ಸಮಾಜದಲ್ಲಿ ಗುರುವಿಗೆ ಮಹತ್ವದ ಸ್ಥಾನ: ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ

KannadaprabhaNewsNetwork |  
Published : Sep 07, 2025, 01:00 AM IST
ಶಿವಮೊಗ್ಗ ತಾಲೂಕಿನ ಸಂತೆಕಡೂರಿನ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಪೋಷಕರ ಸಂಘದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸಮಾಜದಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮಾಜದಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಹೇಳಿದರು.

ಶಿವಮೊಗ್ಗ ತಾಲೂಕಿನ ಸಂತೆಕಡೂರಿನ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಪೋಷಕರ ಸಂಘದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲಕ್ಕೆ ಹೋಲಿಸಿದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ, ಗುರುವಿನ ಸ್ಥಾನ ಯಾವತ್ತಿಗೂ ಮಹತ್ವಪೂರ್ಣವಾಗಿಯೇ ಇದೆ. ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದವರು ಯಶಸ್ಸು ಗಳಿಸುತ್ತಾರೆ ಎಂದರು.

ಕೇಂದ್ರೀಯ ವಿದ್ಯಾಲಯ ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಶಿಕ್ಷಣ ಎಂಬುದು ನಾಲ್ಕು ಗೋಡೆಗಳ ನಡುವಿನ ಕೊಠಡಿಗೆ ಸೀಮಿತವಾಗಿಲ್ಲ. ದೇಶ ಮತ್ತು ಜಗತ್ತಿನ ದರ್ಶನ ಮಾಡಿಸುವ ಶೈಕ್ಷಣಿಕ ವ್ಯವಸ್ಥೆ ಕೇಂದ್ರೀಯ ವಿದ್ಯಾಲಯದ್ದು ಎಂದು ವಿಶ್ಲೇಷಿಸಿದರು.

ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ಪೋಷಕರ ಸಂಘದ ಅಧ್ಯಕ್ಷ ಆರಗ ರವಿ ಮಾತನಾಡಿ, ದೇಶದ ಪ್ರತಿಷ್ಠಿತ ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಉದ್ದೇಶದಿಂದ ಪೋಷಕರ ಸಂಘವನ್ನು ಸ್ಥಾಪಿಸಲಾಗಿದೆ. ಶಾಲೆಗೆ ಅಗತ್ಯವಿರುವ ಮೂಲ ಸೌಲಭ್ಯ ಒದಗಿಸಲು ಸಂಸದರು, ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಶಿವಮೊಗ್ಗ ಕೇಂದ್ರೀಯ ವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೋಷಕರ ಸಂಘವನ್ನು ಸ್ಥಾಪಿಸಲಾಗಿದೆ. ಪೋಷಕರ ಸಂಘದಿಂದಲೇ ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಿ ಶಿಕ್ಷಕರು, ಸಿಬ್ಬಂದಿಯನ್ನು ಗೌರವಿಸಲಾಗುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ನಡುವೆ ಉತ್ತಮ ಬಾಂಧವ್ಯ ಬೆಳೆಸುವುದು ಸಂಘದ ಉದ್ದೇಶವಾಗಿದೆ ಎಂದರು.

ಪ್ರಭಾರಿ ಪ್ರಾಂಶುಪಾಲ ಕೆ.ಬಿ. ಸುಬ್ರಹ್ಮಣ್ಯ ಶರ್ಮಾ ಮಾತನಾಡಿ, ಶಿವಮೊಗ್ಗ ಕೇಂದ್ರೀಯ ವಿದ್ಯಾಲಯದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮ. 38 ವರ್ಷಗಳ ನನ್ನ ಸೇವೆಯಲ್ಲಿ ಪೋಷಕರೇ ಶಿಕ್ಷಕರನ್ನು ಗೌರವಿಸುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ ಎಂದರು.

ಶಾಲೆಯ ಶಿಕ್ಷಕ ವರ್ಗ, ಸಿಬ್ಬಂದಿಯನ್ನು ಪೋಷಕರ ಸಂಘದಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘದ ಪದಾಧಿಕಾರಿಗಳಾದ ಪ್ರಿಯಾ, ಪ್ರಶಾಂತ್, ತೇಜಸ್ವಿನಿ, ರಾಘವೇಂದ್ರ, ಗೋವಿಂದರಾಜ್ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗೋಸಲ್ ಬಸವರಾಜ್ ಸ್ವಾಗತಿಸಿದರು. ನಿರ್ದೇಶಕರಾದ ನಂದಿನಿ ನಿರೂಪಿಸಿ, ಚೈತ್ರ ವಂದಿಸಿದರು. ಹಿರಿಯ ಶಿಕ್ಷಕಿ ಭಾವನ ಸಿಂಗ್ ಸೇರಿ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು