ನದಿಯಲ್ಲಿಯೇ ಪ್ಲಾಸ್ಟಿಕ್ ಬಾಟಲ್, ಕವರ್ ಬಿಸಾಡುತ್ತಿರುವ ಪ್ರವಾಸಿಗರು । ಕಡಿವಾಣ ಅಗತ್ಯ
ಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಶರಾವತಿ ಬೋಟಿಂಗ್ ಪ್ರಾರಂಭವಾದ ಮೇಲಂತೂ ತಾಲೂಕು ಹೆಚ್ಚಾಗಿ ಜನಜಂಗುಳಿಯಿಂದ ತುಂಬಿರುತ್ತದೆ. ಶರಾವತಿ ಬೋಟಿಂಗ್‌ಗೆ ಬರುವ ಪ್ರವಾಸಿಗರು ನದಿಯಲ್ಲಿ ಪ್ಲಾಸ್ಟಿಕ್ ಎಸೆಯುತ್ತಿದ್ದು, ನದಿ ಕಲುಷಿತಗೊಳ್ಳುತ್ತಿರುವ ಆತಂಕ ಕಾಡುತ್ತಿದೆ.ಶರಾವತಿ ನದಿ ಬೋಟಿಂಗ್ ಸಂದರ್ಭದಲ್ಲಿ ಪ್ರವಾಸಿಗರು ಬೋಟ್‌ನಲ್ಲಿ ತೆರಳುವಾಗ ಎಂಜಾಯ್ ಮಾಡುವ ಗುಂಗಿನಲ್ಲಿ ಇರುತ್ತಾರೆ. ನದಿಯ ದಂಡೆಯ ಅಕ್ಕಪಕ್ಕದಲ್ಲಿ ಸ್ಥಳೀಯರು ಹಾಕಿಕೊಂಡಿರುವ ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ತಂಪುಪಾನೀಯ, ನೀರಿನ ಬಾಟಲ್ ಗಳು, ಸ್ನ್ಯಾಕ್ಸ್, ಬಿಸ್ಕತ್ ಇತರೆ ಫಾಸ್ಟ್ ಫುಡ್ ಸಿಗುತ್ತವೆ. ಪ್ರವಾಸಿಗರು ಅಲ್ಲಿ ಕೊಂಡು ನದಿಯಲ್ಲಿ ವಿಹಾರಕ್ಕೆ ತೆರಳುತ್ತಾರೆ. ತಿಂದು, ಕುಡಿದು ನದಿಯಲ್ಲಿಯೇ ಪ್ಲಾಸ್ಟಿಕ್ ಬಾಟಲ್, ಕವರ್ ಗಳನ್ನು ಬಿಸಾಡುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆ ಕಟ್ಟುನಿಟ್ಟಿನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ತಾಲೂಕಿನಲ್ಲಿ ಪ್ರವಾಸೋದ್ಯಮ ಬೆಳೆಯಬೇಕು. ಜನರಿಗೆ ಉದ್ಯೋಗ ದೊರೆಯಬೇಕು ಎಂಬುದು ಎಷ್ಟು ಅಗತ್ಯವೋ ಹಾಗೆ ನದಿ ಸೌಂದರ್ಯವನ್ನು ಹಾಳು ಮಾಡಬಾರದು ಎಂಬುದನ್ನು ಅರಿಯಬೇಕಾಗಿದೆ.ಹೊನ್ನಾವರದಲ್ಲಿ ಸರಿಸುಮಾರು 150ಕ್ಕೂ ಹೆಚ್ಚಿನ ಬೋಟ್‌ಗಳು ಶರಾವತಿ ನದಿಯಲ್ಲಿ ಬೋಟಿಂಗ್ ನಡೆಸುತ್ತವೆ. ಆದರೆ ಬಂದರು ಇಲಾಖೆಯಿಂದ ಪರವಾನಿಗೆ ಪಡೆದಿರುವುದು ಕೇವಲ 54 ಬೋಟ್ ಎನ್ನಲಾಗಿದೆ. ಉಳಿದ ಬೋಟ್ ಗಳಿಗೆ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತವಾಗಲಿ ಪರವಾನಿಗೆ ನೀಡಿಲ್ಲ. ಅಲ್ಲದೆ ನದಿಯಲ್ಲಿ ಪ್ಲಾಸ್ಟಿಕ್ ಹಾಕುತ್ತಿರುವುದರಿಂದ ಇದಕ್ಕೆ ಸಂಬಂಧಿಸಿ ಕಟ್ಟುನಿಟ್ಟಿನ ಆದೇಶವನ್ನು ಸಂಬಂಧಿಸಿದ ಇಲಾಖೆ ಹೊರಡಿಸಬೇಕಿದೆ.
ಅಂಗಡಿಕಾರರಿಗೆ ನೀಡಬೇಕಿದೆ ಸೂಚನೆ:ಬೋಟಿಂಗ್ ನಡೆಯುವ ನದಿಯ ದಡದಲ್ಲಿ ಅಂಗಡಿಯನ್ನು ಇಟ್ಟುಕೊಂಡಿರುವವರಿಗೆ ಇಲಾಖೆ ಸೂಚನೆಯನ್ನು ನೀಡಿ, ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಅಂಗಡಿಯ ಹತ್ತಿರ ಇಟ್ಟಿರುವ ಬುಟ್ಟಿಗಳಲ್ಲಿ ಕಸ ಹಾಕಲು ಪ್ರವಾಸಿಗರಲ್ಲಿ ತಿಳಿಹೇಳಬೇಕು. ಅಂದಾಗ ಮಾತ್ರ ಬದಲಾವಣೆ ಸಾಧ್ಯ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.ಶರಾವತಿ ನದಿ ಹಲವಾರು ಕುಟುಂಬಗಳಿಗೆ ಜೀವನಾಧಾರವಾಗಿದ್ದು, ಪ್ರವಾಸೋದ್ಯಮದಂತಹ ಆರ್ಥಿಕ ಬೆಂಗಾವಲು ಒದಗಿಸಿದೆ. ಪ್ರವಾಸಿಗರ ಜೊತೆಗೆ ಸ್ಥಳೀಯರು ಸಹ ತ್ಯಾಜ್ಯವನ್ನು ನೀರಿಗೆ ಬೇಕಾಬಿಟ್ಟಿ ಎಸೆಯುತ್ತಿರುವುದು ವಿಷಾದನೀಯ. ಈ ಕುರಿತು ಪ್ರವಾಸೋದ್ಯಮ ಇಲಾಖೆ ಹಾಗೂ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಜನರ ಹಾಗೂ ಪರಿಸರದ ಆರೋಗ್ಯ ಕಾಪಾಡಬೇಕಾಗಿದೆ ಎನ್ನುತ್ತಾರೆ ಪರಿಸರ ತಜ್ಞ ಎನ್.ಎಂ. ಗುರುಪ್ರಸಾದ್.
ಇಲಾಖೆಯಿಂದ ಬೋಟಿಂಗ್ ನಡೆಸಲು ಪರ್ಮಿಷನ್ ನೀಡಿಲ್ಲ. ನಾವು ಪರ್ಮಿಷನ್ ನೀಡುವ ಸಂದರ್ಭ ಎಲ್ಲಾ ಕಂಡಿಷನ್ ಹಾಕಿ ಪರವಾನಗಿ ನೀಡಲಿದ್ದೇವೆ. ಈಗಾಗಲೇ ಕೆಲವು ಸ್ಥಳದಲ್ಲಿ ನಾವು ಹೋದಾಗಲು ಇಂತಹದ್ದನ್ನು ಗಮನಿಸಿ ಎಚ್ಚರಿಸಲಾಗಿದೆ. ನಾವು ಅಧಿಕೃತವಾಗಿ ಯಾವುದೇ ಪರವಾನಗಿ ನೀಡದೆ ಇದ್ದಿದ್ದರಿಂದ ಯಾವುದೇ ಸೂಚನೆಯನ್ನು ಸದ್ಯಕ್ಕೆ ನೀಡುವಂತಿಲ್ಲ. ಆದರೆ ಫೆ. 1ರಿಂದ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಇದಾದ ಬಳಿಕ ನಾವು ಈ ಬಗ್ಗೆ ಕಠಿಣ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಾರವಾರದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮಂಗಳಗೌರಿ ತಿಳಿಸಿದ್ದಾರೆ.