ಕನ್ನಡಪ್ರಭ ವಾರ್ತೆ ಬೇಲೂರು ಸುವರ್ಣ ಸಂಭ್ರಮದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಕೆಂಪೇಗೌಡ ವೃತ್ತವನ್ನು ಕನ್ನಡ ಬಾವುಟ, ತಳಿರು ತೋರಣಗಳಿಂದ ಶೃಂಗರಿಸಲಾಗಿದ್ದು ಕನ್ನಡ ಪ್ರೇಮಿಗಳ ಗಮನ ಸೆಳೆಯಿತು.
ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಸಿ ಮಾತನಾಡಿ ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರು ನಮ್ಮ ಕನ್ನಡ ನಾಡು, ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ. ಕನ್ನಡದ ಪ್ರಥಮ ಶಿಲಾ ಶಾಸನ ನಮ್ಮ ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಸಿಕ್ಕಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ ಎಂದರು. ಇಂತಹ ಪವಿತ್ರ ಭಾಷೆಯನ್ನು ಕನ್ನಡಿಗರಾದ ನಾವು ಪ್ರತಿ ಮನೆಯಲ್ಲೂ ಮಕ್ಕಳಿಗೆ ಕಲಿಸಬೇಕು. ಆಂಗ್ಲ ಭಾಷೆಯ ವ್ಯಾಮೋಹಕ್ಕೊಳಗಾಗಿ ರಾಜ್ಯೋತ್ಸವದಂದು ಮಾತ್ರ ಕನ್ನಡ ಉಳಿಸಿ ಎನ್ನುವುದನ್ನು ಬಿಟ್ಟು, ನಿತ್ಯವೂ ಕನ್ನಡ, ಎಂದೆಂದಿಗೂ ಕನ್ನಡ ಎನ್ನುವಂತೆ ಕನ್ನಡಿಗರಲ್ಲಿ ಅರಿವು ಮೂಡಿಸಬೇಕು ಎಂದರು.ಕರವೇ ಅಧ್ಯಕ್ಷ ವಿ ಎಸ್ ಭೋಜೇಗೌಡ ಮಾತನಾಡಿ ಕೇವಲ ಕನ್ನಡ ರಾಜ್ಯೋತ್ಡವದಲ್ಲಿ ಮಾತ್ರ ಮಾತೃ ಪ್ರೇಮ ಮೆರೆಯದೆ ಪ್ರತಿನಿತ್ಯ ಕನ್ನಡಕ್ಕೆ ಆದ್ಯತೆ ನೀಡವೇಕು ಎಂದರು. ಕೇಂದ್ರ ಸರ್ಕಾರ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಸರಿಯಲ್ಲ. ಹಿಂದಿ ಕಡ್ಡಾಯವಾಗಿ ಹೇರಲು ಬಂದರೆ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಕನ್ನಡ ಬಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರು ಎಂದರು.
ಈ ಸಂದರ್ಭದಲ್ಲಿ ಬಿಇಒ ರಾಜೇಗೌಡ, ಪುರಸಭೆ ಸದಸ್ಯರಾದ ಜಗದೀಶ್, ಅಕ್ರಂ, ಪತ್ರಕರ್ತರ ಸಂಘದ ಅಧ್ಯಕ್ಷೆ ಭಾರತಿ ಗೌಡ, ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಜಯಪ್ರಕಾಶ್, ಉಪಾಧ್ಯಕ್ಷ ಮಂಜಾಚಾರ್, ಅರುಣ್, ಸತೀಶ್, ಯುವಘಟಕದ ಅಧ್ಯಕ್ಷ ಸತೀಶ್, ಕಾರ್ತಿಕ್, ಗಣೇಶ್, ಲೋಹಿತ್ ಆರಾಧ್ಯ, ಲೋಕೇಶ್ ಮಂಜುನಾಥ್, ದೇವು, ಹುಸೇನ್, ನವೀನ್, ಇತರರು ಹಾಜರಿದ್ದರು.