ತಂದೆ- ತಾಯಂದಿರು ಮಕ್ಕಳನ್ನು ಇಂತಹ ಮಠಮಾನ್ಯಗಳಲ್ಲಿ ಜರುಗುವ ಕಾರ್ಯಗಳಿಗೆ ಕರೆದುಕೊಂಡು ಬರುವ ಮೂಲಕ ಅವರಿಗೆ ನಮ್ಮ ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿಕೊಡಬೇಕು.
ಮುಂಡರಗಿ: ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ದೇವರು, ಧರ್ಮ, ಸಂಸ್ಕೃತಿ, ಸಂಸ್ಕಾರದ ಕುರಿತು ಕೊರತೆ ಎದ್ದು ಕಾಣುತ್ತಿದ್ದು, ನಮ್ಮ ಮಕ್ಕಳಿಗೆ ಅದರ ಕುರಿತು ತಿಳಿವಳಿಕೆ ನೀಡುವುದು ಅವಶ್ಯವಾಗಿದೆ ಎಂದು ವಿರುಪಾಪುರ- ಕಲಕೇರಿ ಮಠದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲೂಕಿನ ವಿರುಪಾಪುರ ಕಲಕೇರಿ ಮುದುಕೇಶ್ವರ ಮಠದ 105ನೇ ಜಾತ್ರಾ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದ ಅಂಗವಾಗಿ ಬುಧವಾರ ಸಂಜೆ ಜರುಗಿದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ತಂದೆ- ತಾಯಂದಿರು ಮಕ್ಕಳನ್ನು ಇಂತಹ ಮಠಮಾನ್ಯಗಳಲ್ಲಿ ಜರುಗುವ ಕಾರ್ಯಗಳಿಗೆ ಕರೆದುಕೊಂಡು ಬರುವ ಮೂಲಕ ಅವರಿಗೆ ನಮ್ಮ ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿಕೊಡಬೇಕು. ಶ್ರೀಮಠದ ಜಾತ್ರಾ ಮಹೋತ್ಸವ ಗುರುಹಿರಿಯರ ಹಾಗೂ ಭಕ್ತರ ಸಹಾಯ, ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ಜರುಗುತ್ತಿದೆ ಎಂದರು. ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿ, ಜಾತ್ರೆ ಎಂದರೆ ಸರ್ವಧರ್ಮದ ಸಂಕೇತವಾಗಿವೆ. ಇತ್ತೀಚೆಗೆ ಜಾತ್ರೆ ಎನ್ನುವುದು ಉತ್ಸವಗಳಾಗಿ ಬದಲಾಗಿವೆ. ಜಾತ್ರೆ ಹಿನ್ನೆಲೆಯಲ್ಲಿ ನಮ್ಮ ಧರ್ಮ, ದೇವರ, ಸ್ವಾಮೀಜಿಯವರ ಕುರಿತು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಮಕ್ಕಳನ್ನು ಪಾಲನೆ ಪೋಷಣೆ ಮಾಡುವಾಗ ಪಾಲಕರು ತುಂಬಾ ಜಾಗೃತಿ ವಹಿಸಬೇಕು. ಮಕ್ಕಳಿಗೆ ಉತ್ತಮ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಬನ್ನಿಕೊಪ್ಪ, ಮೈಸೂರಿನ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜಕ್ಕೆ ಒಬ್ಬ ವಟುವನ್ನು ಕೊಡಬೇಕಾದರೆ ಅದು ಸುಲಭದ ಕಾರ್ಯವಲ್ಲ. ತಂದೆ ತಾಯಂದಿರು ದುಃಖವನ್ನು ಮರೆತು ಹೆತ್ತ ಪುತ್ರನನ್ನು ಸಮಾಜಕ್ಕೆ ನೀಡುವ ಕಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದರು.ಕಾರ್ಯಕ್ರಮದಲ್ಲಿ ಉತ್ತರಾಧಿಕಾರಿ ಶಿವಕುಮಾರ ದೇವರು, ಶಿವನಗೌಡ ಡೋಣಿ, ಸುಭಾಸರಡ್ಡಿ ದೇವರಗೂಳಿ, ಆನಂದಗೌಡ ಪಾಟೀಲ, ವೆಂಕಪ್ಪ ಯಕ್ಲಾಸಪೂರ, ಧನಂಜಯ ದ್ರಾಕ್ಷಿ, ಅಪ್ಪಣ್ಣ ಮೇಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಾಬುದ್ದೀನ ನದಾಫ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.