ಚವಲಿಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆಗೆ ಚಿತ್ರದುರ್ಗ ಡಯಟ್ ಉಪನ್ಯಾಸಕ ಎಸ್.ಬಸವರಾಜು, ಶಿಕ್ಷಣ ಸಂಯೋಜಕ ಕೆ.ಆರ್.ಲೋಕೇಶ್ ಶನಿವಾರ ಭೇಟಿ ನೀಡಿ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿರುವ ವಿದ್ಯಾರ್ಥಿನಿ ತನುಜಾ ಇವರನ್ನು ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಶಿಕ್ಷಕರು ಕ್ರಿಯಾಶೀಲತೆಯಿಂದ ಕೆಲಸ ನಿರ್ವಹಿಸಿದಾಗ ವಿದ್ಯಾರ್ಥಿಗಳ ಸಾಧನೆಗೆ ಸ್ಫೂರ್ತಿಯಾಗುತ್ತದೆ ಎಂದು ಚಿತ್ರದುರ್ಗ ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು.
ಭರಮಸಾಗರ ಸಮೀಪದ ಚವಲಿಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಭೇಟಿ ನೀಡಿ ವಾರ್ತಾ ಇಲಾಖೆ ಏರ್ಪಡಿಸಿದ್ದ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿರುವ ವಿದ್ಯಾರ್ಥಿನಿ ತನುಜಾ ಇವರನ್ನು ಸನ್ಮಾನಿಸಿ ಮಾತನಾಡಿದರು.
ಶಿಕ್ಷಕರು ತರಗತಿ ಬೋಧನೆಯ ಜತೆಗೆ ವಿದ್ಯಾರ್ಥಿಗಳನ್ನು ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ತನುಜಾ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಸಕ್ತ ವರ್ಷದಲ್ಲಿ ರಾಜ್ಯಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು,
ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ 2 ಬಾರಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಓದಿನ ಜತೆಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ 50,0000ಕ್ಕೂ ಹೆಚ್ಚು ನಗದು ಬಹುಮಾನ ಪಡೆದಿದ್ದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಏಕಾಗ್ರತೆ, ನಿರಂತರ ಅಭ್ಯಾಸ ಮಾಡುವುದರಿಂದ ಉತ್ತಮ ಸಾಧನೆ ಮಾಡಲು ಸಾದ್ಯವಾಗುತ್ತದೆ. ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಹೆಚ್ಚು ವಿಷಯ ಜ್ಞಾನ ದೊರೆಯುತ್ತದೆ. ಸಾಮಾಜಿಕ ಜಾಲತಾಣಗಳನ್ನು ಓದಿಗೆ ಪೂರಕವಾಗಿ ಬಳಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಉನ್ನತ ಹುದ್ದೆಯನ್ನು ಪಡೆಯಲು ಅನುಕೂಲ ಎಂದು ಸಲಹೆ ನೀಡಿದರು.
ಶಿಕ್ಷಣ ಸಂಯೋಜಕ ಕೆ.ಆರ್.ಲೋಕೇಶ್ ಮಾತನಾಡಿ, ಶ್ರದ್ಧೆ ಮತ್ತು ಅಧ್ಯಯನದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕ್ಲಿಷ್ಟವಾಗುವ ವಿಷಯಗಳನ್ನು ಗುರುತಿಸಿಕೊಂಡು ಶಿಕ್ಷಕರಿಂದ ಮಾರ್ಗದರ್ಶನ ಪಡೆಯಬೇಕು. ಪ್ರತಿ ವಿಷಯದಲ್ಲಿ ಮುಖ್ಯಾಂಶಗಳನ್ನು ಟಿಪ್ಪಣಿ ಮಾಡಿಕೊಂಡು ಅಧ್ಯಯನ ಮಾಡಬೇಕು. ವಿಷಯದ ಪರಿಕಲ್ಪನೆಗಳನ್ನು ಅರ್ಥೈಸಿಕೊಂಡು ಪೂರ್ವ ಸಿದ್ಧತೆಯಿಂದ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಆರ್.ನಾಗೇಂದ್ರಪ್ಪ, ಬಿ.ಅರುಣ, ಟಿ.ಎಂ.ಮಲ್ಲಿಕಾರ್ಜುನಸ್ವಾಮಿ, ಸಿ.ಯಮುನ, ಸಿ.ಜಿ.ಹಾಲೇಶ್, ವೈ.ಜಗದೀಶ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.