ಕನ್ನಡಪ್ರಭ ವಾರ್ತೆ ಕಲಾದಗಿ
ನನ್ನ ಸ್ವಭಾವ ಅಧಿಕಾರಿಗಳಿಗೆ, ಜನರಿಗೂ ಗೊತ್ತು. ಹಾಗಾಗಿ ₹100 ಕೋಟಿ ವಿರುದ್ಧ ನನ್ನ ಆರಿಸಿ ತಂದಿದ್ದಾರೆ. ಬೀಳಗಿ ಮತದಾರರ ಕಷ್ಟಗಳಿಗೆ ಸ್ಪಂದಿಸುವೆ. ರಾಜ್ಯದಲ್ಲೇ ಪ್ರಥಮವಾಗಿ ಮತಕ್ಷೇತ್ರದ ಹೆಸ್ಕಾಂ ಕಚೇರಿಯಲ್ಲಿ ಮುಂದಿನ ಮೂರು ವರ್ಷ ಟಿ.ಸಿ. ಬ್ಯಾಂಕ್ ಕಾರ್ಯನಿರ್ವಹಿಸಲಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.ಉದಗಟ್ಟಿ-ಶಾರದಾಳ ಗ್ರಾಮದ ಹತ್ತಿರ 110/11ಕೆವಿ ವಿದ್ಯುತ್ ಉಪಕೇಂದ್ರ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಸಮಸ್ಯೆ ಎಂದು ವಿದ್ಯುತ್ ಸರಬರಾಜು ಕಚೇರಿಗೆ ಬಂದಾಗ ಸ್ಪಂದಿಸಿ ಅವರನ್ನು ಮನೆಯ ಸದಸ್ಯರಂತೆ ಭಾವಿಸಿದರೆ ಮಾತ್ರ ರೈತರು ಹಾಗೂ ಹೆಸ್ಕಾಂ ಅಧಿಕಾರಿಗಳ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ. ರೈತರಿಗೆ ಮಳೆ, ಗಾಳಿ, ನೀರು, ವಿದ್ಯುತ್ ಇದ್ದರೆ ಎಂದಿಗೂ ಅಧಿಕಾರಿಗಳ ಹತ್ತಿರ ಸಮಸ್ಯೆ ಹೇಳಿಕೊಂಡು ಬರುವುದಿಲ್ಲ. ಭಾನುವಾರದಿಂದಲೇ ರೈತರ ಪಂಪಸೆಟ್‌ಗಳಿಗೆ 400 ಕೆವಿ ವಿದ್ಯುತ್ ಸಿಗಲಿದ್ದು, ಹೆಚ್ಚಿನ ವಿದ್ಯುತ ಪರಿವರ್ತಕಗಳನ್ನು ಅಳವಡಿಸಿ ಹಗಲಿನಲ್ಲೂ ಯಾವುದೇ ಅಡೆ ತಡೆಯಾಗದಂತೆ ಸಮರ್ಪಕ ವಿದ್ಯುತ್ ಪೂರೈಸಿ ರೈತರಿಗೆ ಅನೂಕೂಲ ಮಾಡಿ ಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆಪಿಟಿಸಿಎಲ್ ಮುಖ್ಯ ಎಂಜಿಯರ್ ಜಿ.ಕೆ. ಗೋಟ್ಯಾಳ ಮಾತನಾಡಿ ಉದ್ದೇಶಿತ ವಿದ್ಯುತ್ ಉಪಕೇಂದ್ರ ಸ್ಥಾಪನೆಯಿಂದ ಸುತ್ತಮುತ್ತಲಿನ ಗ್ರಾಮಗಳ ವಿದ್ಯುತ್ ಬೇಡಿಕೆ ಈಡೇರಲಿದೆ. ಸದ್ಯ ಉದಗಟ್ಟಿ ಶಾರದಾಳ ವ್ಯಾಪ್ತಿಯಲ್ಲಿ 1280 ಸ್ಥಾವರಗಳಿದ್ದು, ಅದರಲ್ಲಿ 724 ಪಂಪಸೆಟ್ ಮತ್ತು 556 ಇತರೆ ವಿದ್ಯುತ್ ಸ್ಥಾವರಗಳಿವೆ. ಈ ಎಲ್ಲ ಸ್ಥಾವರಗಳಿಗೆ ಗುಣಮಟ್ಟದ ವಿದ್ಯುತ್ ಹಾಗೂ ಭವಿಷ್ಯದಲ್ಲಿ ಬರಬಹುದಾದ ಹೆಚ್ಚಿನ ವಿದ್ಯುತ್ ಭಾರ ಸಹ ನಿಭಾಯಿಸಬಹುದು. ರೈತರ ಬೇಡಿಕೆಯಂತೆ ಕಲಾದಗಿ ವಿದ್ಯುತ್ ಕೇಂದ್ರದಲ್ಲಿ ಟಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ 72 ಗಂಟೆಗಳಲ್ಲಿ ಉಚಿತವಾಗಿ ಟಿಸಿ ಬದಲಾಯಿಸಿ ಕೊಡುತ್ತಿರುವುದಾಗಿ ತಿಳಿಸಿದರು.ಉದಗಟ್ಟಿ ಗ್ರಾಮದ ರೈತ ಮುಖಂಡ ಶೇಷನಗೌಡ ಪಾಟೀಲ ಮಾತನಾಡಿ, ನಮ್ಮ ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಿದ್ದು, ಗ್ರಾಮದ ರೈತರ ಪರವಾಗಿ ಧನ್ಯವಾದ ತಿಳಿಸಿದ ಅವರು, ವಿದ್ಯುತ್ ಉಪಕೇಂದ್ರದಲ್ಲಿ ನಮ್ಮೂರಿನ ಅರ್ಹ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು. ವಿದ್ಯುತ್ ಅವಗಢಗಳಿಂದಾಗಿ ಬೆಂಕಿ ತಗುಲಿ ಹಾನಿಯಾದ ಕಬ್ಬಿನ ಗದ್ದೆಗಳ ರೈತರಿಗೆ ಪರಿಹಾರ ಚೆಕ್ ನೀಡಲಾಯಿತು.
ಖಜ್ಜಿಡೋಣಿ ಗ್ರಾಪಂ ಉಪಾದ್ಯಕ್ಷೆ ರುಕ್ಮಿಣಿ ಪರಚನಗೌಡರ, ಎಇಇ ರಮೇಶ ಪವಾರ, ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಅಧಿಕಾರಿಗಳಾದ ಸಚೀನ ಬೂದಿ, ಬಿ.ಎ. ದಂಡೆಪ್ಪನವರ, ರಾಜೇಶ ಪಾಟೀಲ, ಬಿಪಿ ಹಲಗತ್ತಿ, ಖಲೀಂಆಹ್ಮದ, ಜಿಪಂ ಮಾಜಿ ಸದಸ್ಯ ಪಾಂಡಪ್ಪ ಪೋಲಿಸ್, ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಪ್ಪ ಅರಕೇರಿ, ತಾಪಂ ಮಾಜಿ ಉಪಾದ್ಯಕ್ಷ ಸಂಗಣ್ಣ ಮುದೋಳ, ಕಲಾದಗಿ ಗ್ರಾಪಂ ಉಪಾದ್ಯಕ್ಷ ಫಕೀರಪ್ಪ ಮಾದರ, ಬಂದೇನವಾಜ ಸೌದಾಗರ, ಅಮಿತಗೌಡ ಗೌಡರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಇದ್ದರು. ಕಲಾದಗಿ ವಿದ್ಯುತ್ ಉಪಕೇಂದ್ರದ ಅಧಿಕಾರಿ ಜಿ.ಬಿ. ಛಬ್ಬಿ ನಿರೂಪಿಸಿ ವಂದಿಸಿದರು.