ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂನಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹಾಗೂ ಸಹ ಶಿಕ್ಷಕರ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕುಷ್ಟಗಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕಿನ ಶಿಕ್ಷಕರು ಶ್ರಮವಹಿಸಬೇಕಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಕಾರ್ಯಾಲಯ ಸಮನ್ವಯಾಧಿಕಾರಿಗಳ ಸಹಯೋಗದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹಾಗೂ ಸಹ ಶಿಕ್ಷಕರ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕುಷ್ಟಗಿ ತಾಲೂಕಿನ ಫಲಿತಾಂಶ ಉತ್ತಮವಾಗಿ ಇರುವಂತೆ ನೋಡಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಶಾಲೆಗೆ ಉತ್ತಮ ಫಲಿತಾಂಶ ಬರಬೇಕೆನ್ನುವ ಮನೋಭಾವನೆ ಶಿಕ್ಷಕರಲ್ಲಿರಬೇಕು. ಈ ಬಾರಿ ಫಲಿತಾಂಶದಲ್ಲಿ ಉತ್ತಮವಾಗಿ ಬದಲಾವಣೆ ತರಬೇಕಿದೆ. ಪ್ರತಿ ವರ್ಷ ಕೊಪ್ಪಳ ಜಿಲ್ಲೆ ಫಲಿತಾಂಶದ ಪಟ್ಟಿಯಲ್ಲಿ ಕೆಳಗಿನಿಂದ ನೋಡುವಂತಹ ಪರಿಸ್ಥಿತಿ ಇದೆ. ಇದು ಬದಲಾಗಬೇಕಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಮಾದರಿಯಲ್ಲಿ ಮೇಲ್ಮಟ್ಟದಲ್ಲಿ ನಮ್ಮ ಜಿಲ್ಲೆ ಸ್ಥಾನ ಗಳಿಸಬೇಕಿದೆ ಎಂದರು.
ಡಿಡಿಪಿಐ ಸೋಮಶೇಖರಗೌಡ ಪಾಟೀಲ ಮಾತನಾಡಿ, ಎಸ್‌ಎಸ್‌ಎಲ್‌ಸಿ ನಾಲ್ಕು ಹಂತದ ಪೂರಕ ಪರೀಕ್ಷೆಯಲ್ಲಿ ಮೊದಲ ಪರೀಕ್ಷೆಗೂ, 2ನೇ ಪರೀಕ್ಷೆಗೂ ಶೇ. 13ರಷ್ಟು ಮಾತ್ರ ಹೆಚ್ಚಳ ಕಂಡಿದೆ. ಬೇಸಿಕ್ ಹಂತದಲ್ಲಿ ಸುಧಾರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೆಲವು ದಿನಗಳು ಬಾಕಿ ಉಳಿದಿದ್ದು, ಗುರುತಿಸಿದ ಸುಮಾರು 800 ವಿದ್ಯಾರ್ಥಿಗಳು ಕಡ್ಡಾಯವಾಗಿ ತೇರ್ಗಡೆಯಾಗಬೇಕಿದೆ. ಅವರು ಅನುತ್ತೀರ್ಣ ಆಗುವ ಸಾಧ್ಯತೆ ಇರುವ ವಿಷಯದ ಕಡೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಬಿಇಒ ಉಮಾದೇವಿ ಬಸಾಪುರ ಮಾತನಾಡಿ, ಪ್ರಸಕ್ತ ವರ್ಷದಲ್ಲಿ 4461 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 4244 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ನಾಲ್ಕು ಹಂತದ ಪೂರಕ ಪರೀಕ್ಷೆ, ನೀಲನಕ್ಷೆ, 29 ಅಂಶದ ಕಾರ್ಯಕ್ರಮ, 40+ ಮಿಷನ್, ಮಾದರಿ ಪ್ರಶ್ನೆಪತ್ರಿಕೆ, ಗುಂಪು ಅಧ್ಯಯನ ಸೇರಿದಂತೆ ಅನೇಕ ಸುಧಾರಣಾ ಕ್ರಮಗಳಿಂದ ಫಲಿತಾಂಶ ಶೇ. 95ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಎಂ.ಎಂ. ಗೊಣ್ಣಾಗರ, ನೀಲಪ್ಪ ಹೊಸಗೌಡ್ರು, ಫಕೀರಪ್ಪ ಚಳಗೇರಿ, ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಮೆಣೇದಾಳ ಇದ್ದರು. ಶಿಕ್ಷಕ ಜೀವನಸಾಬ ಬಿನ್ನಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.