ಮನೆಗೊಂದು ಗ್ರಂಥಾಲಯ ತೆರೆದ ಶಿಕ್ಷಕ ಶರಣಪ್ಪ

KannadaprabhaNewsNetwork |  
Published : Sep 05, 2025, 01:00 AM IST
1ಕೆಪಿಎಲ್101 ಶರಣಪ್ಪ ತುಮರಿಕೊಪ್ಪ 1ಕೆಪಿಎಲ್102 ಮನೆಯಲ್ಲಿಯೇ ಗ್ರಂಥಾಲಯ ಪ್ರಾರಂಭಿಸಿರುವುದು. | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಸಾಕಷ್ಟು ಅವಕಾಶಗಳು ಇವೆ. ಎಲ್ಲವನ್ನು ಸರ್ಕಾರದಿಂದ ನಿರೀಕ್ಷೆ ಮಾಡದೆ ಸಮುದಾಯದ ಸಹಕಾರದಿಂದ ಸಾಕಷ್ಟು ಪ್ರಗತಿ ಮಾಡಬಹುದಾಗಿದೆ ಎಂದು ಮುಖ್ಯಶಿಕ್ಷಕ ಶರಣಪ್ಪ ತುಮರಿಕೊಪ್ಪ ಹೇಳಿದರು.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅಲ್ಲೇನಿದೆ ಸೌಲಭ್ಯ ಎಂದು ಕೊರಗುವವರೇ ಅಧಿಕ. ಆದರೆ, ಈ ಕೊರತೆ ನೀಗಿಸಿ ಖಾಸಗಿ ಶಾಲೆ ಮೀರಿಸುವಂತೆ ಸಮುದಾಯದ ಸಹಕಾರದೊಂದಿಗೆ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಿದ ಹಿರಿಮೆ ಶರಣಪ್ಪ ತುಮರಿಕೊಪ್ಪ ಅವರದು.

ಕುಷ್ಟಗಿ ತಾಲೂಕಿನ ಮದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಶಾಲೆಯಲ್ಲಿ ವಿಶೇಷ ಗ್ರಂಥಾಲಯವನ್ನು ಸಾರ್ವಜನಿಕರ ಸಹಕಾರದೊಂದಿಗೆ ಸ್ಥಾಪಿಸಿದ್ದಾರೆ. ವಿದ್ಯಾರ್ಥಿಗಳು ಮನೆಯಲ್ಲಿ ಮೊಬೈಲ್‌ನಿಂದ ದೂರವಿಡಬೇಕೆಂದು ವಿದ್ಯಾರ್ಥಿಯ ಪ್ರತಿ ಮನೆಯಲ್ಲಿಯೂ ಗ್ರಂಥಾಲಯ ಸ್ಥಾಪಿಸಬೇಕೆಂದು "ಮಗುವಿನ ಮನೆಯ ಗ್ರಂಥಾಲಯ " ಹೆಸರಿನೊಂದಿಗೆ ಅಭಿಯಾನ ಪ್ರಾರಂಭಿಸಿದ್ದಾರೆ. ಪಾಲಕರ ಮನವೊಲಿಸಿ, ಅವರ ಮನೆಯಿಂದ ಅಥವಾ ಮಕ್ಕಳಿಂದ ಟಿವಿ ಮತ್ತು ಮೊಬೈಲ್ ದೂರ ಮಾಡಿ, ಮಕ್ಕಳ ಕೈಗೆ ಪುಸ್ತಕ ಇರುವಂತೆ ಮಾಡುತ್ತಿದ್ದಾರೆ.

ಪಾಲಕರ ಸಹಕಾರದೊಂದಿಗೆ ಮಗುವಿನ ಮನೆಯಲ್ಲಿಯೇ ಗ್ರಂಥಾಲಯ ಸ್ಥಾಪಿಸುತ್ತಾರೆ. ಬಡವರು ಇದ್ದರೆ, ಅವರಿವರ ಸಹಾಯ ಪಡೆದು, ಗ್ರಂಥಾಲಯ ಸ್ಥಾಪಿಸುತ್ತಾರೆ. ಹೀಗೆ ಅನೇಕ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಿರುವ ಇವರು 200ಕ್ಕೂ ಹೆಚ್ಚು ಗ್ರಂಥಾಲಯ ಸ್ಥಾಪಿಸುವ ಗುರಿ ಹಾಕಿಕೊಂಡಿದ್ದಾರೆ.ಸ್ಮಾರ್ಟ್‌ಕ್ಲಾಸ್:

ಶರಣಪ್ಪ ತುಮರಿಕೊಪ್ಪ ಅವರು ಕುಷ್ಟಗಿ ತಾಲೂಕಿನ ಮೆಣದಾಳ ಮತ್ತು ಸಂಗನಾಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿದ್ದ ವೇಳೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್ ಪ್ರಾರಂಭಿಸುವ ಮೂಲಕ ದೊಡ್ಡ ಕ್ರಾಂತಿ ಮಾಡಿದ್ದಾರೆ. ಖಾಸಗಿ ಶಾಲೆ ಎಂದರೆ ದೂರುವವರೇ ಹೆಚ್ಚು. ಆದರೆ, ಇವರು ಸಮುದಾಯದ ಸಹಕಾರ ಪಡೆದು ಬರೋಬ್ಬರಿ 25 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿದರು. ಲಕ್ಷಾಂತರ ರುಪಾಯಿ ವೆಚ್ಚವಾದರೂ ಸಹ ಅದನ್ನು ಸರ್ಕಾರದಿಂದ ನಿರೀಕ್ಷೆ ಮಾಡದೆ ಸಾರ್ವಜನಿಕವಾಗಿಯೇ ಸಹಕಾರ ಪಡೆದು, ತಾವು ಸಹ ಒಂದಷ್ಟು ಭರಿಸಿ 12 ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್ ಮಾಡಿದರು. ಜಿಲ್ಲೆಯಲ್ಲಿ ಮೊಟ್ಟಮೊದಲು ಸ್ಮಾರ್ಟ್‌ಕ್ಲಾಸ್ ಮಾಡಿದ ಹಿರಿಮೆ ಇವರದು.

ಈಗಲೂ ಸಹ ಇವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಒಂದಿಲ್ಲೊಂದು ಕಾರ್ಯ ಮಾಡುತ್ತಲೇ ಇದ್ದಾರೆ. ತಮ್ಮ ವೇತನದ ಒಂದಷ್ಟು ಭಾಗವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಡುಪಾಗಿಡುತ್ತಾರೆ. ಆದರೆ, ಅದನ್ನು ಘೋಷಣೆ ಮಾಡಿಕೊಳ್ಳದೆ, ಸಾರ್ವಜನಕರೊಂದಿಗೆ ದೊರೆಯುವ ಸಹಕಾರದಲ್ಲಿಯೇ ತಮ್ಮ ಪಾಲು ಸೇರಿಸಿ ತಮ್ಮ ಕೊಡುಗೆ ಗೊತ್ತಾಗದಂತಿರುತ್ತಾರೆ.ಶರಣಪ್ಪ ತುಮರಿಕೊಪ್ಪ ಅವರು ಪ್ರಾರಂಭಿಸಿದ ಸ್ಮಾರ್ಟ್‌ಕ್ಲಾಸ್‌ನ್ನು ನೋಡಿ ಆಗಿನ ಶಾಸಕ ಅಮರೇಗೌಡ ಭಯ್ಯಾಪುರ ಅವರೇ ಮನಸೋತಿದ್ದಲ್ಲದೇ ಸರ್ಕಾರದ ಅನುದಾನದಲ್ಲಿ ಕುಷ್ಟಗಿ ತಾಲೂಕಿನ ಹಲವು ಶಾಲೆಗಲ್ಲಿ ಸ್ಮಾರ್ಟ್‌ಕ್ಲಾಸ್ ಪ್ರಾರಂಭಿಸಿದರು.ಸಂಚಿತ ನಿಧಿ:

ಈಗ ತಾವಿರುವ ಶಾಲೆ ಸೇರಿದಂತೆ ತಾವು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾಗ ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಸಂಚಿತ ನಿಧಿ ಸ್ಥಾಪಿಸಿದ್ದಾರೆ. ಶಾಲೆಯಲ್ಲಿ ಇರುವ ಶಿಕ್ಷಕರಿಂದ ಹಿಡಿದು ಹಳೆಯ ವಿದ್ಯಾರ್ಥಿಗಳ ಸಹಕಾರ, ಪಾಲಕರ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿಗಾಗಿ ಸಂಚಿತ ನಿಧಿ ಸ್ಥಾಪಿಸುವ ಮೂಲಕ ಸರ್ಕಾರ ಶಾಲೆಗಳಲ್ಲಿ ಹಣಕಾಸಿನ ಅಭಾವ ನೀಗಿಸುವ ಕಾರ್ಯ ಮಾಡುತ್ತಿದ್ದಾರೆ.ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಸಾಕಷ್ಟು ಅವಕಾಶಗಳು ಇವೆ. ಎಲ್ಲವನ್ನು ಸರ್ಕಾರದಿಂದ ನಿರೀಕ್ಷೆ ಮಾಡದೆ ಸಮುದಾಯದ ಸಹಕಾರದಿಂದ ಸಾಕಷ್ಟು ಪ್ರಗತಿ ಮಾಡಬಹುದಾಗಿದೆ ಎಂದು ಮುಖ್ಯಶಿಕ್ಷಕ ಶರಣಪ್ಪ ತುಮರಿಕೊಪ್ಪ ಹೇಳಿದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ