ಶಿಕ್ಷಕರೇ ಸಮಾಜದ ದೊಡ್ಡ ಆಸ್ತಿ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

KannadaprabhaNewsNetwork |  
Published : Sep 06, 2026, 02:30 AM IST
ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕೊಪ್ಪಳ ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸಾಮ)ದ 21ನೇ ವರ್ಷದ ಸಂಭ್ರಮಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ | Kannada Prabha

ಸಾರಾಂಶ

ಮಾನವನ ನಿಜವಾದ ಆಸ್ತಿ ಎಂದರೆ ಹಣ, ಹೊನ್ನು, ಮಣ್ಣು ಅಲ್ಲ; ಅರಿವು. ಅರಿವನ್ನು ಪಡೆದುಕೊಂಡ ವ್ಯಕ್ತಿ ಸಮಾಜದಲ್ಲಿ ತಲೆ ಎತ್ತಿ ಬದುಕಲು ಸಾಧ್ಯ. ಗುರುಗಳು ಅಜ್ಞಾನವನ್ನು ಅಳಿಸಿ ಸುಜ್ಞಾನದ ಕಡೆಗೆ ಕರೆದೊಯ್ಯುವವರು.

ಕೊಪ್ಪಳ:

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಶಾಲೆಯಲ್ಲಿ ಶಿಕ್ಷಕರು, ಸಮಾಜದಲ್ಲಿ ಮಠಾಧಿಪತಿಗಳು ಮಕ್ಕಳಿಗೆ ಬುದ್ಧಿ ಹೇಳುವ ಗುರುಗಳಾಗಿದ್ದು, ಅವರ ಮಾರ್ಗದರ್ಶನದಿಂದ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸಲು ಸಾಧ್ಯ ಎಂದು ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕೊಪ್ಪಳ ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸಾಮ)ದ 21ನೇ ವರ್ಷದ ಸಂಭ್ರಮಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವನ ನಿಜವಾದ ಆಸ್ತಿ ಎಂದರೆ ಹಣ, ಹೊನ್ನು, ಮಣ್ಣು ಅಲ್ಲ; ಅರಿವು. ಅರಿವನ್ನು ಪಡೆದುಕೊಂಡ ವ್ಯಕ್ತಿ ಸಮಾಜದಲ್ಲಿ ತಲೆ ಎತ್ತಿ ಬದುಕಲು ಸಾಧ್ಯ. ಗುರುಗಳು ಅಜ್ಞಾನವನ್ನು ಅಳಿಸಿ ಸುಜ್ಞಾನದ ಕಡೆಗೆ ಕರೆದೊಯ್ಯುವವರು. ಇಂದಿನ ಮಕ್ಕಳು ಬೇರು ಇಲ್ಲದ ಮರದಂತಾಗುತ್ತಿದ್ದಾರೆ. ಮರ ಬೆಳೆಯಲು ಬೇರು ಅಗತ್ಯವಿರುವಂತೆ, ಮಕ್ಕಳು ಉತ್ತಮವಾಗಿ ಬೆಳೆಯಲು ಅರಿವು ಮತ್ತು ಮಾರ್ಗದರ್ಶನ ಅಗತ್ಯ ಎಂದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಯೋಗಿನಿ ಅಕ್ಕ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕರು ಗುರಿಯೊಂದನ್ನು ಇಟ್ಟುಕೊಂಡು ಮಕ್ಕಳಿಗೆ ಬೋಧಿಸಬೇಕು. ಮೊದಲು ಶಿಕ್ಷಕರು ಆದರ್ಶ ಶಿಕ್ಷಕರಾಗಬೇಕು. ತಮ್ಮ ವೃತ್ತಿಯನ್ನು ಪ್ರೀತಿಯಿಂದ ನಿರ್ವಹಿಸಿದಾಗ ಮಾತ್ರ ಉತ್ತಮ ಶಿಕ್ಷಕರಾಗಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ. ಶಿಕ್ಷಕರೇ ಸಮಾಜದ ದೊಡ್ಡ ಆಸ್ತಿ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ವಿಭಾಗೀಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸಂಘದ ಅಧ್ಯಕ್ಷ ಸುನೀಲಕುಮಾರ ಆರ್. ಹೂಡಗಿ ಮಾತನಾಡಿ, ಶಿಕ್ಷಕರಿಗೆ ಹೊಗಳಿಕೆ ಹಾಗೂ ಟೀಕೆ ಎರಡೂ ಸಹಜ. ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಮನೋವಿಜ್ಞಾನವನ್ನು ಪಾಲಕರು ಅರ್ಥಮಾಡಿಕೊಂಡು, ಮನೆಯಲ್ಲಿ ಕೂಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಶಾಹೀದುಸೇನ್ ತಹಸೀಲ್ದಾರ್ ವಹಿಸಿದ್ದರು. ಅನುದಾನ ರಹಿತ ಶಾಲಾ ಆಡಳಿತ ಮಂಡಳಿಯ ಜಿಲ್ಲಾ ಗೌರವಾಧ್ಯಕ್ಷ ರಾಘವೇಂದ್ರ ಪಾನಘಂಟಿ ಅವರು ಸಾಧಕರು ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಅಲ್ಲದೆ 40 ಶಿಕ್ಷಕ-ಶಿಕ್ಷಕಿಯರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಸೇವೆ ಆಂದೋಲನ: ಅರ್ಜಿ ಸಲ್ಲಿಸಲು ಶಿರಹಟ್ಟಿಯಲ್ಲಿ ನೂಕುನುಗ್ಗಲು
ಮಕ್ಕಳ, ದೇಶದ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ: ಡಾ. ಚಂದ್ರು ಲಮಾಣಿ