ಶಾಲೆಯ ಬೆಳವಣಿಗೆಗೆ ಶಿಕ್ಷಕರೇ ಬುನಾದಿ-ವಿ.ಎನ್‌. ಕೊಳ್ಳಿ

KannadaprabhaNewsNetwork | Published : Feb 27, 2024 1:31 AM

ಸಾರಾಂಶ

ಶಾಲೆಯ ಬೆಳವಣಿಗೆಗೆ ಶಿಕ್ಷಕರೇ ಬುನಾದಿ. ಶೈಕ್ಷಣಿಕವಾಗಿ ಗುರುಗಳು, ಪಾಲಕರ ಹಾಗೂ ವಿದ್ಯಾರ್ಥಿಗಳ ಸಂಬಂಧ ಉತ್ತಮವಾಗಿದ್ದರೆ, ಆ ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಆಗುತ್ತದೆ.

ನರಗುಂದ: ಶಾಲೆಯ ಬೆಳವಣಿಗೆಗೆ ಶಿಕ್ಷಕರೇ ಬುನಾದಿ. ಶೈಕ್ಷಣಿಕವಾಗಿ ಗುರುಗಳು, ಪಾಲಕರ ಹಾಗೂ ವಿದ್ಯಾರ್ಥಿಗಳ ಸಂಬಂಧ ಉತ್ತಮವಾಗಿದ್ದರೆ, ಆ ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಆಗುತ್ತದೆ. ನಾವು ಮಾಡುವ ಸೇವಾಕಾರ್ಯದಿಂದ ಪ್ರಶಸ್ತಿಗಳು ಕೂಡಾ ಲಭಿಸುತ್ತವೆ ಎಂದು ಭೂದಾನಿ ಹಾಗೂ ಡಾ. ಎಚ್. ನರಸಿಂಹಯ್ಯ ರಾಜ್ಯಪ್ರಶಸ್ತಿ ವಿಜೇತ ವಿ. ಎನ್. ಕೊಳ್ಳಿ ಹೇಳಿದರು. ಅವರು ತಾಲೂಕಿನ ಕಣಕಿಕೊಪ್ಪ ಗ್ರಾಮದ ಎನ್ .ಸಿ .ಕೊಳ್ಳಿಯವರ ಸರಕಾರಿ ಪ್ರೌಢಶಾಲೆಯ ಸರಸ್ವತಿ ಪೂಜೆ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ವರ್ಷ ಹತ್ತನೇ ತರಗತಿಯಲ್ಲಿ 600ಕ್ಕೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 10 ಸಾವಿರ ನಗದು ಪುರಸ್ಕಾರ ಹಾಗೂ ಪ್ರಶಸ್ತಿ, ಕ್ರೀಡಾಕೂಟದಲ್ಲಿ, ವಿಜ್ಞಾನ ವಸ್ತುಪ್ರದರ್ಶನದಲ್ಲಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಣೆ ನಂತರ ಮಾತನಾಡಿದರು.

ನಮ್ಮ ಬೆಳವಣಿಗೆಗೆ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿಟ್ಟು ಕೊಳ್ಳಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವುಳಿದು ಸಮೀಪಿಸುತ್ತಿರುವ ವಾರ್ಷಿಕ ಪರೀಕ್ಷೆಗಳ ಕಡೆ ಗಮನಕೊಟ್ಟು ಚೆನ್ನಾಗಿ ಓದಬೇಕು. ಇದರಿಂದ ನಿಮ್ಮ ಭವಿಷ್ಯ ಉಜ್ಚಲಗೊಳ್ಳುತ್ತದೆ ಎಂದರು.

ನಗದು ಪುರಸ್ಕಾರ ಕೊಡಮಾಡುವ ನಿವೃತ್ತ ಶಿಕ್ಷಕ ಎಚ್.ಎಸ್. ಬೆಳಕೊಪ್ಪದ ಮಾತನಾಡಿ, ಮಕ್ಕಳಿಂದ ತುಂಬಿದ ಕಿಸೆಯಿಂದ ಮಕ್ಕಳಿಗೆ ಕೊಡುವುದರಲ್ಲಿ ಸುಖವಿದೆ. ಶಾಲೆಯ ಉನ್ನತಿಗಾಗಿ ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ಬದ್ಧ. ಪರೀಕ್ಷೆ ಸಮೀಪಿಸುತ್ತಿದೆ ಸಮಯವನ್ನು ಹಾಳು ಮಾಡದೇ ಚೆನ್ನಾಗಿ ಅಭ್ಯಾಸ ಮಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.

ವೇದಿಕೆಯಲ್ಲಿ ಇತ್ತೀಚೆಗೆ ಲಿಂಗಸೂರದಲ್ಲಿ ಜರುಗಿದ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಮಟ್ಟದ ಡಾ.ಎಚ್ ನರಸಿಂಹಯ್ಯ ಪ್ರಶಸ್ತಿ ಪಡೆದ ವ್ಹಿ .ಎನ್ .ಕೊಳ್ಳಿ ಹಾಗೂ ಪತ್ನಿ ಶಿವಲೀಲಾ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಎಲ್. ಮರಿಗೌಡ್ರ ಹಾಗೂ ತಾಲೂಕು ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶಗೌಡ ರಾಯನಗೌಡ್ರ, ಈರಣ್ಣ ನಂದಿ, ಗೂಳಪ್ಪ ಕೊಳ್ಳಿಯವರ, ಮನೋಹರ ಪೇಠೆ, ಶಿವಯ್ಯ ಭಿಕ್ಷಾವತಿಮಠ, ಮಮತಾಜಿ ಕಲಾಯಿಗಾರ, ಐ. ಎಮ್. ಹುರಕಡ್ಲಿ, ಎಂ.ವಿ. ತಹಸೀಲ್ದಾರ, ನಿಂಗಪ್ಪ ತಿರಕನ್ನವರ, ಗೋಪಾಲರಡ್ಡಿ ಮೂಗನೂರ, ಕೃಷ್ಣರೆಡ್ಡಿ ಮೂಗನೂರ, ತುಕಾರಾಮ ಚತ್ರಬಾವಿ, ಪ್ರಕಾಶ ಮೊರಬದ, ಬಸಪ್ಪ ಕೌಜಗೇರಿ, ಆರ್ .ಆರ್. ರೋಗಣ್ಣವರ, ಪ್ರಭಾವತಿ ಅಂಗಡಿ, ಗೀತಾ ಬೇಡಗೌಡ್ರ, ಮುಖ್ಯೋಪಾಧ್ಯಾಯ ಕೆ.ಬಿ .ಕುರಹಟ್ಟಿ, ಸೇರಿದಂತೆ ಮುಂತಾದವರು ಇದ್ದರು.

Share this article