ವಿನೂತನ ಕಲಿಕಾ ವಿಧಾನದಿಂದ ವಿದ್ಯಾರ್ಥಿಗಳ ಮನಮುಟ್ಟುತ್ತಿರುವ ಶಿಕ್ಷಕ ಕೆ.ಜಿ. ನಾಯ್ಕ

KannadaprabhaNewsNetwork |  
Published : Sep 05, 2025, 01:00 AM IST
ಕೆ ಜಿ ನಾಯ್ಕ  | Kannada Prabha

ಸಾರಾಂಶ

ವಿಶೇಷವಾದ ಕಲಿಕಾ ವಿಧಾನಗಳೊಂದಿಗೆ ಪಾಠ ಮಾಡುತ್ತ ವಿದ್ಯಾರ್ಥಿಗಳ ಮನಮುಟ್ಟುತ್ತಾ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.

ಸಿದ್ದಾಪುರ: ತಾಲೂಕಿನ ನೇರ್ಲಮನೆಯ (ಗೋಳಿಮಕ್ಕಿ) ಸ.ಹಿ.ಪ್ರಾ. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಜಿ. ನಾಯ್ಕ ವಿಶೇಷವಾದ ಕಲಿಕಾ ವಿಧಾನಗಳೊಂದಿಗೆ ಪಾಠ ಮಾಡುತ್ತ ವಿದ್ಯಾರ್ಥಿಗಳ ಮನಮುಟ್ಟುತ್ತಾ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಪ್ರತಿನಿತ್ಯ ಒಂದು ಪಕ್ಷಿಯ ಆಕಾರ, ಬಣ್ಣ, ಅದರ ಗೂಡು, ಮೊಟ್ಟೆಗಳ ವಿವರದ ಜೊತೆಗೆ ಇಡೀ ಜೀವನ ಚಿತ್ರಣವನ್ನು ಆ ಪಕ್ಷಿಯ ಚಿತ್ರದೊಂದಿಗೆ ವಿವರಿಸಲಾಗುತ್ತದೆ. ನಿತ್ಯ ಒಂದು ಔಷಧಿ ಸಸ್ಯದ ಸಚಿತ್ರ ಪರಿಚಯ ಹಾಗೂ ಉಪಯೋಗದ ವಿವರಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪರಿಸರದೊಂದಿಗಿನ ನಿಕಟ ಸಂಪರ್ಕ ಹೊಂದಿ ಪ್ರಾಯೋಗಿಕವಾಗಿ ರೂಢಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

ಪಕ್ಷಿ ಮಹಲ್ ಎನ್ನುವ ಪರಿಕಲ್ಪನೆಗೆ ಚಾಲನೆ ನೀಡುವ ಮೂಲಕ ಪಕ್ಷಿಗಳು ಅಪೇಕ್ಷಿಸುವ ಹಣ್ಣು, ಕಾಯಿಗಳ ಗಿಡಗಳನ್ನು ಶಾಲಾ ಆವರಣದಲ್ಲಿ ಬೆಳೆಸಲಾಗಿದೆ. ಮುಂದಿನ ದಿನಗಳಲ್ಲಿ ಅವು ಫಲ ನೀಡಿ ಪಕ್ಷಿಗಳಿಗೆ ಆಹಾರ ಒದಗಿಸಲಿದೆ. ಪ್ರಾಣಿ, ಪಕ್ಷಿಗಳ ಕುಡಿಯುವ ನೀರಿಗಾಗಿ ನೀರಿನ ಟ್ಯಾಂಕ್ ನಿರ್ಮಿಸಿದ್ದು, ಪ್ರತಿನಿತ್ಯ ಮಕ್ಕಳು ಟ್ಯಾಂಕ್‌ಗೆ ನೀರು ತುಂಬುತ್ತಾರೆ. ರಜೆ ಸಂದರ್ಭದಲ್ಲಿ ಹತ್ತಿರದ ಮಕ್ಕಳು ಸರದಿ ಪ್ರಕಾರ ಈ ಕಾರ್ಯ ನಿರ್ವಹಿಸುತ್ತಾರೆ.

ಪ್ರತಿನಿತ್ಯ ಪಾಲಕರು ತಮ್ಮ ಮಕ್ಕಳ ಮನೆಯ ಅಭ್ಯಾಸಕ್ಕೆ ಅಂಕ ನೀಡುವ ವಿನೂತನ ವಿಧಾನವನ್ನು ಅಳವಡಿಸಿದ್ದು ಬಹುತೇಕ ಫಲ ನೀಡುತ್ತಿದೆ. ಇದರಿಂದ ಮಕ್ಕಳನ್ನು ಗಮನಿಸುವಲ್ಲಿ ಪಾಲಕರ ಜವಾಬ್ದಾರಿ ಹೆಚ್ಚುತ್ತಿದೆ.

ಪ್ರತಿನಿತ್ಯ ಬೆಳಗಿನ ಪ್ರಾರ್ಥನಾ ಅವಧಿಗಿಂತಲೂ ಮೊದಲು ವಿದ್ಯಾರ್ಥಿಗಳಿಗೆ ಓಂಕಾರ ಪ್ರಾಣಾಯಾಮ ರೂಢಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಮೌಲ್ಯವರ್ಧನೆಗಾಗಿ ರಾಮಾಯಣ ಮಹಾಕಾವ್ಯದ ವಾಚನ ಮಾಡಲಾಗುತ್ತಿದೆ.

ಒಂದು ಘಟಕಕ್ಕೆ ಸಂಬಂಧಿಸಿದಂತೆ ಚಿತ್ರಗಳು ಹಾಗೂ ಮುಖ್ಯ ಅಂಶಗಳನ್ನು ಒಳಗೊಂಡ ಚಾರ್ಟ್ ಸಹಾಯದಿಂದ ಘಟಕದ ಬಗ್ಗೆ ವಿದ್ಯಾರ್ಥಿಗಳೇ ವಿವರಣೆ ನೀಡುವುದರಿಂದ ಹಾಗೂ ಕಲಿಕೋಪಕರಣ ಬಳಕೆಯಿಂದ ಸಮಗ್ರ ಅರ್ಥೈಸಿಕೊಳ್ಳುವಿಕೆ ಸಾಧ್ಯವಾಗುತ್ತಿದೆ.

ವಿದ್ಯಾರ್ಥಿಗಳು ಆಸಕ್ತಿಯಿಂದ ಎಲ್ಲವನ್ನೂ ಕಲಿಯುತ್ತಿದ್ದು, ಕೆ.ಜಿ. ನಾಯ್ಕ ಅಚ್ಚುಮೆಚ್ಚಿನ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ