ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಬಿತ್ತಬೇಕು: ಡಾ.ಎಚ್.ಸಿ.ಮಹದೇವಪ್ಪ

KannadaprabhaNewsNetwork |  
Published : Jan 07, 2026, 01:15 AM IST
14 | Kannada Prabha

ಸಾರಾಂಶ

ಮೈಸೂರು ಜಿಲ್ಲೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಸ್ಥಾನ ಗಳಿಸಬೇಕು. ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಬೇಕು. ಹಾಗೂ ಸಂವಿಧಾನದ ಆಶಯಗಳಾದ ಸ್ವತಂತ್ರ, ಸಮಾನತೆ, ಭ್ರಾತೃತ್ವ ಭಾವನೆಗಳನ್ನು ಬೆಳೆಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನದ ಪೀಠಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ, ಉತ್ತಮ ಭಾರತದ ಪ್ರಜೆಗಳಾಗಿ ಹೊರಹೊಮ್ಮವಂತೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಗಳ ಜೊತೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬಿತ್ತಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ಮಹಾರಾಜ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆಯು ಮಂಗಳವಾರ ಆಯೋಜಿಸಿದ್ದ 2025- 26ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮೈಸೂರು ಜಿಲ್ಲೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಸ್ಥಾನ ಗಳಿಸಬೇಕು. ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಬೇಕು. ಹಾಗೂ ಸಂವಿಧಾನದ ಆಶಯಗಳಾದ ಸ್ವತಂತ್ರ, ಸಮಾನತೆ, ಭ್ರಾತೃತ್ವ ಭಾವನೆಗಳನ್ನು ಬೆಳೆಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನದ ಪೀಠಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ, ಉತ್ತಮ ಭಾರತದ ಪ್ರಜೆಗಳಾಗಿ ಹೊರಹೊಮ್ಮವಂತೆ ಮಾಡಬೇಕು ಎಂದರು.

ಮೈಸೂರು ಜಿಲ್ಲೆ ಕಲೆ, ಸಾಹಿತ್ಯ, ಪುರಾತತ್ವ, ಸಂಗೀತಗಳ ಉಗಮ ಸ್ಥಾನ. ನಾಲ್ವಡಿ ಕೃಷ್ಣಾರಾಜ ಒಡೆಯರ್ ಅವರು ತಮ್ಮ ಆಡಳಿತದ ಸಮಯದಲ್ಲೇ ಸಾಹಿತ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಅವರು ಸ್ವಾತಂತ್ರ್ಯಕ್ಕೆ ಮೊದಲು ಜನ ಜೀವನ ಹೇಗಿರಬೇಕು ಎಂದು ಅಡಿಪಾಯ ಹಾಕಿದರು. ಶಿಕ್ಷಣ, ಮೀಸಲಾತಿ, ಮಹಿಳಾ ಸಬಲೀಕರಣ, ಅರೋಗ್ಯ, ಕೃಷಿ, ತೋಟಗಾರಿಕೆ, ವಿದ್ಯುತ್, ರೈಲ್ವೆ, ಮೈಸೂರು ಪೇಪರ್ ಮಿಲ್, ಕನ್ನಡ ಸಾಹಿತ್ಯ ಪರಿಷತ್ ನಿರ್ಮಾಣ ಮಾಡಿದರು. ಹೀಗಾಗಿ, ವಿದ್ಯಾರ್ಥಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆಯನ್ನು ಆನಾವರಣಗೊಳಿಸಲಿಕ್ಕೆ ಉತ್ತಮ ವೇದಿಕೆಯಾಗಿದೆ. ಸೋಲು, ಗೆಲುವಿನ ಬಗ್ಗೆ ಚಿಂತಿಸಬೇಡಿ, ಪ್ರತಿಭೆಯ ಪ್ರದರ್ಶನ ನೀಡಿ ಒಂದಲ್ಲ ಒಂದು ದಿನ ಗೆಲುವು ಸಿಕ್ಕೆಸಿಗುತ್ತದೆ ಎಂದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ಸೋಮೇಗೌಡ ಮಾತನಾಡಿ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಶಾಲಾ, ತಾಲ್ಲೂಕು ಹಾಗೂ ಕ್ಲಸ್ಟರ್ ಮಟ್ಟದಲ್ಲಿ ಭಾಗವಹಿಸಿ ವಿಜೇತರಾಗಿ ಬಂದಿದ್ದಾರೆ. ಜಿಲ್ಲಾ ಮಟ್ಟಕ್ಕೆ ವಿದ್ಯಾರ್ಥಿಗಳು ತಲುಪಿರುವಿದು ಅವರ ಶ್ರಮದ ಪ್ರತಿಫಲ. ಶ್ರಮ ಹಾಗೂ ಅಭ್ಯಾಸ ದಿಂದ ಗುರಿ ತಲುಪಬಹುದು. ಸೋಮರಿತನವನ್ನು ಬಿಡಿ ಜ್ಞಾನವನ್ನು ತುಂಬಿಕೊಳ್ಳಿ ಎಂದು ಕರೆ ನೀಡಿದರು.

ನಂತರ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಉದಯಕುಮಾರ್, ಸಿ.ಆರ್.ನಾಗರಾಜಯ್ಯ, ಎಂ.ಆರ್. ಅನಂತರಾಜು ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ