ಹರಪನಹಳ್ಳಿ: ಸರಿಯಾಗಿ ಶಾಲೆಗೆ ಹೋಗದೇ ಸಂಘಟನೆಯಲ್ಲಿ ಗುರುತಿಸಿಕೊಂಡು ರಾಜಕೀಯ ಮಾಡುವ ಶಿಕ್ಷಕರು ತಮ್ಮ ವೃತ್ತಿಗೆ ರಾಜೀನಾಮೆ ಕೊಟ್ಟು ಬನ್ನಿ. ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗವುದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಎಚ್.ಲೇಪಾಕ್ಷಪ್ಪ, ಈಗಾಗಲೇ ಅಂತಹ ಶಿಕ್ಷಕರ ಬಗ್ಗೆ ಮಾಹಿತಿ ಪಡೆದು ಅವರಿಗೆ ತಿಳಿವಳಿಕೆ ಹೇಳಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡಿ ಎಂದು ಎಚ್ಚರಿಕೆ ಕೊಟ್ಟಿದ್ದೇವೆ. ಇಷ್ಟೆಲ್ಲ ಮಾಡಿದರೂ ಕೆಲವರು ಬಿಇಒ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಆಪಾದನೆ ಮಾಡುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದರು. ಆಗ ಶಾಸಕರು ನೀವು ಅಂತಹ ಶಿಕ್ಷರಿಗೆ ನೋಟಿಸ್ ಕೊಡಿ, ಮುಂದಿನ ಕ್ರಮ ನಾನು ಕೈಗೊಳ್ಳುತ್ತೇನೆ ಎಂದರು.
ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಈಗಾಗಲೇ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಮೊದಲ ಹಂತದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 4386 ವಿದ್ಯಾರ್ಥಿಗಳು ಹಾಜರಾಗಿದ್ದು, 3856 ತೇರ್ಗಡೆ ಹೊಂದಿದ್ದಾರೆ. ಈ ಬಾರಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಲಾಗವುದು ಎಂದು ಬಿಇಒ ತಿಳಿಸಿದರು.ಶಾಸಕರ ಅವಿರತ ಶ್ರಮದಿಂದ ತಾಲೂಕಿಗೆ ಹೊಸದಾಗಿ ದುಗ್ಗಾವತಿ, ಗೋವೆರಹಳ್ಳಿ ಶಿವಪುರ ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾಗಿವೆ ಎಂದು ಬಿಇಒ ಎಚ್.ಲೇಪಾಕ್ಷಪ್ಪ ಸಭೆಯ ಗಮನಕ್ಕೆ ತಂದರು.
ಕಾಮಗಾರಿ ಬಾಕಿ:
ತಾಲೂಕಿನ ಹಲುವಾಗಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ವೈದ್ಯರು ಇರುವುದಿಲ್ಲ ಎಂಬ ದೂರುಗಳಿವೆ. ಹರಪನಹಳ್ಳಿ ಬಿಟ್ಟರೆ ಹಲುವಾಗಲು ದೊಡ್ಡ ಊರು 22 ಹಳ್ಳಿಗಳ ಜನರು ಬರುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಆರೋಗ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಕೃಷಿ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಮೀನುಗಾರಿಕೆ, ರೇಷ್ಮೆ, ಆರಣ್ಯ ಲೋಕಪಯೋಗಿ ನಗರಸಭೆ, ಸಾರಿಗೆ, ಪಿಆರ್‌ಇಡಿ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂದಿಸಿದಂತೆ ವರದಿ ಮಂಡಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.