ಹುಬ್ಬಳ್ಳಿ:
ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅದ್ಹೇಗೆ ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು? ಪುತ್ರ ವ್ಯಾಮೋಹದಿಂದ ಮೈತ್ರಿ ಮಾಡಿಕೊಂಡಿದ್ದಾರೆಯೇ? ಎಂದು ವಿಧಾನ ಪರಿಷತ್ತಿನ ಮುಖ್ಯ ಸಲಿಂ ಅಹ್ಮದ್ ಪ್ರಶ್ನಿಸಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ದೇವೇಗೌಡರು ಹಿಂದೆ ಹೇಳಿದ್ದರು. ಇದೀಗ ಇವರೇ ಹೋಗಿ ಮೈತ್ರಿ ಮಾಡಿಕೊಂಡಿದ್ದಾರೆ. ಅವರ ಜಾತ್ಯತೀತತೆ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
2004ರಲ್ಲಿ ಇಂಡಿಯಾ ಶೈನಿಂಗ್ ಎಂದಿದ್ದರು. ಆದರೆ ಆಗ ಬಿಜೆಪಿ ಸೋತಿತ್ತು. ಈಗ ಮೋದಿ ಹೆಸರಿನ ಚುನಾವಣೆ ಮೇಲೆ ಹೋಗುತ್ತಿದೆ. ಈಗಲೂ ಅದೇ ರೀತಿ ಫಲಿತಾಂಶ ಬರುತ್ತದೆ. ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟವೇ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಕಾಣಲಿದೆ. ಪಕ್ಷದ ಅಭ್ಯರ್ಥಿಗಳಿಗೆ ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆಯಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬರ ಪರಿಹಾರದ ವಿಚಾರವಾಗಿ ಕರ್ನಾಟಕಕ್ಕೆ ಮೋಸವಾಗಿದೆ. ಅನ್ನಭಾಗ್ಯಕ್ಕೆ ಅಕ್ಕಿ ಕೊಡಲಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದ ರಾಜ್ಯಸಭಾ ಸದಸ್ಯರಾದರೂ ತಾಯಿ ಹೃದಯವಿಲ್ಲ. ಹಣ ಬಿಡುಗಡೆ ವಿಷಯದಲ್ಲಿ ತಪ್ಪಾಗಿದೆ ಎಂದು ಕೊನೆಗೂ ಅವರೇ ಒಪ್ಪಿಕೊಂಡಿದ್ದಾರೆ ಎಂದ ಅವರು, ದೇಶದಲ್ಲಿ ಭಯದ ವಾತಾವರಣವನ್ನು ಬಿಜೆಪಿ ಸೃಷ್ಟಿಸಿದೆ. ಹಿಟ್ಲರ್ ಮಾದರಿಯ ಆಡಳಿತವನ್ನು ಮೋದಿ ನೇತೃತ್ವದ ಸರ್ಕಾರ ಮಾಡುತ್ತಿದೆ. ಸಿಬಿಐ, ಇಡಿಯಂತಹ ಇಲಾಖೆ ಇಟ್ಟುಕೊಂಡು ಹೆದರಿಸುತ್ತಿದ್ದಾರೆ. ಚುನಾವಣಾ ಬಾಂಡ್ ಹಗರಣ ಮಾಡಿದೆ. ಬಿಜೆಪಿ ಭ್ರಷ್ಟ ಪಾರ್ಟಿಯಾಗಿದೆ ಎಂದು ಟೀಕಿಸಿದರು
ಹಿಂದೆ ಮಹದಾಯಿ ವಿಜಯೋತ್ಸವ ಮಾಡಿದ್ದರೂ ಏನಾಗಿದೆ ಎಂಬುದನ್ನು ಬಿಜೆಪಿಯವರು ಹೇಳಲಿ, ಎಷ್ಟು ಅಭಿವೃದ್ಧಿ ಮಾಡಿದ್ದಾರೆ, ಎಷ್ಟು ಕೈಗಾರಿಕೆ ತಂದಿದ್ದಾರೆ, ಎಷ್ಟು ಉದ್ಯೋಗ ಕೊಟ್ಟಿದ್ದಾರೆ ಎಂಬುದನ್ನು ಹೇಳುತ್ತಿಲ್ಲ. ಇದರಿಂದ ಜನ ಭ್ರಮನಿರಸನಗೊಂಡಿದ್ದಾರೆ. ಹೀಗಾಗಿ ಯುವಕ ವಿನೋದ ಅಸೂಟಿ ಆಯ್ಕೆಗೆ ತೀರ್ಮಾನ ಮಾಡಿದ್ದಾರೆ ಎಂದರು.ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಕಾಂಗ್ರೆಸ್ ಹುಡುಗನಿಗೆ ಟಿಕೆಟ್ ಕೊಟ್ಟಿದ್ದಾರೆ, ಐದು ಲಕ್ಷ ಅಂತರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಜೂನ್ 4 ರಂದು ಉತ್ತರ ಸಿಗುತ್ತದೆ. ಇದೇ ವಾರದಲ್ಲಿ ಧಾರವಾಡ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನೀಲಕುಮಾರ ಪಾಟೀಲ, ಮೋಹನ ಹಿರೇಮನಿ ಸೇರಿದಂತೆ ಇತರರು ಇದ್ದರು.