ಕನ್ನಡ ಮಾಧ್ಯಮ ಶಾಲೆಗಳ ಸೋಲಿಗೆ ಸರ್ಕಾರವೇ ಹೊಣೆ: ಡಾ.ಎಂ. ಮೋಹನ ಆಳ್ವ

KannadaprabhaNewsNetwork |  
Published : Feb 21, 2024, 02:03 AM IST
ಮೂಡುಬಿದಿರೆ ತಾಲೂಕು ಮೊದಲ ಕನ್ನಡ ಸಾಹಿತ್ಯ ಸಮ್ಮೇಳನಕನ್ನಡ ಮಾಧ್ಯಮ ಶಾಲೆಗಳ ಸೋಲಿಗೆ ಸರ್ಕಾರವೇ ಹೊಣೆ: ಡಾ.ಎಂ. ಮೋಹನ ಆಳ್ವ  | Kannada Prabha

ಸಾರಾಂಶ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಮೂಡುಬಿದಿರೆ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕನ್ನಡ ಮಾಧ್ಯಮ ಶಾಲೆಗಳು ಸೋಲುವುದೆಂದರೆ ಅದು ಶ್ರೀ ಸಾಮಾನ್ಯನ ಸೋಲಾಗುತ್ತದೆ. ಕೇವಲ ಭಾವನಾತ್ಮಕವಾಗಿ ಮಾತನಾಡಿದರೆ ಸಾಲದು. ಸರ್ಕಾರ, ಇಲಾಖೆ ಕನಿಷ್ಠ ತರಗತಿಗೊಂದು ಶಿಕ್ಷಕರನ್ನೂ ನೀಡಲಾಗದಿದ್ದರೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಹೇಗೆ ಸಾಧ್ಯ. ನಾಡಿನಲ್ಲಿ ಶಿಕ್ಷಣ ವ್ಯವಸ್ಥೆ, ಕನ್ನಡ ಮಾಧ್ಯಮ ಶಾಲೆಗಳ ಹೀನಾಯ ಪರಿಸ್ಥಿತಿಗೆ ಸರಕಾರವೇ ನೇರ ಹೊಣೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.

ಅವರು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಮೂಡುಬಿದಿರೆ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲಕ್ಕೆ ತಕ್ಕಂತೆ ಕನ್ನಡ ಮಾಧ್ಯಮ ಶಾಲೆಗಳು ಗಟ್ಟಿಯಾದಾಗ ಮಾತ್ರ ಭಾಷೆ ಸೋಲುವುದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತದೆ. ಇಲಾಖೆ ಗಂಭೀರವಾಗಿ ಪರಿಶೀಲಿಸಿ ಬದಲಾವಣೆ ತರದಿದ್ದರೆ ಕನ್ನಡ ಮಾಧ್ಯಮ ಶಾಲೆಗಳ ಅವನತಿಯಲ್ಲದೆ ಬೇರೇನೂ ನಿರೀಕ್ಷಿಸಲಾಗದು ಎಂದವರು ವಿಷಾದ ವ್ಯಕ್ತಪಡಿಸಿದರು.

2003ರಲ್ಲಿ 71ನೇ ಅಖಿಲ ಭಾರತ ಸಮ್ಮೇಳನವನ್ನು ಮೊದಲ ಬಾರಿಗೆ ಮೂಡುಬಿದಿರೆಯಲ್ಲಿ ಮಾದರಿಯಾಗಿ ನಡೆಸಿದ್ದೇವೆ. 21 ವರ್ಷಗಳ ಬಳಿಕ ಮತ್ತೊಮ್ಮೆ ಅವಕಾಶ ಸಿಕ್ಕಿದರೆ ರಾಜ್ಯಕ್ಕೇ ಮಾದರಿಯಾಗಿ ಮೂಡುಬಿದಿರೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ದ.ಕ ಜಿಲ್ಲಾಧ್ಯಕ್ಷರು ವೀಳ್ಯ ಪಡೆದರೆ ನಾವು ಸಿದ್ಧರಿದ್ದೇವೆ ಎಂದು ಡಾ. ಆಳ್ವ ಘೋಷಿಸಿದರು.

ಕನ್ನಡ ಹೃದಯದ ಭಾಷೆಯಾಗಲಿ: ಜಾಗತೀಕರಣದ ಫಲವಾಗಿ ಇಂಗ್ಲಿಷ್‌ ಎಲ್ಲೆಡೆ ವ್ಯಾಪಿಸಿ ಅಡುಗೆ ಮನೆವರೆಗೂ ವ್ಯಾಪಿಸಿದೆ. ಮುಖ್ಯವಾಗಿ ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಕವಿ ರಾಘವಾಂಕನೆಂದಂತೆ ಪರರ ನಿಂದಿಸಿ ತನ್ನನ್ನು ಹೊಗಳಿಕೊಳ್ಳದ ಕನ್ನಡ ಭಾಷೆಯ ಉಳಿವಿಗೆ ನಮ್ಮತನವನ್ನು ನಾವು ಪ್ರೀತಿಸಬೇಕಾಗಿದೆ. ರಾಜಕಾರಣಿಗಳ ಆಡುಂಬೋಲದಲ್ಲಿ ನರ್ತಕರಾಗದೇ ಧರ್ಮಾಂಧರಾಗದೇ ಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸಿನವರಾಗಬೇಕು ಎಂದು ರಂಗಕರ್ಮಿ,ಕಿರುತೆರೆ , ಚಲನಚಿತ್ರ ನಟ ಶ್ರೀಪತಿ ಮಂಜನಬೈಲು ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.

ಆಳ್ವ ಕನ್ನಡದ ಕಟ್ಟಾಳುವಾಗಲಿ: ಶುಭಾಶಂಸನೆಯ ಆಶೀರ್ವಚನ ನೀಡಿದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಶ್ರೀ, ಕನ್ನಡ ನಾಡು ನುಡಿಯ ಕಾಳಜಿಯ ಅಪರೂಪದ ಚಿಂತಕ ಡಾ. ಮೋಹನ ಆಳ್ವ ಅವರನ್ನು ಕನ್ನಡದ ಕಟ್ಟಾಳುವಾಗಿದ್ದ ಪಾಟೀಲ ಪುಟ್ಟಪ್ಪರಂತೆ ನಾಡು ನುಡಿ ಅಭಿವೃದ್ಧಿಯ ಕಾರ್ಯಕ್ಕೆ ನಾಮ ನಿರ್ದೇಶನ ಮಾಡುವಂತಾಗಬೇಕು ಎಂದು ಹಾರೈಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್‌, ಆಶಯ ನುಡಿಗಳನ್ನಾಡಿದರು. ತಹಸೀಲ್ದಾರ್ ಮುಕುಲ್ ಜೈನ್, ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಬೆದ್ರ ತುಳುಕೂಟದ ಅಧ್ಯಕ್ಷ ಧನಕೀರ್ತಿ ಬಲಿಪ, ಜಯಶ್ರೀ ಅಮರನಾಥ ಶೆಟ್ಟಿ, ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷ ದಿನೇಶ್ ಆನಡ್ಕ, ಮೂಲ್ಕಿತಾಲೂಕು ಕಸಾಪ ಅಧ್ಯಕ್ಷ ಮಿಥುನ್ ಉಡುಪ, ಮೂಡುಬಿದಿರೆ ಕಸಾಪ ಗೌರವ ಕೋಶಾಧ್ಯಕ್ಷ ಅಂಡಾರು ಗುಣಪಾಲ ಹೆಗ್ಡೆ, ಕಾರ್ಯದರ್ಶಿ ಸದಾನಂದ ನಾರಾವಿ, ಹೋಬಳಿ ಅಧ್ಯಕ್ಷ ರಾಮಕೃಷ್ಣ ಶಿರೂರು, ಕೆಂದ್ರೀಯ ಕಾರ್ಯಕಾರಿ ಸಮಿತಿಯ ಡಾ.ಮಾಧವ ಎಂ.ಕೆ, ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ಉಪಸ್ಥಿತರಿದ್ದರು.

ಮೂಡುಬಿದಿರೆ ತಾಲೂಕು ಘಟಕದ ಕ.ಸಾ.ಪ. ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಎಲ್.ಜೆ. ಫರ್ನಾಂಡಿಸ್ ವಂದಿಸಿದರು.

ವಿವಿಧ ಗೋಷ್ಠಿ, ಸಾಂಸ್ಕೃತಿಕ ವೈಭವ: ಮೂಡುಬಿದಿರೆಯ ಗತಕಾಲದ ಹೆಜ್ಜೆಗುರುತುಗಳ ಕುರಿತು ಡಾ. ಪುಂಡಿಕಾಯ್ ಗಣಪಯ್ಯ ಭಟ್, ಮೂಡುಬಿದಿರೆಯ ಸಾಂಸ್ಕೃತಿಕ ಪರಂಪರೆಯ ಕುರಿತು ಡಾ. ಪ್ರಭಾತ್ ಬಲ್ನಾಡ್, ಮೂಡುಬಿದಿರೆಯ ಸಾಹಿತ್ಯ ಪರಂಪರೆಯ ಕುರಿತು ಡಾ.ಎಸ್.ಪಿ. ಅಜಿತ್ ಪ್ರಸಾದ್ , ಮಕ್ಕಳ ಸಾಹಿತ್ಯ ಇಂದಿನ ಸವಾಲು ಕುರಿತು ವಿಜಯಶ್ರೀ ಹಾಲಾಡಿ, ಮೂಡುಬಿದಿರೆಯ ಶೈಕ್ಷಣಿಕ ಪರಂಪರೆಯ ಕುರಿತು ಅರವಿಂದ ಚೊಕ್ಕಾಡಿ ವಿಚಾರ ಮಂಡಿಸಿದರು. ಆಳ್ವಾಸ್ , ಸರ್ವ ಮಂಗಳಾ ಜೈನ ಮಹಿಳಾ ಸಂಘ, ಅಳಿಯೂರು ಸರ್ಕಾರಿ ಪ್ರೌಢ ಶಾಲೆ, ಜೈನ ಪ.ಪೂ ಕಾಲೇಜು, ಸರ್ವೋದಯ ಪ್ರೌಢ ಶಾಲೆ ಕಲ್ಲಮುಂಡ್ಕೂರು, ಆರಾಧನಾ ಸಾಂಸ್ಕೃತಿಕ ತಂಡದಿಂದ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು-ಹೈದ್ರಾಬಾದ್‌ ಹೈಸ್ಪೀಡ್‌ ರೈಲಿಗೆ ಒಪ್ಪಿಗೆ?
ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಇನ್ಮುಂದೆ ‘ಸಮಗ್ರ ಪ್ರಗತಿ ಪತ್ರ’