ಕನ್ನಡಪ್ರಭ ವಾರ್ತೆ ಭಟ್ಕಳ
ಮರಳಿ ಗೂಡಿಗೆ–ಇದು ಗುರು–ಶಿಷ್ಯರ ಸಮಾಗಮ ಎಂಬ ಶೀರ್ಷಿಕೆಯಲ್ಲಿ ನಡೆದ ಈ ಕಾರ್ಯಕ್ರಮವು, ಶಾಲಾ ದಿನಗಳ ನೆನಪುಗಳನ್ನು ಮತ್ತೆ ಜೀವಂತಗೊಳಿಸಿತು.
2005ರಿಂದ ವಿವಿಧ ಅವಧಿಯಲ್ಲಿ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ವರ್ಗಾವಣೆಯಿಂದ ಬೇರೆಡೆ ತೆರಳಿದ ಶಿಕ್ಷಕರೂ ಭಾಗವಹಿಸಿ, ಸಹೋದ್ಯೋಗಿಗಳೊಂದಿಗೆ ಕಳೆದ ಕ್ಷಣಗಳು ಹಾಗೂ ವಿದ್ಯಾರ್ಥಿಗಳೊಂದಿಗಿನ ಆತ್ಮೀಯ ಗುರು–ಶಿಷ್ಯ ಬಂಧವನ್ನು ನೆನೆದು ಭಾವುಕರಾದರು. ಹಳೆಯ ವಿದ್ಯಾರ್ಥಿಗಳೂ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡ ಶಾಲಾ ದಿನಗಳ ಅನುಭವಗಳನ್ನು ಸ್ಮರಿಸಿ ಸಂಭ್ರಮಿಸಿದರು. ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಎಲ್ಲ ಶಿಕ್ಷಕರು ಸೇರಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ವಿ. ನಾಯಕ, ಶಂಷಾದ್ ಸೈಯ್ಯದ್ ಅಸದುಲ್ಲಾ, ಸಂತೋಷ ಎಸ್. ಶ್ರೇಷ್ಠಿ, ಎಂ.ಆರ್. ನಾಯಕ, ಜಿ.ಆರ್. ಪಟಗಾರ, ರಾಜೇಶ್ ಎಚ್. ನಾಯಕ, ವಿದ್ಯಾ ನಾಯಕ, ಎಸ್.ಜೆ. ಖಾನ್, ವಿಮಲಾ ಪಟಗಾರ, ಜೋಸಫ್ ಬಿ. ಗೊನ್ಸಾಲ್ವಿಸ್, ಸತೀಶ್ ಜಿ. ನಾಯ್ಕ, ಗೀತಾ ಮೇಸ್ತ, ಆಶಾ ಪೈ ಹಾಗೂ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕರ ಪೈಕಿ ಮೃತರಾದ ಎಂ.ಬಿ. ನಾಯ್ಕ ಹಾಗೂ ಗಿರಿಜಾ ಕಾಶಿ ಹೆಗಡೆ ಮತ್ತು ವಿದ್ಯಾರ್ಥಿಗಳ ಪೈಕಿ ಅಸ್ತಂಗತರಾದ ರಾಜೇಶ್ ಮೊಗೇರ್ ಹಾಗೂ ಜನಾರ್ದನ ದೇವಾಡಿಗ ಅವರ ಸ್ಮರಣಾರ್ಥ 2 ನಿಮಿಷಗಳ ಮೌನಾಚರಣೆ ಹಾಗೂ ಪುಷ್ಪಾರ್ಪಣೆ ನೆರವೇರಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿದರು. ಹಳೆಯ ವಿದ್ಯಾರ್ಥಿನಿ ಸೀಮಾ ನಾಯ್ಕ ನಿರೂಪಿಸಿದರು. ಗೀತಾ ಪೂಜಾರಿ ಸ್ವಾಗತಿಸಿದರು.