ಕೊಪ್ಪಳ: ಮಹಿಳೆಯರು ಒಳ್ಳೆಯವರಾಗಿರುವುದು ತಪ್ಪಲ್ಲ, ಆದರೆ ಅದಕ್ಕೂ ಹೆಚ್ಚು ಧೈರ್ಯವಂತರಾಗಿರಬೇಕು. ತಮಗಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ಇರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.
ಉದ್ಯೋಗಸ್ಥ ಅಥವಾ ಕೌಟುಂಬಿಕ ವಲಯಗಳಲ್ಲಿರುವ ಬಹುತೇಕ ಮಹಿಳೆಯರು ತಮ್ಮ ಮೇಲೆ ಉಂಟಾಗುವ ದೈಹಿಕ ಹಲ್ಲೆ, ಲೈಂಗಿಕ ದೌರ್ಜನ್ಯದಂತ ಘಟನೆಗಳಲ್ಲಿ ಮೌನದಿಂದ ಇದ್ದರೆ ಪರಿಸ್ಥಿತಿ ಸುಧಾರಿಸಬಹುದು ಎಂಬ ಭಾವನೆ ಇರುತ್ತದೆ. ಅಥವಾ ತಮ್ಮ ಮೇಲಿನ ದೌರ್ಜನ್ಯದ ಕುರಿತು ಯಾರಿಗಾದರೂ ಹೇಳಿದಲ್ಲಿ ಸಮಾಜ ತಮ್ಮನ್ನು ಕೀಳಾಗಿ ನೋಡಬಹುದು ಎಂಬ ಕೀಳರಿಮೆಯೂ ಇರುತ್ತದೆ. ಕೆಲವೊಮ್ಮೆ ಮಾನ, ಪ್ರಾಣದ ಭಯದಿಂದಲೂ ದೌರ್ಜನ್ಯದ ಕುರಿತು ಮಹಿಳೆ ಎಲ್ಲಿಯೂ ಧ್ವನಿ ಎತ್ತುವುದಿಲ್ಲ. ಇದರಿಂದ ಮಹಿಳೆಯ ಸಮಸ್ಯೆಗೆ ಪರಿಹಾರ ದೊರೆಯುವ ಬದಲು ಇನ್ನಷ್ಟು ನೋವು, ದೌರ್ಜನ್ಯ ಹೆಚ್ಚಾಗುತ್ತಾ ಹೋಗುತ್ತದೆ. ಮಹಿಳೆಯರು ಮೂಲತಃ ಭಾವನಾತ್ಮಕ ಜೀವಿಗಳು. ಇದನ್ನೇ ಬಂಡವಾಳವಾಗಿಸಿಕೊಂಡು ಕೆಲವು ವಿಕೃತ ಮನಸ್ಸಿನವರು ಮಹಿಳೆಯ ಮೇಲೆ ದೌರ್ಜನ್ಯವೆಸುಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ಒಳ್ಳೆಯತನ, ಭಾವನೆ, ಇತರೆ ಹಿಂಜರಿಕೆ ಬಿಟ್ಟು ಧೈರ್ಯದಿಂದ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ನಮ್ಮ ಒಳ್ಳೆಯತನ ದೌರ್ಬಲ್ಯವಾಗಬಾರದು ಎಂದು ಹೇಳಿದರು.
ಮಹಿಳೆಯರು ಆತ್ಮವಿಶ್ವಾಸದಿಂದ ಹಾಗೂ ಭಯವಿಲ್ಲದೆ ಕೆಲಸ ಮಾಡಲು ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದು ಪ್ರತಿಯೊಂದು ಸಂಸ್ಥೆಯ ಕರ್ತವ್ಯವಾಗಿದೆ. ಈ ಹಿನ್ನೆಲೆ ಪೋಶ್ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಅಗತ್ಯ. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಂತಹ ದೂರು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸ್ಥಳೀಯ ಮತ್ತು ಆಂತರಿಕ ದೂರು ನಿವಾರಣಾ ಸಮಿತಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಿತಿಯ ಸದಸ್ಯರು ಕಾಯ್ದೆಯ ನಿಯಮ, ತನಿಖಾ ವಿಧಾನಗಳು ಹಾಗೂ ಮಹಿಳೆಯರಿಗೆ ನ್ಯಾಯ ಒದಗಿಸುವ ಕ್ರಮಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು. ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯದ ಕುರಿತು ಮುಕ್ತವಾಗಿ ದೂರು ಸಲ್ಲಿಸಲು ಧೈರ್ಯ ಹೊಂದಬೇಕು. ಯಾವುದೇ ಸಂಸ್ಥೆಯಲ್ಲಿ ಪೋಶ್ ಕಾಯ್ದೆಯನ್ವಯ ಸಮಿತಿ ಕಡ್ಡಾಯವಾಗಿ ರಚಿಸಿ ಅದರ ಕಾರ್ಯ ಚಟುವಟಿಕೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮಹಿಳೆಯರು ಕೆಲಸ ಮಾಡುವ ಸ್ಥಳ ಸುರಕ್ಷಿತವಾಗಿದ್ದು, ಸಂತೋಷದ ವಾತಾವರಣ ಹೊಂದಿದ್ದರೆ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ. ಮಹಿಳೆಯರು ಮಾನಸಿಕ, ದೈಹಿಕ ಒತ್ತಡ ಅಥವಾ ದೌರ್ಜನ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಸಂಸ್ಥೆಗಳ ಜವಾಬ್ದಾರಿ ಎಂದು ಹೇಳಿದರು.ಸರ್ಕಾರಿ ಅಥವಾ ಖಾಸಗಿ ಯಾವುದೇ ಕಚೇರಿ, ಸಂಸ್ಥೆಗಳಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ನೆಮ್ಮದಿಯ ವಾತಾವರಣ ಇರಬೇಕು. ಮಹಿಳೆ ಸ್ವತಂತ್ರವಾಗಿ ಕೆಲಸ ಮಾಡಲು ಅವಳಲ್ಲಿ ಸುರಕ್ಷತೆಯ ಭಾವ ಮೂಡಬೇಕು. ಆಗ ಮಾತ್ರ ಅವಳಲ್ಲಿ ಉತ್ತಮ ಕಾರ್ಯಕ್ಷಮತೆ ಮೂಡಲು ಸಾಧ್ಯ ಮತ್ತು ಕೆಲಸದಲ್ಲಿ ಹೆಚ್ಚು ತಲ್ಲೀನತೆ ಹೊಂದಿ ಗುಣಮಟ್ಟದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮಾನಹಾನಿ, ಮಾನಸಿಕ ಹಿಂಸೆಯಂತಹ ದೌರ್ಜನ್ಯಗಳಿಗೆ ಪ್ರಸ್ತುತ ಕಾನೂನಿನಲ್ಲಿ ಹಲವಾರು ಪರಿಹಾರ ಕ್ರಮಗಳಿವೆ. ದೌರ್ಜನ್ಯ ವೆಸಗಿದವರ ಮೇಲೆ ಸೂಕ್ತ ಸಾಕ್ಷಾಧಾರಗಳೊಂದಿಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ, ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಸಹ ನ್ಯಾಯಾಲಯ ನೀಡುತ್ತದೆ ಎಂದು ತಿಳಿಸಿದರು.
ಜಿಪಂ ಸಿಇಒ ವರ್ಣಿತ್ ನೇಗಿ, ಡಿಎಫ್‌ಒ ನಿರ್ಮಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಆಯೋಗದ ಸದಸ್ಯ ಕಾರ್ಯದರ್ಶಿ ರೂಪಾ, ಸಂಪನ್ಮೂಲ ವ್ಯಕ್ತಿ ಚಂದ್ರಿಕಾ ಟಿ.ಎಸ್. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.