ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕದಲೂರು ಗ್ರಾಮದ ಭೈರವೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ನಾಗರತ್ನಮ್ಮ ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಖದೀಮರು ಅಪಹರಿಸಿ ಪರಾರಿಯಾಗಿದ್ದಾರೆ. ಮೂಲತಃ ನಾಗರತ್ನಮ್ಮ ಮಂಡ್ಯ ನಗರದ ನಿವಾಸಿಯಾಗಿದ್ದು, ಕದಲೂರಿನ ಭೈರವೇಶ್ವರ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಶಾಲೆ ಮುಗಿಸಿ ತಮ್ಮ ಸ್ಕೂಟರ್ ನಲ್ಲಿ ತೆರಳುತ್ತಿದ್ದ ನಾಗರತ್ನಮ್ಮ ಅವರನ್ನು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ಅಪರಿಚಿತ ವ್ಯಕ್ತಿಗಳು ಸ್ಕೂಟರ್ ಅಡ್ಡಗಟ್ಟಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿಯಲು ಮುಂದಾದಾಗ ನಾಗರತ್ನಮ್ಮ ಪ್ರತಿರೋಧ ವ್ಯಕ್ತಪಡಿಸಿ ಸರವನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ.ಸರಗಳ ಪೈಕಿ ಕೇವಲ 10 ಗ್ರಾಂ ಸರವನ್ನು ಮಾತ್ರ ದುಷ್ಕರ್ಮಿಗಳು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ನಾಗರತ್ನಮ್ಮ ನೀಡಿದ ದೂರಿನ ಅನ್ವಯ ಕೆಸ್ತೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ.