ಮಹದಾಯಿಗೆ ಅಡ್ಡಗಾಲು ಹಾಕಿದವರಿಗೆ ತಕ್ಕಪಾಠ ಕಲಿಸಿ

KannadaprabhaNewsNetwork | Published : May 3, 2024 1:07 AM

ಸಾರಾಂಶ

ಕೇಂದ್ರ ಸರ್ಕಾರವು ರಾಜ್ಯದ ವಿಷಯದಲ್ಲಿ ಜಿ.ಎಸ್.ಟಿ ಹಾಗೂ ಹಣಕಾಸು ಹಂಚಿಕೆಯಲ್ಲಿ ಅನ್ಯಾಯ

ಗಜೇಂದ್ರಗಡ: ಅಧಿಕಾರ ಕೈಯಲ್ಲಿದ್ದಾಗ ಬೊಮ್ಮಾಯಿ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ನೆನಪಿಗೆ ಬರಲಿಲ್ಲ, ಯೋಜನೆ ಅಡ್ಡಗಾಲು ಹಾಕಿ ಉತ್ತರ ಕರ್ನಾಟಕ್ಕೆ ಅನ್ಯಾಯ ಮಾಡಿ ಇಲ್ಲಿನ ಜನತೆಗೆ ಚೊಂಬು ನೀಡಿದ ಕೇಂದ್ರ ಸರ್ಕಾರಕ್ಕೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವ ಸಮಯ ಬಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಗುರುವಾರ ರಾತ್ರಿ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದರು.

ಮಹದಾಯಿ ಯೋಜನೆಗಾಗಿ ಪಾದಯಾತ್ರೆ ಮಾಡಿ ಪತ್ರ ಬರೆದ ಬೊಮ್ಮಾಯಿ ಅವರೇ ನೀವು ಸಿಎಂ ಆಗಿದ್ದಾಗ ಮಹದಾಯಿ ಹಾಗೂ ಕಳಸಾ ಯೋಜನೆ ನೆನಪಿಗೆ ಬರಲಿಲ್ಲವೇ. ಹಿಂದಿನ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಪ್ರಹ್ಲಾದ ಜೋಶಿ ಅವರಿಗೆ ೩೫ ವರ್ಷದ ಸುದೀರ್ಘ ಹೋರಾಟವಾಗಿರುವ ಮಹದಾಯಿ ಯೋಜನೆ ಜಾರಿ ಮಾಡಲು ಮುಂದಾಗಲಿಲ್ಲ. ಪರಿಣಾಮ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಅಡ್ಡಗಾಲು ಹಾಕಿ ಇಡೀ ಉತ್ತರ ಕರ್ನಾಟಕ ಹಾಗೂ ಇಲ್ಲಿನ ಜನರಿಗೆ ದ್ರೋಹ ಹಾಗೂ ಅನ್ಯಾಯ ಮಾಡಿದೆ.

ಕೇಂದ್ರ ಸರ್ಕಾರವು ರಾಜ್ಯದ ವಿಷಯದಲ್ಲಿ ಜಿ.ಎಸ್.ಟಿ ಹಾಗೂ ಹಣಕಾಸು ಹಂಚಿಕೆಯಲ್ಲಿ ಅನ್ಯಾಯ, ಕಾವೇರಿ, ಭದ್ರಾ ಹಾಗೂ ಮಹದಾಯಿ ವಿಷಯ ಸೇರಿ ರಾಜ್ಯದ ಪ್ರತಿ ಹೆಜ್ಜೆ ಹಾಗೂ ಹಂತದಲ್ಲೂ ಕೇಂದ್ರದಿಂದ ನಮಗೆ ಅನ್ಯಾಯವೆಸಗಿದೆ. ರಾಜ್ಯದಿಂದ ಆಯ್ಕೆಯಾದ ೨೭ ಸಂಸದರು ಒಂದು ದಿನವೂ ಸಹ ಧ್ವನಿ ಎತ್ತಲಿಲ್ಲ. ರಾಜ್ಯದಿಂದ ಓಟು ಪಡೆದ ಸಂಸದರು ಗುಜರಾತ್‌ನವರಿಗೆ ಬಹುಪರಾಕ್ ಹಾಕಲು ನಿಮ್ಮನ್ನು ಅಲ್ಲಿಗೆ ಕಳುಹಿಸಿದ್ದಾರಾ ಎಂದು ಹರಿಹಾಯ್ದರು. ಇಂತಹ ಸಂಸದರು ೨೭ ಇದ್ದರೆ ೨೦೦ ಇದ್ದರೇನು ಉಪಯೋಗ, ನೆಟ್ಟಗೆ ಒಬ್ಬನು ಇದ್ದರೂ ಸಾಕು. ನಮ್ಮ ಎಂಪಿ ಡಿ.ಕೆ. ಸುರೇಶ ರಾಜ್ಯದ ಪರವಾಗಿ ಮಾತನಾಡಿದ್ದಾರೆ. ಹೀಗಾಗಿ ರಾಜ್ಯದ ಪರವಾಗಿ ಮಾತನಾಡದ ದಂಡ ಪಿಂಡ ಸಂಸದರನ್ನು ಮನೆಗೆ ಕಳುಹಿಸಿ.

ಬೊಮ್ಮಾಯಿ ಅವರ ಹೊಟ್ಟೆ ತುಂಬಿದೆ. ಜನತೆ ನೀಡಿರುವ ಶಾಸಕರ ಅಧಿಕಾರ ಬಿಡಲು ಸಿದ್ಧರಾಗಿರುವ ಅವರಿಗೆ ಅಧಿಕಾರ ನೀಡಬೇಡಿ. ಸಮಾಜ ಸೇವೆಯ ಕನಸು ಹೊತ್ತು ಬಂದಿರುವ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸಿ ಎಂದರು.

ಶಾಸಕ ಜಿ.ಎಸ್. ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಸೇರಿ ಕಾಂಗ್ರೆಸ್ ಮುಖಂಡರು ಇದ್ದರು.

Share this article