ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆದಾರರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಅತಿ ಶೀಘ್ರವಾಗಿ ಗಣತಿ ಕಾರ್ಯ ಪೂರ್ಣಗೊಳಿಸಿರುವ ತಾಲೂಕಿನ ನಲ್ಕುಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಂ.ಎನ್.ಹಾಲೇಶ್ ಮತ್ತು ಮುದಿಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರವಿಕುಮಾರ್ ಅವರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.ಈ ವೇಳೆ ತಹಸೀಲ್ದಾರ್ ಜಿ.ಆದರ್ಶ ಮಾತನಾಡಿ, ತಾಲೂಕಿನ ಇಬ್ಬರು ಶಿಕ್ಷಕರ ಕಾರ್ಯಕ್ಷಮತೆ ಉಳಿದೆಲ್ಲಾ ಶಿಕ್ಷಕರಿಗೆ ಪ್ರೇರಣೆಯಾಗಿ ಆದರ್ಶಪ್ರಾಯರಾಗಿದ್ದಾರೆ. ಇದೇ ರೀತಿ ಎಲ್ಲಾ ಗಣತಿದಾರರು ತಮ್ಮ ಜವಾಬ್ದಾರಿ ಅರಿತು ತ್ವರಿತಗತಿಯಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ, ಶಿಕ್ಷಕರಾದ ಹಾಲೇಶ್ ಮತ್ತು ರವಿಕುಮಾರ್ ಅವರ ಕೆಲಸದಿಂದಾಗಿ ಶಿಕ್ಷಣ ಇಲಾಖೆ ಗೌರವ ಹೆಚ್ಚಿದೆ. ಈ ಇಬ್ಬರು ಶಿಕ್ಷಕರು ಉಳಿದ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ನಿಮ್ಮ ಕಾರ್ಯಕ್ಷಮತೆಗೆ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ ಎಂದರು.ಈ ವೇಳೆ ಕ್ಷೇತ್ರ ಸಮನ್ವಯ ಅಧಿಕಾರಿ ಕೆ. ರವೀಶ್, ಮೇಲ್ವಿಚಾರಕರಾದ ಕೆಂಪೇಗೌಡ, ಮನೋಹರ್, ತಾಂತ್ರಿಕ ಸಿಬ್ಬಂದಿ ಮುತ್ತುರಾಜ್, ಚಂದ್ರಶೇಖರ್, ರಾಘವನ್, ದರ್ಶನ್ ಉಪಸ್ಥಿತರಿದ್ದು, ಸಮೀಕ್ಷೆ ಪೂರ್ಣಗೊಳಿಸಿದ ಇಬ್ಬರು ಶಿಕ್ಷಕರನ್ನು ಅಭಿನಂದಿಸಿ ಶುಭ ಕೋರಿದರು.
ಟಿಎಪಿಸಿಎಂಎಸ್ ನಿರ್ದೇಶಕ ಎ.ಕೃಷ್ಣರಿಗೆ ಅಭಿನಂದನೆಪಾಂಡವಪುರ:
ತಾಲೂಕು ಟಿಎಪಿಸಿಎಂಎಸ್ ನೂತನ ನಿರ್ದೇಶಕ, ಕುರುಬರ ಸಂಘದ ಜಿಲ್ಲಾ ನಿರ್ದೇಶಕರೂ ಆದ ಹಾರೋಹಳ್ಳಿ ಎ.ಕೃಷ್ಣರನ್ನು ಪಟ್ಟಣದಲ್ಲಿ ತಾಲೂಕು ಕನಕ ಯುವ ಬಳಗ, ಕುರುಬ ಸಮುದಾಯದ ಮುಖಂಡರು ಹಾಗೂ ಕೃಷ್ಣ ಅಭಿಮಾನಿ ಬಳಗದ ಸದಸ್ಯರು ಅಭಿನಂದಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಭಿನಂದನೆ ಸ್ವೀಕರಿಸಿದ ನಿರ್ದೇಶಕ ಎ.ಕೃಷ್ಣ ಮಾತನಾಡಿ, ಚುನಾವಣೆಯಲ್ಲಿ ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜು ಮಾರ್ಗದರ್ಶನದಲ್ಲಿ ಸ್ಪರ್ಧಿಸಿ ಷೇರುದಾರ ಮತದಾರ ಆಶೀರ್ವಾದದಿಂದ ಗೆಲುವು ಸಾಧಿಸಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲ ನಿರ್ದೇಶಕರ ಜತೆಗೂಡಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತೇನೆ. ನನಗೆ ಮತಕೊಟ್ಟು ಗೆಲುವಿಗೆ ಸಹಕರಿಸಿದ ಎಲ್ಲಾ ಮತದಾರ ಬಂಧುಗಳಿಗೆ, ಸ್ನೇಹಿತರು, ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.ಈ ವೇಳೆ ಕುರುಬ ಸಮುದಾಯದ ಮುಖಂಡರಾದ ಚಿಕ್ಕಮರಳಿ ಪಿ.ರಮೇಶ್, ಹಾರೋಹಳ್ಳಿ ಗಿರೀಗೌಡ, ಈರುಳ್ಳಿ ರಮೇಶ್, ಶ್ರೀಧರ್, ಶಿವಕುಮಾರ್, ಅರಳಕುಪ್ಪೆಮಹೇಶ್, ಕೆ.ಬೆಟ್ಟಹಳ್ಳಿ ಸ್ವಾಮಿ, ಎಲೆಕೆರೆ ರಾಜೇಶ್, ಚಿನಕುರಳಿ ಮನು, ಎರೆಗೌಡನಹಳ್ಳಿಲೋಕೇಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.