ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ
ಇಂದು ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಮಕ್ಕಳು ಚಿಕ್ಕವಯಸ್ಸಿನಿಂದಲೇ ದಾರಿ ತಪ್ಪುತ್ತಿರುವುದನ್ನು ಎಲ್ಲೆಡೆ ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದ್ದು, ಪಠ್ಯದ ಜೊತೆ ಸಂಸ್ಕಾರ, ವಾಸ್ತವ ಸಮಾಜದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಇನ್ನೊಬ್ಬರಿಗೆ ನೆರವಾಗುವ ಗುಣಗಳನ್ನು ಬೆಳೆಸುವ ಅಗತ್ಯತೆ ಇದೆ ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಹೇಳಿದರು.
ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಪರಿಪೂರ್ಣ ಹಾಗೂ ಉತ್ತಮ ನಾಗರಿಕರನ್ನು ರೂಪಿಸುವಂಥ ಶಕ್ತಿ ಶಿಕ್ಷಕರಿಗಿದೆ. ಪ್ರತಿ ವಿದ್ಯಾರ್ಥಿಗಳಿಗೂ ಗುಣಮಟ್ಟದ ಕಲಿಕೆಗೆ ಒತ್ತು ನೀಡುವ ಮೂಲಕ ನಮ್ಮ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿರೆಂಬ ಸದಾಶಯ ನನ್ನದು ಎಂದರು.ತಾಲೂಕು ಕೇಂದ್ರದಲ್ಲಿ ಗುರು ಭವನ ನಿರ್ಮಾಣಕ್ಕೆ ತಾಂತ್ರಿಕ ಅಡ್ಡಿಯಾಗಿದೆ. ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದರ ಜತೆಗೆ ಶಿಕ್ಷಕರ ಬೇಡಿಕೆಗ ಈಡೇರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿವನಾಯಕ ದೊರೆ, ಶಿಕ್ಷಕರ ಸಂಘಟನೆಯ ಗೀತಾ ವಾಲ್ಮೀಕಿ, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಮಂಜುನಾಥ, ಪದ್ಮನಾಭ ಕರಣಂ, ಕಾರ್ಮಿಕರ ಸಂಘಟನೆ ಮುಖಂಡ ಗುನ್ನಳ್ಳಿ ರಾಘವೇಂದ್ರ, ಉಪನ್ಯಾಸಕ ಕೊಟ್ರಪ್ಪನವರ ನಾಗರಾಜ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಹಮ್ಮದ್ ಜಿಲಾನ್, ಕೆಂಚಮಲ್ಲನಹಳ್ಳಿ ಡಾ.ಎ.ಕರಿಬಸಪ್ಪ, ಎಚ್.ಹನುಮಂತಪ್ಪ ಸೇರಿ ಇತರರಿದ್ದರು. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ನಾನಾ ಶಾಲೆಯ ಶಿಕ್ಷಕರನ್ನು ಶಾಸಕರು ಸನ್ಮಾನಿಸಿದರು. ಅದ್ಧೂರಿಯ ಮೆರವಣಿಗೆ