ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಲಿ-ಸಭಾಪತಿ ಹೊರಟ್ಟಿ

KannadaprabhaNewsNetwork |  
Published : Feb 18, 2026, 02:15 AM IST
ಹಾವೇರಿಯ ಜಿಲ್ಲಾ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಹಾಗೂ ಮುಖ್ಯ ಶಿಕ್ಷಕರೊಂದಿಗೆ ಸಂವಾದವನ್ನು ಬಸವರಾಜ ಹೊರಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿಕ್ಷಕರು ಯಾವುದೇ ಒತ್ತಡಕ್ಕೆ ಒಳಗಾಗದೆ ನೆಮ್ಮದಿಯಿಂದ ಮತ್ತು ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ಅತ್ಯುತ್ತಮ ಪಾಠ ಪ್ರವಚನ ಸಾಧ್ಯವಾಗುತ್ತದೆ. ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಶ್ರದ್ಧೆ ಮತ್ತು ಶಿಸ್ತಿನಿಂದ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹಾವೇರಿ: ಶಿಕ್ಷಕರು ಯಾವುದೇ ಒತ್ತಡಕ್ಕೆ ಒಳಗಾಗದೆ ನೆಮ್ಮದಿಯಿಂದ ಮತ್ತು ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ಅತ್ಯುತ್ತಮ ಪಾಠ ಪ್ರವಚನ ಸಾಧ್ಯವಾಗುತ್ತದೆ. ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಶ್ರದ್ಧೆ ಮತ್ತು ಶಿಸ್ತಿನಿಂದ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕದಿಂದ ಮಂಗಳವಾರ ನಗರದ ಜಿಲ್ಲಾ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ, ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಮತ್ತು ಮುಖ್ಯ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಂಗ್ಲ ಭಾಷಾ ಶಿಕ್ಷಣವನ್ನು ಕಲಿಸಲು ಹೋದರೆ ಕನ್ನಡ ಮಾಧ್ಯಮ ವ್ಯವಸ್ಥೆಯೇ ಉಳಿಯಲ್ಲ. ಸರ್ಕಾರ ಮಾಡುವ ಕೆಲವು ತಪ್ಪು ಪ್ರಯೋಗಗಳಿಗೆ ಶಾಲಾ ಮಕ್ಕಳು ಬಲಿಯಾಗುತ್ತಿರುವುದು ವಿಷಾದದ ಸಂಗತಿ. ಈ ವರ್ಷ ಶೇ.33 ಅಂಕ ಪಡೆದರೆ ಎಸ್ಸೆಸ್ಸೆಲ್ಸಿ ಮಕ್ಕಳು ಪಾಸ್ ಆಗುತ್ತಾರೆಂದು ಸರ್ಕಾರದ ನಿಯಮ. ಪ್ರತಿ ವಿಷಯದಲ್ಲಿ 20 ಆಂತರಿಕ ಅಂಕ, 12 ಬಾಹ್ಯ ಅಂಕ ಬಂದರೆ, ಇನ್ನೊಂದು ಅಂಕ ಎಲ್ಲಾದರೂ ಹಾಕಿ ಉತ್ತೀರ್ಣ ಮಾಡ್ತಾರೆ. ಆದರೆ ಮುಂದೆ ಆ ಮಗು ಏನಾಗುತ್ತೆ ಅನ್ನೋದು ಗೊತ್ತಾಗಲ್ಲ. ಇಲಾಖೆಗಳು ಶೇ.100ರಷ್ಟು ಫಲಿತಾಂಶಕ್ಕೆ ಒತ್ತಡ ಹಾಕುತ್ತವೆ, ಆದರೆ ಫಲಪ್ರದ ಆಗುವುದಿಲ್ಲ ಎಂದರು.ಯಾವುದೇ ಸರ್ಕಾರ ಬರಲಿ, ಮೊದಲು ಎಲ್ಲ ಪ್ರಾಥಮಿಕ ಶಾಲೆಗಳಿಗೆ ವರ್ಗವಾರು ಸಮರ್ಪಕ ಶಿಕ್ಷಕರನ್ನು ಕೊಡಬೇಕು. ಮೂಲ ಪ್ರಾಥಮಿಕ ಶಿಕ್ಷಣ ಗಟ್ಟಿಯಾಗಿದ್ದರೆ, ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಗಮವಾಗಿ ಪಾಸ್ ಮಾಡಿಕೊಳ್ಳಬಹುದು. ಸರಿಯಾಗಿ ಪಾಠ ಮಾಡಲಿಲ್ಲ ಅಂದ್ರೆ, ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ಇರುತ್ತದೆ. ಜತೆಗೆ ಶಿಕ್ಷಕರಿಗೆ ನೆಮ್ಮದಿಯಿಂದ ಪಾಠ ಮಾಡುವ ಅವಕಾಶ ಕಲ್ಪಿಸಬೇಕು. ಸರ್ಕಾರಿ ಶಾಲೆ, ಅನುದಾನ ಹಾಗೂ ಅನುದಾನ ರಹಿತ ಎಲ್ಲ ಶಾಲೆಗಳಲ್ಲೂ ಸಮಸ್ಯೆಗಳು ಇರುತ್ತವೆ. ಆ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮಕ್ಕಳ ಫಲಿತಾಂಶ ಸುಧಾರಣೆಗೆ ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.ಧಾರವಾಡ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷ ಪ್ರಾರಂಭವಾದಾಗಿನಿಂದ ಮಕ್ಕಳಿಗೆ ಸೇತು ಬಂಧ ಪರೀಕ್ಷೆ, ಘಟಕ ಪರೀಕ್ಷೆ, ಸರಣಿ, ಪೂರ್ವ ಸಿದ್ಧತಾ ಪರೀಕ್ಷೆ ಹೀಗೆ ನಡೆಸಿಕೊಂಡು ಬರುತ್ತಿದೆ. 29 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇವೆ. ಇಲಾಖೆ ಮಾರ್ಗದರ್ಶನದಂತೆ ಮಿಶನ್-40 ಅಂಕಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿ, ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ನೂರಕ್ಕೆ ನೂರರಷ್ಟು ಸಾಧಿಸುವ ನಿಟ್ಟಿನಲ್ಲಿ ಪರಿಶ್ರಮ ಹಾಕಲಾಗುತ್ತಿದೆ. ಮಾರ್ಚ್ 18ರಿಂದ ಪರೀಕ್ಷೆ ಆರಂಭವಾಗಲಿದ್ದು, ಸರ್ಕಾರ ಹಾಗೂ ಇಲಾಖೆ ಆಶಯದಂತೆ ಫಲಿತಾಂಶ ಕೊಡುತ್ತೇವೆ ಎಂದರು.ಈ ವೇಳೆ ಧಾರವಾಡದ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಈಶ್ವರ ನಾಯಕ್ ಮಾತನಾಡಿದರು. ಡಿಡಿಪಿಐ ಮೋಹನ್ ದಂಡಿನ, ಧಾರವಾಡದ ಉಪ ನಿರ್ದೇಶಕ ಗಿರೀಶ ಪದಕಿ, ಡಯಟ್ ಪ್ರಾಚಾರ್ಯ ಝೆಡ್.ಎಂ. ಖಾಜಿ, ಡಿವೈಪಿಸಿ ನಿರಂಜನ ಮೂರ್ತಿ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಆರ್.ಎಚ್. ಬೆಟ್ಟೆಳ್ಳೇರ, ಅಕ್ಷರ ದಾಸೋಹ ಅಧಿಕಾರಿ ಎಂ.ಆರ್. ಪಾಟೀಲ, ಬಿಇಒಗಳಾದ ಎಸ್.ಜಿ. ಕೋಟಿ, ಎಂ.ಎಫ್. ಬಾರ್ಕಿ, ಎಂ.ಬಿ. ಅಂಬಿಗೇರ, ಎನ್. ಶ್ರೀಧರ, ಆರ್.ವಿ. ಚಿನ್ನಿಕಟ್ಟಿ, ಎಂ.ಎಚ್. ಪಾಟೀಲ, ಶ್ಯಾಮಸುಂದರ ಅಡಿಗ, ಮಲ್ಲಿಕಾರ್ಜುನ ಶಾಂತಗಿರಿ, ಬಿ.ಎಂ. ಬೇವಿನಮರದ, ಎನ್.ಎಂ. ಕುಂದೂರು ಇತರರು ಇದ್ದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಕೈಗೊಂಡ ಹಲವು ಕಾರ್ಯಗಳಿಗೆ ಕೈ ಜೋಡಿಸಿದ್ದೇವೆ. ಜಿಲ್ಲೆಯಲ್ಲಿ ಮೂರನೇ ಹಂತದ ಪೂರ್ವ ಸಿದ್ಧತಾ ಪರೀಕ್ಷೆಗಳು ಮುಗಿಯುತ್ತಿವೆ. ಈ ಸಲ ಶೇ.75ಕ್ಕಿಂತಲೂ ಹೆಚ್ಚು ಫಲಿತಾಂಶ ಸುಧಾರಣೆ ಮಾಡುತ್ತೇವೆ. ರಾಜ್ಯದಲ್ಲಿ ಟಾಪ್ 5ನೇ ಸ್ಥಾನದಲ್ಲಿ ಹಾವೇರಿ ಜಿಲ್ಲೆಯನ್ನು ತರುವ ನಿಟ್ಟಿನಲ್ಲಿ ಪರಿಶ್ರಮ ಹಾಕಲಾಗುತ್ತಿದೆ ಎಂದು ಜಿಪಂ ಉಪಕಾರ್ಯದರ್ಶಿ ಡಾ. ಪುನೀತ ಹೇಳಿದರು.ಜಿಲ್ಲೆಯಲ್ಲಿ 471 ಪ್ರೌಢಶಾಲೆಗಳಿದ್ದು, ಸುಮಾರು 23,358 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. 81 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಎಲ್ಲಾ ಶಾಲೆಗಳಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತದೆ. ಪ್ರತಿ ಶಾಲೆಗೆ ನೋಡೆಲ್ ಅಧಿಕಾರಿ ನೇಮಿಸಿ, ಹಂತ ಹಂತವಾಗಿ ಮಾರ್ಗದರ್ಶನ ಕೊಡಿಸಲಾಗುತ್ತಿದೆ. ಕಡಿಮೆ ಅಂಕ ಪಡೆದ ಮಕ್ಕಳಿಗೆ ಹೆಚ್ಚಿನ ಮುತುವರ್ಜಿ ವಹಿಸಿ, ಮಿಶನ್-40ರ ಅಡಿಯಲ್ಲಿ ಉತ್ತೀರ್ಣರಾಗಲಿಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ್ ದಂಡಿನ ಹೇಳಿದರು.ಅನುದಾನಿತ ಶಾಲೆಗಳಿಗೆ ವೈದ್ಯಕೀಯ ಸೌಲಭ್ಯ, ಅತಿಥಿ ಶಿಕ್ಷಕರ ನೇಮಕ, ಜ್ಯೋತಿ ಸಂಜೀವಿನಿ ಅನುಷ್ಠಾನ, ದ್ವಿಭಾಷಾ ನೀತಿ, ಓಪಿಎಸ್ ಪದ್ಧತಿ, ತರಗತಿಯಲ್ಲೇ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಅಧಿಕಾರಿಗಳು ಬೈಯುವುದು ಹೀಗೆ ವಿವಿಧ ವಿಷಯಗಳ ಕುರಿತು ಶಿಕ್ಷಕರು ಸಂವಾದದಲ್ಲಿ ಸಭಾಪತಿಯವರಿಗೆ ಪ್ರಶ್ನೆ ಮಾಡಿದರು. ಶಿಕ್ಷಕರ ನೇಮಕಾತಿ ಹಾಗೂ ಇಲಾಖೆ ಅಧಿಕಾರಿಗಳು ತರಗತಿಯಲ್ಲಿ ಮಕ್ಕಳೆದುರು ಬೈಯ್ಯದಂತೆ ಕೂಡಲೇ ಆದೇಶ ಹೊರಡಿಸಲು ಸರಕಾರಕ್ಕೆ ಸೂಚಿಸಲಾಗುವುದು. ಇನ್ನುಳಿದ ಪ್ರಶ್ನೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮಸಭೆ ಅಭಿಪ್ರಾಯ ಯೋಜನೆಯಾಗಿ ಜಾರಿಯಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ
ಮಕ್ಕಳಲ್ಲಿ ಧಾರ್ಮಿಕ ಶ್ರೀಮಂತಿಕೆ ಬೆಳೆಸಲಿ: ಗವಿಸಿದ್ದೇಶ್ವರ ಶ್ರೀ