ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ಶಿಕ್ಷಕರು ಶ್ರಮಿಸಬೇಕು

KannadaprabhaNewsNetwork |  
Published : Feb 24, 2026, 02:45 AM IST
ಚಿತ್ರ 2 | Kannada Prabha

ಸಾರಾಂಶ

ಹಿರಯೂರು ತಾಲೂಕಿನ ಹೂವಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಾನಿಗಳ ನೆರವಿನಿಂದ ಹೂವಿನಹೊಳೆ ಪ್ರತಿಷ್ಠಾನವು ನೂತನವಾಗಿ ನಿರ್ಮಿಸಿರುವ ಮೂರು ಶಾಲಾ ಕೊಠಡಿಗಳು ಹಾಗೂ ಕೌಶಲ್ಯ ಕೇಂದ್ರವನ್ನು ಸಚಿವ ಡಿ.ಸುಧಾಕರ್ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಹೂವಿನಹೊಳೆ ಗ್ರಾಮದ ಜನರ ಬಹುದಿನಗಳ ಬೇಡಿಕೆಯಾದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು 25 ಕೋಟಿ ರು. ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬೇಡಿಕೆಯನ್ನು ಶೀಘ್ರವೇ ಈಡೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ತಾಲೂಕಿನ ಹೂವಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಶಿಕ್ಷಣ ಇಲಾಖೆ, ಎಸ್‌ಡಿಎಂಸಿ, ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಹಕಾರ ಮತ್ತು ದಾನಿಗಳ ನೆರವಿನಿಂದ ಹೂವಿನಹೊಳೆ ಪ್ರತಿಷ್ಠಾನವು ನೂತನವಾಗಿ ನಿರ್ಮಿಸಿರುವ ಮೂರು ಶಾಲಾ ಕೊಠಡಿಗಳು ಹಾಗೂ ಕೌಶಲ್ಯ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣವೇ ಶಕ್ತಿಯಾಗಿದ್ದು ಪ್ರತಿಯೊಬ್ಬರ ಭವಿಷ್ಯ ಬೆಳಗಿಸುವ ದಾರಿದೀಪವಾಗಿದೆ.ಶಿಕ್ಷಣ ಇಲ್ಲವಾದರೆ ಭವಿಷ್ಯ ಶೂನ್ಯ. ಗ್ರಾಮೀಣ ಭಾಗದ ಈ ಹಳ್ಳಿಯಲ್ಲಿ ಪಟ್ಟಣ ಸೌಲಭ್ಯ ಹೊಂದಿರುವ ಹೈಟೆಕ್ ವ್ಯವಸ್ಥೆ ಹೊಂದಿದ ಶಾಲೆ ಆಗಿದೆ. ಈ ಸೌಲಭ್ಯಗಳ ಜೊತೆಗೆ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ಶಿಕ್ಷಕರು ಶ್ರಮಿಸಬೇಕು.ಹಳೆಯ ವಿದ್ಯಾರ್ಥಿಗಳು ಹುಟ್ಟಿದ ಊರಿನ ಋಣ ತೀರಿಸುವ ಕೆಲಸ ಮಾಡಿದ್ದಾರೆ. ಶಾಲೆಗೆ ಹೊಸ ಕಟ್ಟಡ, ಎಲ್ ಕೆಜಿ ಯುಕೆಜಿ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುತ್ತೇನೆ. ಶಾಸಕರ ಅನುದಾನವನ್ನು ನೀಡುತ್ತೇನೆ. ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಶಾಲೆ ಬಿಟ್ಟ ಮಕ್ಕಳು ಇರಬಾರದು ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಶಾಲೆಯ ಆಡಿಟೋರಿಯಂ ನಿರ್ಮಾಣಕ್ಕಾಗಿ 10 ಲಕ್ಷ ರು. ಅನುದಾನವನ್ನು ಎರಡು ಹಂತದಲ್ಲಿ ನೀಡಲಾಗುವುದು. ಸರ್ಕಾರದ ಸಹಕಾರ ಇಲ್ಲದೇ ಸ್ಥಳೀಯರು ದಾನಿಗಳ, ಸಾರ್ವಜನಿಕರ ಸಹಕಾರ ಪಡೆದು ಯಾವುದೇ ಖಾಸಗಿ ಶಾಲೆಗೂ ಮೀರಿದ ಸೌಲಭ್ಯ ಹೊಂದಿರುವ ರೀತಿಯಲ್ಲಿ ಶಾಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿ. ರಾಜ್ಯದಲ್ಲಿ ಸಿಎಸ್ಆರ್ ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿಗೆ ಚಿಂತನೆ ನಡೆಯುತ್ತಿದ್ದು ಕ್ಷೇತ್ರದಲ್ಲಿಯೂ ಶಾಲೆಗಳ ಅಭಿವೃದ್ದಿಗೆ ಶ್ರಮಿಸುತ್ತೇವೆ. ಗ್ರಾಮಗಳಲ್ಲಿ ರಾಜಕಾರಣ ಬದಿಗೊತ್ತಿ ಶಾಲೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಇಒ ಸಿಎಂ.ತಿಪ್ಪೇಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಟಿ. ಶ್ರೀನಿವಾಸ್, ಕನ್ನಡ ಕೋಗಿಲೆ ವಿಜೇತ ಖಾಸಿಂ ಅಲಿ,ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್, ಎಸ್ ಡಿಎಂಸಿ ಅಧ್ಯಕ್ಷ ರಂಗಸ್ವಾಮಿ, ಬಿಸಿಎಂ ಅಧಿಕಾರಿ ಎಂ ಶಿವಕುಮಾರ್, ಮುಖ್ಯಶಿಕ್ಷಕ ಬಿ.ಆರ್.ಶ್ರೀನಿವಾಸ್, ಮುಖ್ಯ ಶಿಕ್ಷಕಿ ಜಯಮ್ಮ, ಯುವ ಮುಖಂಡ ರಾಘವೇಂದ್ರ, ಗ್ರಾಮಸ್ಥರಾದ ರಂಗಸ್ವಾಮಿ, ಯಶವಂತ್ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಕನ್ನಡ ಪರಿಚಾರಕ ಕನ್ನಡವೇ ಸತ್ಯ ರಂಗಣ್ಣ ಬೆಂಗಳೂರು, ಪತ್ರಕರ್ತ ಹಾಗೂ ಉಪನ್ಯಾಸಕ ಈ.ಪ್ರಕಾಶ್, ಮಾಲತೇಶ್ ಅರಸ್, ವೀರುಪಾಟೀಲ್ ಸಿರಾ, ಸಾಮಾಜಿಕ ಸೇವಾ ಕ್ಷೇತ್ರದಿಂದ ನಿರಂಜನಮೂರ್ತಿ.ಬಿ, ಕುಮಾರಿ ಅಕ್ಕ ಅನು, ರಾಘವೇಂದ್ರ ಪದ್ಮಶಾಲಿ, ಮಹೇಶ್‌ ಮಾತೃಭೂಮಿ, ನಾಯ್ಕಲ್‌ದೊಡ್ಡಿ ಚಂದ್ರಶೇಖರ್, ಎಸ್.ಮಂಜುನಾಥ್ ಅವರಿಗೆ ದಶಮಾನೋತ್ಸವ ಗೌರವ ಪ್ರಶಸ್ತಿ ನೀಡಿ ಗೌರವಿಸ ಲಾಯಿತು.( ಬಾಕ್ಸ್ )ಹೂವಿನಹೊಳೆ ಪ್ರತಿಷ್ಠಾನ ಅಧ್ಯಕ್ಷ ನಂದಿ ಜೆ ಹೂವಿನಹೊಳೆ ಮಾತನಾಡಿ ಕಲಿಸಿದ ಶಾಲೆ ಹಾಗೂ ಹುಟ್ಟಿದ ಊರಿನ ಋಣ ತೀರಿಸುವ ಕೆಲಸ ಪ್ರತಿಯೊಬ್ಬರ ಜವಾಬ್ದಾರಿ. ಆ ನಿಟ್ಟಿನಲ್ಲಿ ಶಾಲೆ ದತ್ತು ಪಡೆದು ಅಭಿವೃಧ್ದಿ ಮಾಡಿದ್ದು ಮಕ್ಕಳು ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು. ಮುಂದಿನ 2028 ರ ವೇಳೆಗೆ ಶಾಲೆಯ ಎಲ್ಲಾ ಕೊಠಡಿಗಳನ್ನು ಆಧುನೀಕರಣಗೊಳಿಸಿ ಹೈಟೆಕ್ ಶಾಲೆಯನ್ನಾಗಿಸುವ ಗುರಿ ಹೊಂದಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯವಸಾಯದಲ್ಲಿ ತಂತ್ರಜ್ಞಾನದ ಅಳವಡಿಕೆ ಅವಶ್ಯ: ಚೇತನಾ ಪಾಟೀಲ
ಸಿಎಂ ಜೊತೆ ಚರ್ಚಿಸಿ ವಿವಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಸಚಿವ ಡಾ. ಎಂ.ಸಿ. ಸುಧಾಕರ್