ಕಾರ್ಮಿಕರನ್ನು ನಿಯೋಜಿಸುವ ಮೊದಲು ಸೂಕ್ತ ದಾಖಲೆ ಪಡೆಯಿರಿ: ಡಿಸಿ

KannadaprabhaNewsNetwork | Published : Nov 7, 2024 11:50 PM

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಕ್ರಮ ಬಾಂಗ್ಲಾದೇಶಿಯ ವಲಸೆ ಕಾರ್ಮಿಕರಿಗೆ ಹಾಗೂ ನಾಗರಿಕರಿಗೆ ಸಂಬಂಧಿಸಿದಂತೆ ಜಾಗೃತಿ ಸಭೆ ನಡೆಯಿತು.

ವಲಸೆ ಕಾರ್ಮಿಕರಿಗೆ ಹಾಗೂ ನಾಗರಿಕರಿಗೆ ಸಂಬಂಧಿಸಿದಂತೆ ಜಾಗೃತಿ ಸಭೆ

ಕನ್ನಡಪ್ರಭ ವಾರ್ತೆ ಮಣಿಪಾಲ

ಗುತ್ತಿಗೆದಾರರು ಕಾರ್ಮಿಕರನ್ನು ನಿಯೋಜಿಸುವವ ಮೊದಲು ಅವರ ಗುರುತಿನ ಚೀಟಿ, ಶಾಶ್ವತ ಹಾಗೂ ತಾತ್ಕಾಲಿಕ ವಾಸಸ್ಥಾನದ ವಿವರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಮತ್ತು ಈ ವಿವರಗಳನ್ನು ಸಂಬಂಧಿಸಿದ ಸರ್ಕಾರಿ ಕಚೇರಿಗಳಿಗೆ ತಪ್ಪದೇ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.ಅವರು ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಕ್ರಮ ಬಾಂಗ್ಲಾದೇಶಿಯ ವಲಸೆ ಕಾರ್ಮಿಕರಿಗೆ ಹಾಗೂ ನಾಗರಿಕರಿಗೆ ಸಂಬಂಧಿಸಿದಂತೆ ಜಾಗೃತಿ ಸಭೆ ನಡೆಸಿದರು.ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಬಾಂಗ್ಲಾದೇಶದ ಕಾರ್ಮಿಕರು ಜಿಲ್ಲೆಯಲ್ಲಿ ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಅಂಥವರು ದಾಖಲೆಗಳನ್ನು ಸೃಷ್ಟಿಸಿಕೊಂಡು ಕಾನೂನುಬಾಹಿರವಾಗಿ ವಾಸವಿದ್ದರೆ, ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಚ್ಚರ ವಹಿಸಲು ನಿರ್ದೇಶನ ನೀಡಿದೆ. ಕಾರ್ಮಿಕ, ಕೈಗಾರಿಕೆ, ಮೀನುಗಾರಿಕೆ ಸೇರಿದಂತೆ ಮತ್ತಿತರ ಇಲಾಖೆಗಳು ಇಂತಹ ಕಾರ್ಮಿಕರ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದರು.ಮನೆಯ ಮಾಲೀಕರು ಮನೆಯನ್ನು ಬಾಡಿಗೆಗೆ ನೀಡುವ ಮುನ್ನ ಬಾಡಿಗೆದಾರರ ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳುವುದು ಸೂಕ್ತ ಎಂದ ಅವರು, ಕಾರ್ಮಿಕ, ಉದ್ಯೋಗ ಪರ ಸಂಘಟನೆಗಳು, ಸಾರ್ವಜನಿಕರು ಸಹ ಅಕ್ರಮ ವಿದೇಶಿ ವಲಸಿಗರ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.ಮುಖ್ಯವಾಗಿ ಕಾನೂನು ಬಾಹಿರವಾಗಿ ಹೊರರಾಜ್ಯಗಳ ಮೀನುಗಾರಿಕೆ ಬೋಟ್‌ಗಳು ಜಿಲ್ಲೆಯ ವ್ಯಾಪ್ತಿಯೊಳಗೆ ಬಂದಾಗ ಕಾನೂನಿನನ್ವಯ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅವರು ಎಚ್ಚರಿಕೆ ನೀಡಿದರು. ಬಂದರುಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಆಳವಡಿಸಬೇಕು ಎಂದವರು ಬಂದರು ಹಾಗೂ ಸಿ.ಆರ್.ಝೆಡ್ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಮಾತನಾಡಿ, ಕಾನೂನು ಬಾಹಿರ ವ್ಯಕ್ತಿಗಳನ್ನು ಕಾರ್ಮಿಕರನ್ನಾಗಿ ನಿಯೋಜಿಸಿಕೊಂಡರೆ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.ಸಭೆಯಲ್ಲಿ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮ್ಮದ್, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್ ಮತ್ತು ವಿವಿಧ ಸಂಘಟಣೆಗಳ, ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share this article