲ್‌ಗಳಲ್ಲಿ ಶುಲ್ಕ ಪರಿಷ್ಕರಣೆ ಅನ್ವಯವಾಗಲಿದೆ. ಹೀಗಾಗಿ, ಟೋಲ್ ಶುಲ್ಕ ಶೇ.5 ರವರೆಗೆ ದುಬಾರಿ ಆಗಲಿದೆ.
ಇಂದಿನಿಂದ ಇವಿ ಕ್ಯಾಬ್, ವಾಣಿಜ್ಯ ವಾಹನ ದುಬಾರಿ:
ರಾಜ್ಯದಲ್ಲಿ ಏ.1ರಿಂದ ಖರೀದಿಸುವ ₹25 ಲಕ್ಷ ಮೀರಿದ ವಿದ್ಯುತ್‌ಚಾಲಿತ ಕ್ಯಾಬ್‌ಗಳಿಗೂ ಶೇ.10ರಷ್ಟು ತೆರಿಗೆ ಹಾಗೂ ಹತ್ತು ಲಕ್ಷ ರು.ವರೆಗಿನ ಕ್ಯಾಬ್‌ಗಳಿಗೂ ಶೇ.5ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ. 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಇವಿ-ಕ್ಯಾಬ್‌ಗಳಿಗೆ ಶೇ.10 ರಷ್ಟು ಅಂದರೆ ಎರಡೂವರೆ ಲಕ್ಷ ತೆರಿಗೆ ವಿಧಿಸಲಾಗುತ್ತದೆ. ಇದು ಜೀವತಾವಧಿ ತೆರಿಗೆಯಾಗಿದ್ದು, ಹಳದಿ ನಾಮಫಲಕ (ಯೆಲ್ಲೋ ಬೋರ್ಡ್) ಹೊಂದಿರುವ ವಾಹನಗಳಿಗೆ ಅನ್ವಯ ಆಗಲಿದೆ. ನಿರ್ಮಾಣ ವಲಯದ ಉಪಕರಣಗಳನ್ನು ಸಾಗಿಸುವ ವಾಹನಗಳಿಗೆ ಈ ಮೊದಲು ಜೀವಿತಾವಧಿ ತೆರಿಗೆ ಶೇ. 6ರಷ್ಟಿತ್ತು. ಅದನ್ನು ಶೇ.8ಕ್ಕೆ ಹೆಚ್ಚಿಸಲಾಗಿದೆ.