ಅಕ್ಷರ ಜ್ಞಾನದ ಜತೆಗೆ ಸಂಸ್ಕಾರವೂ ಕಲಿಸಿ: ಶಾಸಕ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ದೊಡ್ಡಬಳ್ಳಾಪುರ: ಅಕ್ಷರ ಜ್ಞಾನದ ಜೊತೆಗೆ ವಿವೇಕ ಮತ್ತು ಸಂಸ್ಕಾರವನ್ನು ರೂಢಿಸಿಕೊಳ್ಳಲು ಅಗತ್ಯ ಮಾರ್ಗದರ್ಶನ ಒದಗಿಸುವುದು ಶಿಕ್ಷಣದ ಮೊದಲ ಆದ್ಯತೆಯಾಗಬೇಕು ಎಂದು ಶಾಸಕ ಧೀರಜ್ ಮುನಿರಾಜ್ ಅಭಿಪ್ರಾಯಪಟ್ಟರು.

ದೊಡ್ಡಬಳ್ಳಾಪುರ: ಅಕ್ಷರ ಜ್ಞಾನದ ಜೊತೆಗೆ ವಿವೇಕ ಮತ್ತು ಸಂಸ್ಕಾರವನ್ನು ರೂಢಿಸಿಕೊಳ್ಳಲು ಅಗತ್ಯ ಮಾರ್ಗದರ್ಶನ ಒದಗಿಸುವುದು ಶಿಕ್ಷಣದ ಮೊದಲ ಆದ್ಯತೆಯಾಗಬೇಕು ಎಂದು ಶಾಸಕ ಧೀರಜ್ ಮುನಿರಾಜ್ ಅಭಿಪ್ರಾಯಪಟ್ಟರು.

ಇಲ್ಲಿನ ಸಂಜಯನಗರದಲ್ಲಿರುವ ಶ್ರೀ ಅರವಿಂದ ವಿದ್ಯಾ ಸಂಸ್ಥೆಯ ವಿವಿಧ ಶೈಕ್ಷಣಿಕ ಘಟಕಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ಕನ್ನಡ ಮಾಧ್ಯಮದ ಶಾಲೆಯೊಂದು ಯಶಸ್ವಿಯಾಗಿ 50 ವರ್ಷಗಳನ್ನು ಪೂರೈಸುವುದು ಮಹತ್ವದ ವಿಚಾರವಾಗಿದೆ. ಅರ್ಧ ಶತಮಾನದಲ್ಲಿ ಇಡೀ ಪೀಳಿಗೆಯನ್ನು ಪ್ರಭಾವಿಸಿದ ಮತ್ತು ಹಲವು ಪೀಳಿಗೆಗಳಿಗೆ ಉತ್ತಮ ಮಾರ್ಗದರ್ಶನ ಮಾಡಿದ ಗುರುಪರಂಪರೆ ಅಭಿನಂದನಾರ್ಹ. ಶಿಕ್ಷಣ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಗಳು ಗತಿಸುತ್ತಿರುವ ಸಂದರ್ಭದಲ್ಲಿ ಸಮಕಾಲೀನ ಅಗತ್ಯಗಳಿಗೆ ಪೂರಕವಾಗಿ ಆಧುನಿಕ ವ್ಯವಸ್ಥೆಗಳನ್ನು ಹೊಂದಬೇಕಾದದ್ದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯ ಎಂದು ಹೇಳಿದರು.

ಚಿತ್ರನಟ ಆರ್ಯನ್ ಸಂತೋಷ್ ಮಾತನಾಡಿ, ಕನ್ನಡದ ಶಾಲೆಯೊಂದರ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಅತ್ಯಂತ ವಿಶೇಷ ಸಂದರ್ಭವಾಗಿದೆ. ನಗರೀಕರಣದ ಅಬ್ಬರದಲ್ಲಿ ಶಿಕ್ಷಣ ವ್ಯವಸ್ಥೆ ತ್ವರಿತಗತಿಯ ಬದಲಾವಣೆ ಹೊಂದುತ್ತಿರುವ ಕಾಲಘಟ್ಟದಲ್ಲಿ ಗುರುಪರಂಪರೆಗೆ ಮಹತ್ವದ ಗೌರವ ನೀಡುವ ಕೆಲಸ ಈ ವೇದಿಕೆಯಲ್ಲಿ ನಡೆದಿರುವುದು ಅಭಿನಂದನಾರ್ಹ ಎಂದರು.

ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್.ಲಕ್ಷ್ಮೀನರಸಿಂಹ ಮಾತನಾಡಿ, 1974ರಲ್ಲಿ ಆರಂಭವಾದ ಶಾಲೆ 5 ದಶಕಗಳ ಕಾಲ ದೊಡ್ಡಬಳ್ಳಾಪುರದ ಶೈಕ್ಷಣಿಕ ಬೆಳವಣಿಗೆಯ ಬಹುಮೂಲ್ಯ ಭಾಗವಾಗಿದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅಸಂಖ್ಯಾತ ವಿದ್ಯಾರ್ಥಿಗಳಲ್ಲಿ ಅನೇಕರು ಸಮಾಜದ ಭಿನ್ನಸ್ತರಗಳಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದಾರೆ. ಇದು ವಿದ್ಯಾಸಂಸ್ಥೆಗೆ ದೊರೆತ ಹೆಮ್ಮೆ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕರಿಗೆ ಅಭಿನಂದನೆ:

ಇದೇ ವೇಳೆ ನಿವೃತ್ತ ಅಧ್ಯಾಪಕರಾದ ಅಶ್ರೋಫ್‌ ಉನ್ನೀಸಾ, ಅರುಣಾ, ನರಸಮ್ಮ, ಅನಸೂಯ, ಈಶ್ವರಯ್ಯ, ಸುಧಾ ಮತ್ತಿತರರನ್ನು ಅಭಿನಂದಿಸಿ ಗೌರವಿಸಲಾಯಿತು.

ಸಾಂಸ್ಕೃತಿಕ ಸಂಭ್ರಮ:

ಇದೇ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ತ.ನ.ಪ್ರಭುದೇವ್, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ಶಾಲಾ ಆಡಳಿತ ಮಂಡಲಿ ಗೌರವಾಧ್ಯಕ್ಷ ಮಹಮ್ಮದ್‌ ಪರ್ವೀಜ್, ಉಪಾಧ್ಯಕ್ಷ ಎನ್.ರಮೇಶ್, ಜಂಟಿ ಕಾರ್ಯದರ್ಶಿ ಸರಸ್ವತಮ್ಮ, ಖಜಾಂಚಿ ಡಿ.ಕೆ.ವೆಂಕಪ್ಪ, ಆಂತರಿಕ ಲೆಕ್ಕಪರಿಶೋಧಕ ಹಾಜಿಜನಾಬ್ ಅಕ್ರಮ್‌ಉಲ್ಲಾ, ನಿರ್ದೇಶಕ ಯಶೋಧರ, ಸಲಹೆಗಾರ ಸಿ.ರಾಮಯ್ಯ, ಹಿರಿಯ ಶಿಕ್ಷಕರಾದ ಭಾಗ್ಯಮ್ಮ, ವಸಂತರಾಜು, ಸರ್ವಮಂಗಳ, ಹಳೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ಮಂಜುನಾಥ್ ನಾಗ್, ಕೆ.ಆರ್.ರವಿಕಿರಣ್, ಯೋಗಾ ಶ್ರೀಕಾಂತ್, ಎಲ್.ಜಿ.ಸಂತೋಷ್ ಉಪಸ್ಥಿತರಿದ್ದರು.7ಕೆಡಿಬಿಪಿ1- ದೊಡ್ಡಬಳ್ಳಾಪುರದ ಶ್ರೀ ಅರವಿಂದ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ನಿವೃತ್ತ ಅಧ್ಯಾಪಕರನ್ನು ಸನ್ಮಾನಿಸಲಾಯಿತು.

Share this article