ಹೊಸಪೇಟೆ: ವಿಜಯನಗರ ಜಿಲ್ಲೆಯ 19 ಕೇಂದ್ರಗಳಲ್ಲಿ ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ 8698 ಅಭ್ಯರ್ಥಿಗಳ ಪೈಕಿ 8304 ಅಭ್ಯರ್ಥಿಗಳು ಪರೀಕ್ಷೆ ಬರೆದರು. 394 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.
ನಗರದೆಲ್ಲೆಡೆ ಟಿಇಟಿ ಅಭ್ಯರ್ಥಿಗಳ ದಂಡು ಕಂಡು ಬಂದಿತು. ಗ್ರಾಮೀಣ ಪ್ರದೇಶದಿಂದ ಖಾಸಗಿ ವಾಹನಗಳಲ್ಲಿ ಅಭ್ಯರ್ಥಿಗಳು ಆಗಮಿಸಿದ್ದರು. ಪರೀಕ್ಷೆ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ನಗರ ಹಾಗೂ ಜಿಲ್ಲೆಯ ಅಭ್ಯರ್ಥಿಗಳು ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಜನ ನೆರೆದಿದ್ದರಿಂದ ರಸ್ತೆಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಕೇಂದ್ರಗಳ ವ್ಯಾಪ್ತಿಯ ಹೋಟೆಲ್‌ಗಳು, ಖಾನಾವಳಿಗಳಲ್ಲಿ ಹೆಚ್ಚಿನ ಜನ ಕಂಡು ಬಂದರು.
ಪರೀಕ್ಷೆ ಬರೆಯಲು ಮಗುವಿನೊಂದಿಗೆ ಆಗಮಿಸಿದ್ದ ಮಹಿಳೆಯರು ಕೇಂದ್ರದಲ್ಲಿ ತೆರಳಿದಾಗ ಪೋಷಕರು ಜೋಳಿಗೆ ಕಟ್ಟಿ ಮಗುವಿನ ಆರೈಕೆ ಕೈಗೊಂಡರು. ಕೆಲವು ಕೇಂದ್ರಗಳಲ್ಲಿ ಪತಿ, ಪತ್ನಿಗಳು ಕೂಡ ಪರೀಕ್ಷೆ ಬರೆದರು. ಅಭ್ಯರ್ಥಿಗಳೊಂದಿಗೆ ಕುಟುಂಬ ಸದಸ್ಯರೂ ಆಗಮಿಸಿದ್ದರು. ಕೇಂದ್ರಗಳ ಆವರಣ, ಮೈದಾನಗಳಲ್ಲಿ ಕುಟುಂಬ ಸದಸ್ಯರು ವಿಶ್ರಾಂತಿ ಪಡೆದರು. ನಗರದ ಬಸವೇಶ್ವರ ವೃತ್ತ, ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಸಂಚಾರ ಪೊಲೀಸರು ವಾಹನಗಳನ್ನು ನಿಯಂತ್ರಿಸಿ ಸಂಚಾರ ದಟ್ಟಣೆ ಕಡಿಮೆಗೊಳಿಸಿದರು.