ಮಹಿಳೆಯರ ಬಗ್ಗೆ ಮಾತನಾಡಿದ ಎಚ್ಡಿಕೆಗೆ ಪಾಠ ಕಲಿಸಿ: ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ

KannadaprabhaNewsNetwork |  
Published : Apr 19, 2024, 01:04 AM IST
18ಎಚ್ಎಸ್ಎನ್8 : ವಿವಿಧ ಸಂಘಟನೆಗಳಿಂದ ಪ್ರಚಾರ ರಥಕ್ಕೆ ಪಟ್ಟಣದ 40 ಅಡಿ ಆಂಜನೇಯಸ್ವಾಮಿ ದೇಗುಲದ ಬಳಿ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಎಚ್.ಡಿ.ಕುಮಾರಸ್ವಾಮಿ ಯವರಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ಹೇಳಿದರು. ಚನ್ನರಾಯಪಟ್ಟಣದಲ್ಲಿ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಾಲನೆ । ಪ್ರಚಾರ ರಥ ಆರಂಭ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿ ಇಡೀ ಮಹಿಳಾ ಕುಲವೇ ತಲೆತಗ್ಗಿಸುವಂತೆ ಮಾಡಿದ ಎಚ್.ಡಿ.ಕುಮಾರಸ್ವಾಮಿ ಯವರಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ಹೇಳಿದರು.

ಪಟ್ಟಣದ ೪೦ ಅಡಿ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಕರ್ನಾಟಕ ರಾಜ್ಯ ರೈತ ಸಂಘ, ಕೆಪಿಆರ್‌ಎಸ್, ತೆಂಗು ಬೆಳೆಗಾರರ ಹೋರಾಟ ಸಮಿತಿ, ಸಿಐಟಿಯು, ಸಿಪಿಎಂ, ಸಿಪಿಐಎಂ, ದಲಿತಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ದೊರೆತಿದ್ದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಆದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಆದರೆ ಇತ್ತೀಚಿಗೆ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನೀಡುವ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ, ಅವರವರ ವೈಯಕ್ತಿಕ ಪಕ್ಷಗಳ ವಿಚಾರದಲ್ಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮಹಿಳೆಯರು ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

ಕೆಪಿಆರ್‌ಎಸ್ ಪಕ್ಷದ ಮುಖಂಡ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರದ ವಿಚಾರದಲ್ಲಿ ನಿಜವಾದ ರೈತರಿಗೆ ಮೋಸವಾಗಿದೆ, ತೋಟಗಾರಿಕೆ ಮೂಲಕ ವೈಜ್ಞಾನಿಕ ಬೆಲೆ ನಿಗದಿ ಮಾಡಿಲ್ಲ. ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ೫ ವರ್ಷಗಳಲ್ಲಿ ಹಾಸನ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದಾರೆ, ಎಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಯಾವ ತಾಲೂಕಿಗೆ ಎಷ್ಟು ಬಾರಿ ಪ್ರವಾಸ ಮಾಡಿದ್ದಾರೆ ಎಂಬುದನ್ನು ಜನರಿಗೆ ಮಾಧ್ಯಮದ ಮೂಲಕ ತಿಳಿಸಲಿ. ಅದನ್ನು ಬಿಟ್ಟು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮೋದಿ ಹೆಸರಿನಲ್ಲಿ ಮತ ಕೇಳುವುದು ಸರಿಯೇ ಎಂದು ಪ್ರಶ್ನಿಸಿದರು.

ದೇಶಕ್ಕೆ ಮೋದಿ ಕೊಡುಗೆ ಏನು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೆ ಏರಿದ್ದು, ಯುವಕರಿಗೆ ಎಷ್ಟು ಉದ್ಯೋಗ ನೀಡಿದ್ದಾರೆ ಎಂದು ತಿಳಿಸಲಿ. ೬೦ಲಕ್ಷ ಸರ್ಕಾರಿ ಕಚೇರಿಗಳಲ್ಲಿ ಖಾಲಿ ಹುದ್ದೆಗಳಿವೆ. ರೈತ ವಿರೋಧಿ ಕಾಯ್ದೆ ತಂದು ಎಪಿಎಂಸಿ, ಕೆಇಬಿ, ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವುದೇ ಇವರ ಉದ್ದೇಶ. ಅಂಬಾನಿ, ಅದಾನಿ ಅಂತಹವರಿಗೆ ದೇಶ ಮಾರಲು ಮುಂದಾದರೂ ಅಚ್ಚರಿಯಿಲ್ಲ, ಆಸ್ತಿವಂತರಿಗೆ ತೆರಿಗೆ ವಿನಾಯಿತಿ ಕೊಟ್ಟು ಬಡವರಿಗೆ ತೆರಿಗೆಯ ಬರೆ ಎಳೆದು ಜನಸಾಮಾನ್ಯರಿಗೆ ಬರೆಹಾಕಿದ್ದಾರೆ ಎಂದು ಕುಹಕವಾಡಿದರು.

ಸಿಐಟಿಯು ಜಿಲ್ಲಾ ಮುಖಂಡ ಧರ್ಮೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ನುಗ್ಗೇಹಳ್ಳಿ ರಾಮಚಂದ್ರು, ಹರೀಶ್ ಮಾಳೇನಹಳ್ಳಿ, ಸಿ.ಜಿ. ರವಿ, ಶಂಕರ್‌ ಬರಗೂರು, ದಲಿತ ಮುಖಂಡ ನಾಗಸಮುದ್ರ ಬಾಲರಾಜ್, ಅಹಿಂದ ಸಂಘಟನೆ ತಾಲೂಕು ಅಧ್ಯಕ್ಷ ಉತ್ತೇನಹಳ್ಳಿ ಚಂದ್ರು, ಷರೀಫ್, ಪುರಸಭಾ ಮಾಜಿ ಸದಸ್ಯ ಪರಶುರಾಂ, ಲಿಂಗದೇವರು ಇದ್ದರು.

ವಿವಿಧ ಸಂಘಟನೆಗಳಿಂದ ಪ್ರಚಾರ ರಥಕ್ಕೆ ಚನ್ನರಾಯಪಟ್ಟಣದ 40 ಅಡಿ ಆಂಜನೇಯಸ್ವಾಮಿ ದೇಗುಲದ ಬಳಿ ಚಾಲನೆ ನೀಡಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ